

ಮೈಸೂರು: ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಜಾನಪದ ವಸ್ತು ಸಂಗ್ರಹಾಲಯದ ಕ್ಯೂರೇಟರ್ ಆದ ರಾಮಣ್ಣ ಅವರು ನಾಡಿನಾದ್ಯಂತ ಸಂಚರಿಸಿ, ಜಾನಪದ ವಸ್ತುಗಳನ್ನು ಸಂಗ್ರಹಿಸುವ ಮೂಲಕ ಮುಂದಿನ ಪೀಳಿಗೆಗೆ ಅವುಗಳನ್ನು ದಾಟಿಸುವ ಕೆಲಸ ಮಾಡಿದ್ದಾರೆ ಎಂದು ರಂಗಕರ್ಮಿ ಪ್ರೊ.ಎಚ್.ಎಸ್.ಉಮೇಶ್ ಬಣ್ಣಿಸಿದರು.
ಕದಂಬ ರಂಗವೇದಿಕೆಯಿಂದ ವಿಜಯನಗರದ ಕಲಾನಿಕೇತನ ಕಲಾ ಶಾಲೆಯಲ್ಲಿ ಮಂಗಳವಾರ ಯು.ಎಸ್.ರಾಮಣ್ಣ ಅವರಿಗೆ 75ನೇ ವರ್ಷ ತುಂಬಿದಕ್ಕೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಯು.ಎಸ್.ರಾಮಣ್ಣ ಅವರು ನಟನೆಗಿಂತ ಜಾನಪದ ವಸ್ತುಗಳ ಸಂಗ್ರಹ ಕಾರ್ಯ ದೊಡ್ಡದು. ಆರ್.ತಿಪ್ಪೇಸ್ವಾಮಿ ಅವರ ನಂತರ ಮಾನಸ ಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಜಾನಪದ ವಸ್ತು ಸಂಗ್ರಹಾಲಯದ ಕ್ಯೂರೇಟರ್ ಆದ ರಾಮಣ್ಣ ಅವರು ನಾಡಿನಾದ್ಯಂತ ಸಂಚರಿಸಿ, ಜಾನಪದ ವಸ್ತುಗಳನ್ನು ಸಂಗ್ರಹಿಸುವ ಮೂಲಕ ಮುಂದಿನ ಪೀಳಿಗೆಗೆ ದಾಟಿಸುವ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಜಾನಪದ ವಸ್ತುಗಳ ಸಂಗ್ರಹಕ್ಕಾಗಿ ಮನೆ ಮನೆ ಅಲೆದು ವಸ್ತುಗಳನ್ನು ಸಂಗ್ರಹಿಸಿದ್ದಾರೆ. ತಾವೊಬ್ಬರೇ ಬೆಳೆಯದೇ ಅವರು ಜತೆಯಲ್ಲಿರುವವರನ್ನು ಒಟ್ಟಿಗೆ ಬೆಳೆಸುವ ಗುಣ ಹೊಂದಿದ್ದರು ಎಂದು ಹೇಳಿದರು.
ನಟನಾದವನು ಪಾತ್ರದ ಹಿಂದೆ ಇರುತ್ತಾನೆ. ಪಾತ್ರಕ್ಕೆ ಜೀವ ತುಂಬುತ್ತಾನೆ. ಅದೇ ರೀತಿ ರಾಮಣ್ಣ ಅವರು ತಮ್ಮ ಪತ್ನಿ ಡಾ.ವೈ.ಸಿ.ಭಾನುಮತಿ ಅವರ ಹಿಂದೆ ನಿಂತು ಸಾಧನೆಗೆ ಕಾರಣಕರ್ತರಾಗಿದ್ದಾರೆ ಎಂದರು.
ರಾಮಣ್ಣ ಅವರು ಹೆಚ್ಚು ಬರೆಯಲಿಲ್ಲ. ಆದರೆ ಭಾನುಮತಿ ಅವರ ಬರಹದ ಹಿಂದೆ ರಾಮಣ್ಣ ಅವರ ಸಹಕಾರ ಇದೆ. ರಾಮಣ್ಣ ಅವರಿಗೆ ನಟ, ನಿರ್ದೇಶಕ, ಜಾನಪದ ವಸ್ತ ಸಂಗ್ರಹಾಲಯದ ಕ್ಯೂರೇಟರ್-ಹೀಗೆ ನಾನಾ ಮುಖಗಳಿವೆ. ಮಾತಿಲ್ಲದ ಪಾತ್ರಗಳಲ್ಲೂ ಪ್ರೇಕ್ಷಕರ ಮೇಲೆ ಪ್ರಭಾವ ಬೀರುವಂತೆ ನಟಿಸಿದ್ದಾರೆ ಎಂದು ಬಣ್ಣಿಸಿದರು.
ರಾಮಣ್ಣ ಅವರ ಸಾಧನೆಗಳು ರೂಪಕದಂತಿವೆ. ಸಿದ್ದಾರ್ಥನಿಂದ ಹಿಡಿದು ಪೊಲೀಸನವರೆಗೆ ಪಾತ್ರ ಮಾಡಿದ್ದಾರೆ. ಅವರು ಬದಕನ್ನು, ನಾಟಕವನ್ನು ಶೋಧಿಸುವ ಪ್ರಕ್ರಿಯೆ ಪ್ರತಿಮಾತ್ಮಕವಾಗಿದೆ. ಅವರಿಗೆ ಪಾತ್ರವನ್ನು ಅರ್ಥೈಸಿಕೊಳ್ಳುವಿಕೆ ಚೆನ್ನಾಗಿ ತಿಳಿದಿದೆ. ಅವರಿಗೆ ಚಿಕ್ಕಂದಿನಿಂದಲೂ ಆ ತುಡಿತ ಇದೆ ಎಂದರು.
ರಾಮಣ್ಣ ಅಭಿನಯದ ಪಾತ್ರಗಳ ಚಿತ್ರ ಪ್ರದರ್ಶನ ಉದ್ಘಾಟಿಸಿದ ಜಾನಪದ ವಿದ್ವಾಂಸ ಡಾ.ಡಿ.ಕೆ.ರಾಜೇಂದ್ರ ಮಾತನಾಡಿ, ಜಾನಪದ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿರುವ ಯು.ಎಸ್.ರಾಮಣ್ಣನವರದು ಶಿಸ್ತಿನ ಜೀವನ. ಧ್ಯಾನ, ವ್ಯಾಯಾಮ, ನಟನೆ, ನಿಯತ್ತು, ಬಂದಿದ್ದನ್ನು ಒಪ್ಪಿಕೊಳ್ಳುವಿಕೆಯ ಜತೆಗೆ ಮಾತು ಕಡಿಮೆ ಎಂದರು.
ರಾಮಣ್ಣ ಅವರು ತಾವು ಕಲಿತ ಕಲೆಯನ್ನು ಶಾಲಾ-ಕಾಲೇಜಗಳಲ್ಲಿ ಪ್ರಾತ್ಯಕ್ಷಿಕೆ ನೀಡುವ ಮೂಲಕ ಉಳಿಸಿ, ಬೆಳೆಸುವ, ಇತರರಿಗೆ ಕಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಯು.ಎಸ್.ರಾಮಣ್ಣ ದಂಪತಿ ಸನ್ಮಾನಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಜಾನಪದ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಸದ್ದಿಲ್ಲದೇ ಅಪಾರ ಸಾಧನೆ ಮಾಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಕಲಾನಿಕೇತನ ಕಲಾ ಶಾಲೆಯ ಪ್ರಾಂಶುಪಾಲ ಕೆ.ಸಿ.ಮಹದೇವಶೆಟ್ಟಿ ಮಾತನಾಡಿ, ನಾಟಕಕ್ಕೂ ಚಿತ್ರಕಲೆಗೂ ಪರಸ್ವರ ಪೂರಕವಾದ ಅವಿನಾಭಾವ ಸಂಬಂಧವಿದೆ. ತೊಗಲುಗೊಂಬೆ, ಸೂತ್ರದ ಗೊಂಬೆ, ಮುಖವರ್ಣಿಕೆ ಮೊದಲಾದವನ್ನು ಗಮನಿಸಬಹುದು ಎಂದರು.
ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದ ಯು.ಎಸ್.ರಾಮಣ್ಣ ಮಾತನಾಡಿ, 53 ವರ್ಷಗಳಿಂದ ರಂಗಭೂಮಿ ಹಾಗೂ ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ರಂಗಾಯಣ ನಿರ್ದೇಶಕರಾಗಿದ್ದ ಬಿ.ವಿ.ಕಾರಂತರು ಕಂಸಾಳೆ ಹಾಗೂ ಯೋಗಕ್ಕೆ ನೀಡಿದ ಪ್ರೋತ್ಸಾಹ ದೊಡ್ಡದು ಎಂದು ಸ್ಮರಿಸಿದರು.
ಐ ಸರೆಂಡರ್-ನಾನು ಶರಣಾಗಿದ್ದೇನೆ ಎಂಬ ಮನೋಭಾವ ಎಲ್ಲರಲ್ಲೂ ಬಂದಾಗ ದೇಶ ಉದ್ಧಾರವಾಗುತ್ತದೆ. ಎಲ್ಲಾ ರೀತಿಯ ಕಲೆಯನ್ನು ಉಳಿಸಿ, ಬೆಳೆಸಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಕಂಸಾಳೆ ಪ್ರದರ್ಶನ:
ಯು.ಎಸ್.ರಾಮಣ್ಣ, ಅವರ ಶಿಷ್ಯಂದಿರಾದ ಕಾರ್ತಿಕ್ ಉಪಮನ್ಯು ಹಾಗೂ ವಿಶಾಲ್ ಅವರು ಕಂಸಾಳೆ ಕಲೆ ಪ್ರದರ್ಶಿಸಿದರು.