ಅತ್ತೆಯನ್ನು ಕೊಂದವನಿಗೆ ಜೀವಾವಧಿ ಶಿಕ್ಷೆ

Court Justice
Published on

ಕನಕಪುರ: ಹಣದಾಸೆಗೆ ಅತ್ತೆಯನ್ನೇ ಹತ್ಯೆಗೈದಿದ್ದವನಿಗೆ ಕನಕಪುರ ಎರಡನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿೆಕ್ಷೆ ಮತ್ತು 75 ಸಾವಿರ ರೂ. ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದೆ. ಭೀಮಾನಾಯ್ಕ (40) ಅಪರಾಧಿ.

ಒಂಬತ್ತು ವರ್ಷಗಳ ಹಿಂದೆ ಮೃತ ಲಕ್ಷ್ಮೀ ಬಾಯಿ ಪುತ್ರಿ ಶಶಿಕಲಾ ಅವರನ್ನು ಭೀಮಾನಾಯ್ಕ ವಿವಾಹವಾಗಿದ್ದ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ತವರು ಮನೆಯಿಂದ ಹಣ ತರುವಂತೆ ಭೀಮಾನಾಯ್ಕ ಪತ್ನಿ ಶಶಿಕಲಾಳನ್ನು ಪೀಡಿಸುತ್ತಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗುತ್ತಿತ್ತು. ಅಲ್ಲದೆ ರಾಜೀ ಪಂಚಾಯಿತಿಯೂ ಆಗಿತ್ತು.

2021ರ ಮಾ.26ರಂದು ಭೀಮಾನಾಯ್ಕ ಕುಡಿದ ಮತ್ತಿನಲ್ಲಿ ಮನೆಗೆ ಬಂದು ಪತ್ನಿ ಜತೆ ಗಲಾಟೆ ಮಾಡಿದ್ದಲ್ಲದೆ ಆಸ್ತಿ ಮಾರಾಟ ಮಾಡುವಂತೆ ಲಕ್ಷ್ಮೀಬಾಯಿ ಅವರಿಗೂ ಧಮ್ಕಿ ಹಾಕಿದ್ದ. ನಂತರ ಬಡಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ನಂತರ ಲಕ್ಷ್ಮೀ ಬಾಯಿ ಮೃತಪಟ್ಟಿದ್ದರು. ಅಂದಿನ ಸರ್ಕಲ್​ ಇನ್​ಸ್ಪೆಕ್ಟರ್​ ಟಿ.ಟಿ. ಕೃಷ್ಣ ಭೀಮಾನಾಯ್ಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಎಚ್​.ಎನ್​. ಕುಮಾರ್​, ಅಪರಾಧಿ ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದ್ದಾರೆ. ದಂಡ ಕಟ್ಟಲು ತಪ್ಪಿದರೆ 6 ತಿಂಗಳು ಜೈಲು ಶಿಕ್ಷೆ ಮುಂದುವರಿಸುವಂತೆಯೂ ತೀರ್ಪಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net