

ವಿಜಯವಾಣಿ ಸುದ್ದಿಜಾಲ ಗದಗ
ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆಯಲ್ಲಿ ಬಸವರಾಜ ಬೊಮ್ಮಾಯಿ ಹಣ ಪಡೆದಿದ್ದಾರೆ. ಟಿಕೆಟ್ ಮಾರಾಟ ಮಾಡಿದ್ದಾರೆ ಎಂಬ ಮಾಜಿ ಶಾಸಕ ರಾಮಣ್ಣ ಲಮಾಣಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಣ್ಣ ಲಮಾಣಿ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಬಿಜೆಪಿ ರಾಮಣ್ಣ ಲಮಾಣಿ ಅವರಿಗೆ ಮೂರು ಬಾರಿ ವಿಧಾನಸಭಾ ಟಿಕೆಟ್ ನೀಡಿತ್ತು. ಒಂದು ಬಾರಿ ಜಿಪಂ ಟಿಕೆಟ್ ನೀಡಿತ್ತು. ಬಿಜೆಪಿ ಪಕ್ಷದಿಂದಲೇ ರಾಮಣ್ಣ ಅವರು ರಾಜಕೀಯ ಉತ್ತುಂಗ ಕಂಡಿದ್ದಾರೆ. ಬಿಜೆಪಿಯಲ್ಲಿ ದುಡ್ಡು ಪಡೆದು ಟಿಕೆಟ್ ನೀಡುವ ಅವಕಾಶವೇ ಇಲ್ಲ. ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಹತಾಶೆಗೊಂಡು, ರಾಜಕೀಯ ದುರುದ್ದೇಶದಿಂದ ಈ ರೀತಿ ಹೇಳಿಕೆ ನೀಡಿ, ಸುಳ್ಳು ಆರೋಪ ಮಾಡಿರುವುದು ಖಂಡನೀಯ. ರಾಮಣ್ಣ ಲಮಾಣಿ ಅವರು ಸ್ವಭಾತಹ ಮುಗ್ಧರಾಗಿದ್ದು, ಸ್ವಂತ ಆಲೋಚನೆ ಮಾಡುವ ಶಕ್ತಿಯಿಲ್ಲ. ಎಲ್ಲವನ್ನು ಸುಲಭವಾಗಿ ನಂಬುತ್ತಾರೆ. ಈ ಹಿಂದೆ ಬಿಜೆಪಿ ಟಿಕೆಟ್ ಪಡೆದು ಶಾಸಕರಾಗಿದ್ದರು. ಅವರೂ ಈ ಹಿಂದೆ ಹೇಗೆ ಟಿಕೆಟ್ ಪಡೆದಿದ್ದರು ಎಂಬುದರ ಅರಿವು ಅವರಿಗಿದೆ. ಆದ್ದರಿಂದ ಬೇರೆಯವರ ಮಾತು ಕೇಳಿ ಆರೋಪ ಮಾಡುವುದನ್ನು ಕೈಬಿಡಬೇಕು ಎಂದು ಹೇಳಿದರು.
ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಬಿಜೆಪಿಯಲ್ಲಿ ಗೆಲವಿನ ಅಭ್ಯಥಿರ್ ಕುರಿತು ಸಮೀೆ ನಡೆಸಿ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ. ಅದರಲ್ಲೂ ವಿಧಾನಸಭಾ ಚುನಾವಣೆ ಸಮಯದಲ್ಲಿ ಮೊದಲ ಪಟ್ಟಿಯಲ್ಲೇ ಶಿರಹಟ್ಟಿ ಮತಕ್ಷೇತ್ರದಲ್ಲಿ ನನ್ನ ಹೆಸರೇ ಘೋಷಣೆ ಆಗಿತ್ತು ಎಂದ ಅವರು, ಎಸ್ಸಿ ಮೀಸಲಾಗಿತುವ ಕ್ಷೇತ್ರ ಆಗಿರುವ ಶಿರಹಟ್ಟಿ ಮತಕ್ಷೇತ್ರ ಹಿಂದುಳಿಯಲು ಮಾಜಿ ಶಾಸಕ ರಾಮಣ್ಣ ಲಮಾಣಿ ಅವರೇ ಕಾರಣರಾಗಿದ್ದಾರೆ ಎಂದು ಆರೋಪಿಸಿದರು. ಸೋಲಿನಿಂದ ರಾಮಣ್ಣ ಲಮಾಣಿ ಅವರು ಹತಾಶೆಯಿಂದ ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಲೋಕಸಭೆ ಬಿಜೆಪಿ ಅಭ್ಯಥಿರ್ ಬಸವರಾಜ ಬೊಮ್ಮಾಯಿ ಅವರಿಗೆ ಶಿರಹಟ್ಟಿ ಮತಕ್ಷೇತ್ರದಲ್ಲಿ ಅತ್ಯಧಿಕ ಮತಗಳ ಲೀಡ್ ಕೊಡುವ ಮೂಲಕ ಅವರ ಗೆಲುವುಗೆ ಶ್ರಮಿಸಲಾಗುವುದು. ಅವರ ಗೆಲುವು ನಿಶ್ಚಿತ ಎಂದು ಚಂದ್ರು ಲಮಾಣಿ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಎಂ.ಎಂ. ಹಿರೇಮಠ, ಅಶೋಕ ಸಂಕಣ್ಣವರ, ದತ್ತಣ್ಣ ಜೋಶಿ, ವಿನಾಯಕ ಹಬೀಬ ಸೇರಿ ಅನೇಕರು ಇದ್ದರು.