ಆಪರೇಷನ್ ಹಸ್ತಕ್ಕೆ ಮೊದಲ ವಿಕೆಟ್ ಬಲಿ, ಬಿಜೆಪಿಗೆ ತಾಪಂ-ಜಿಪಂ ಚುನಾವಣೆಯಲ್ಲಿ ಹಿನ್ನಡೆ

Capture
Published on

ಶಿವಾನಂದ ಹಿರೇಮಠ, ಗದಗ
ಜಿಲ್ಲೆಯಲ್ಲಿ ಮೊದಲು ಬಿಜೆಪಿ ಬಾವುಟ ಹಾರಿಸಿದ್ದ ಬಿಜೆಪಿ ‘ಕೈ’ ಈಗ ಹಸ್ತದ ಬಳಗ ಸೇರಿಕೊಂಡಿದೆ. ಜಿಲ್ಲೆಯ ಬಿಜೆಪಿಯ ಮೊದಲ ಶಾಸಕ, ಶಿರಹಟ್ಟಿ ಕ್ಷೇತ್ರದ ಮಾಜಿ ಶಾಸಕ ರಾಮಣ್ಣ ಲಮಾಣಿ ಕಾಂಗ್ರೆಸ್ ಸೇರುತ್ತಿರುವುದು ಜಿಪಂ, ತಾಪಂ ಚುನಾವಣೆಯಲ್ಲಿ ರಾಜಕೀಯ ಮತ್ತು ಜಾತಿ ಸಮೀಕರಣಕ್ಕೆ ಶಂಕುಸ್ಥಾಪನೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಕ್ಷೇತ್ರದ ಕಾಂಗ್ರೆಸ್ ಮುಖಂಡರು ಈ ಬೆಳವಣಿಗೆಯಿಂದ ಅಸಮಧಾನಗೊಂಡಿದ್ದು, ರಾಮಣ್ಣರನ್ನು ಸ್ವೀಕರಿಸುವರೇ ಎಂಬ ಪ್ರಶ್ನೆ ದ್ವಂದ್ವಕ್ಕೆ ಎಡೆಮಾಡಿಕೊಟ್ಟಿದೆ. ಸ್ಥಳೀಯ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ನಮ್ಮ ಗಮನಕ್ಕೂ ಬಾರದೆ ಈ ಪ್ರಕ್ರಿಯೆ ನಡೆದಿದೆ ಎಂಬುದು ಅವರ ಬೇಸರ.
ರಾಮಣ್ಣ ಲಮಾಣಿ ಪಕ್ಷಾಂತರದಿಂದ ಕ್ಷೇತ್ರದ ಕಾಂಗ್ರೆಸ್ ಮತ್ತು ಬಿಜೆಪಿ ವಲಯದಲ್ಲಿ ಹಲವರು ತಳಮಳಗೊಂಡಿದ್ದಾರೆ. ಕೆಲವರಿಗೆ ಈ ಬೆಳವಣಿಗೆ ಸಂತಸ ತಂದಿದೆ. ಚುನಾವಣೆ ನಂತರ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ದೊರೆಯದೆ ಮತ್ತು ಶಾಸಕ ಡಾ. ಚಂದ್ರು ಲಮಾಣಿ ಜತೆಗಿನ ಶೀತಲಸಮರದಿಂದ ರಾಮಣ್ಣ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಆಪರೇಷನ್ ಹಸ್ತದ ಪ್ರಕ್ರಿಯೆ ಬಿಜೆಪಿಗೆ ಬಹುದೊಡ್ಡ ಹಿನ್ನಡೆ ಎನ್ನಲಾಗುತ್ತಿದೆ. ಮುಂಬರುವ ಜಿಪಂ, ತಾಪಂ ಚುನಾವಣೆ ಹಿನ್ನೆಲೆಯಲ್ಲಿ ಶಿರಹಟ್ಟಿ ಕ್ಷೇತ್ರದಲ್ಲಿ ನಾಯಕನಿಲ್ಲದ ದೋಣಿಯಂತಾಗಿದೆ ಬಿಜೆಪಿ. ರಾಜಕೀಯ ಅನುಭವ ಇಲ್ಲದ ಶಾಸಕ ಚಂದ್ರು ಲಮಾಣಿಗೆ ಚುನಾವಣಾ ಜವಾಬ್ದಾರಿ ನೀಡುವುದು ಕಷ್ಟಸಾಧ್ಯ. ಹೀಗಾಗಿ ಜಿಲ್ಲೆಯಲ್ಲಿ ಮೊದಲ ಬಾರಿ ಬಿಜೆಪಿ ಬಾವುಟ ಹಾರಿಸಿದ ಕ್ಷೇತ್ರದಲ್ಲಿ ಈಗ ಕಾಂಗ್ರೆಸ್‌ಗೆ ಭದ್ರ ಬುನಾದಿ ಸಿಕ್ಕಂತಾಗಿದೆ. ರಾಮಣ್ಣನ ಸೇರ್ಪಡೆಯಿಂದ ಕಾಂಗ್ರೆಸ್ ಮುಖಂಡರಲ್ಲೂ  ಜಿದ್ದಾಜಿದ್ದಿ ಶುರುವಾಗಲಿದೆ.

ಕುಸಿಯುತ್ತಿರುವ ಪ್ರಭಾವ:
ಶಿರಹಟ್ಟಿ ಕ್ಷೇತ್ರದ ಬಿಜೆಪಿಯಲ್ಲಿ ಹಲವು ಬಣಗಳಿವೆ. ಜಿಲ್ಲಾ ಹಾಗೂ ರಾಜ್ಯ ಮುಖಂಡರಿಗೂ ಈ ಬಗ್ಗೆ ದೂರು ಸಲ್ಲಿಕೆಯಾಗಿದೆ. ಚಂದ್ರು ಲಮಾಣಿ ಆಡಳಿತ ವೈಖರಿಯು ರಾಮಣ್ಣ ಬೆಂಬಲಿಗರಿಗೆ ಮತ್ತು ಕೆಲ ಕಾರ್ಯಕರ್ತರಿಗೆ ಇಷ್ಟವಾಗುತ್ತಿಲ್ಲ ಮತ್ತು ಬಹಿರಂಗವಾಗಿ ಬೇಸರವನ್ನು ವ್ಯಕ್ತಪಡಿಸಲು ಕಾರ್ಯಕರ್ತರಿಗೆ ಸಾಧ್ಯವಾಗುತ್ತಿಲ್ಲ ಎಂಬ ಆರೋಪವಿದೆ. ಚುನಾವಣೆ ನಂತರ ರಾಮಣ್ಣ ಜತೆಗಿನ ರಾಜಕಾರಣದ ಮುನಿಸು ಮುಂದುವರಿದ ಹಿನ್ನೆಲೆ ರಾಮಣ್ಣರಿಗೆ ಕ್ಷೇತ್ರದಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿತ್ತು. ಕ್ಷೇತ್ರದ ಬೆಳವಣಿಗೆ ಅರಿತ ಸಿ.ಸಿ. ಪಾಟೀಲ ಮತ್ತು ರಾಜ್ಯ ಮುಖಂಡರು ಶಿರಹಟ್ಟಿ ಕ್ಷೇತ್ರದ ಬಿಜೆಪಿ ಮುಖಂಡರಿಗೆ ರಾಜಕೀಯ ಪಾಠ ಮಾಡಿದ್ದರು. ರಾಜಕಾರಣದಲ್ಲಿ ತಾಳ್ಮೆ ಮತ್ತು ಒಟ್ಟಾಗಿರಲು ಕ್ಷೇತ್ರದ ಮುಖಂಡರಿಗೆ ಸೂಚಿಸಿದ್ದರು. ಬದಲಾದ ಸನ್ನಿವೇಶದಲ್ಲಿ ಶಾಸಕ ಚಂದ್ರು ಏಕಾಂಗಿಯಾಗಿ ಕ್ಷೇತ್ರದಲ್ಲಿ ಬಿಜೆಪಿ ಭವಿಷ್ಯ ಕಟ್ಟಿಕೊಳ್ಳಬೇಕಿದೆ.

ಚುನಾವಣಾ ಪ್ರಭಾವ:
ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 22 ತಾಪಂ, 8 ಜಿಪಂ ಕ್ಷೇತ್ರಗಳಿವೆ. ಶಿರಹಟ್ಟಿ ಭಾಗದಲ್ಲಿ ರಾಮಣ್ಣ ಪ್ರಭಾವಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆಗೊಂಡಿರುವ ರಾಮಕೃಷ್ಣ ದೊಡ್ಡಮನಿ ಕಾಂಗ್ರೆಸ್ ಮರುಸೇರ್ಪಡೆ ಪ್ರಕ್ರಿಯೆಯು ಆರಂಭಗೊಂಡಿದೆ. ಮುಂಡರಗಿ ಮತ್ತು ಲಕ್ಷೇಶ್ವರ ಭಾಗದಲ್ಲಿ ರಾಮಕೃಷ್ಣ ಪ್ರಭಾವಿಗಳಾಗಿದ್ದಾರೆ. ರಾಮಕೃಷ್ಣ ಕಾಂಗ್ರೆಸ್ ಸೇರ್ಪಡೆಕೊಂಡರೆ ‘ರಾಮ-ರಾಮ’ರ ‘ಮರು ಮಿಲನ’ದಿಂದ ಶಿರಹಟ್ಟಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ  ಬಹು ದೊಡ್ಡ ಬೆಂಬಲ ಸಿಗಲಿದೆ. ಈ ಹಿನ್ನೆಲೆ ರಾಮಣ್ಣ ಅವರನ್ನು ಕಾಂಗ್ರೆಸ್  ಸೆಳೆದಿದೆ ಎನ್ನಲಾಗಿದೆ.

ಕೋಟ್:
ರಾಮಣ್ಣ ಲಮಾಣಿ ಕಾಂಗ್ರೆಸ್ ಸೇರ್ಪಡೆಯಿಂದ ಪಕ್ಷಕ್ಕೆ ಲಾಭವೂ ಇಲ್ಲ. ನಷ್ಟವೂ ಇಲ್ಲ. ಈ ವಿಷಯದಲ್ಲಿ ಕ್ಷೇತ್ರದ ಕಾಂಗ್ರೆಸ್ ಮುಖಂಡರ ಅಭಿಪ್ರಾಯ ಪಡೆಯಬೇಕಾಗುತ್ತದೆ. ಪರಾಜಿತ ಕಾಂಗ್ರೆಸ್ ಅಭ್ಯರ್ಥಿಯಾದರೂ ನಮ್ಮ ಗಮನಕ್ಕೆ ಬಾರದೆ ಈ ಪ್ರಕ್ರಿಯೆ ನಡೆದಿದೆ. ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುವುದು. ಮುಂದಿನ ನಿರ್ಧಾರ ರಾಜ್ಯ ಕಾಂಗ್ರೆಸ್ ನಾಯಕರು ಕೈಗೊಳ್ಳಲಿದ್ದಾರೆ.  
- ಸುಜಾತಾ ದೊಡ್ಡಮನಿ, ಪರಾಜಿತ ಕಾಂಗ್ರೆಸ್ ಅಭ್ಯರ್ಥಿ

ಕೋಟ್:
ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ ದೊಡ್ಡದು. ಕಾರ್ಯಕರ್ತರ ಪಡೆ ಪಕ್ಷದ ಜತೆಗಿದೆ. ರಾಮಣ್ಣ ಅವರು ಪಕ್ಷ ತೊರೆದರೂ ನಮಗೆ ಯಾವುದೇ ನಷ್ಟವಿಲ್ಲ. ಜಿಪಂ, ತಾಪಂ ಚುನಾವಣೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ.
-ಫಕೀರೇಶ ರಟ್ಟಿಹಳ್ಳಿ, ಶಿರಹಟ್ಟಿ ಮಂಡಳ ಬಿಜೆಪಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net