ಜಿಲ್ಲೆಯ 3 ಕ್ಷೇತ್ರಗಳಿಗೆ ಕೈ ಪಟ್ಟಿ ಬಿಡುಗಡೆ ಕನಕಪುರಕ್ಕೆ ಡಿಕೆಶಿ, ರಾಮನಗರಕ್ಕೆ ಇಕ್ಬಾಲ್​ ಹುಸೇನ್​, ಮಾಗಡಿಗೆ ಎಚ್​.ಸಿ. ಬಾಲಕೃಷ್ಣ

Congress
Published on

ಗಂಗಾಧರ್​ ಬೈರಾಪಟ್ಟಣ ರಾಮನಗರ
ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿ ಸ್ಥಾನ ನೀಡಿರುವ ಕಾಂಗ್ರೆಸ್​ ಚನ್ನಪಟ್ಟಣ ಕ್ಷೇತ್ರದ ಗುಟ್ಟು ಬಿಟ್ಟುಕೊಡದೆ ಕುತೂಹಲ ಹೆಚ್ಚಿಸಿದೆ.
ಶುಕ್ರವಾರ ಬಿಡುಗಡೆಯಾದ ಮೊದಲ ಪಟ್ಟಿಯಲ್ಲಿ ಮಾಗಡಿ ಕ್ಷೇತ್ರಕ್ಕೆ ಮಾಜಿ ಶಾಸಕ ಎಚ್​.ಸಿ.ಬಾಲಕೃಷ್ಣ, ರಾಮನಗರಕ್ಕೆ ಜಿಪಂ ಮಾಜಿ ಅಧ್ಯಕ್ಷ ಎಚ್​.ಎ ಇಕ್ಬಾಲ್​ ಹುಸೇನ್​ ಹಾಗೂ ಕನಕಪುರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರನ್ನು ಅಭ್ಯರ್ಥಿ ಎಂದು ೂಷಣೆ ಮಾಡಿದೆ. ಆದರೆ ಮಾಜಿ ಮುಖ್ಯಮಂತ್ರಿ ಪ್ರತಿನಿಧಿಸುತ್ತಾರೆ ಎನ್ನಲಾಗಿರುವ ಚನ್ನಪಟ್ಟಣಕ್ಕೆ ಅಭ್ಯರ್ಥಿ ಘೋಷಣೆ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.

ಡಿ.ಕೆ.ಸುರೇಶ್​ ಸ್ಪರ್ಧೆ ಗೊಂದಲಕ್ಕೆ ತೆರೆ
ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್​ ಕುಮಾರಸ್ವಾಮಿ ಅವರ ಸ್ಪರ್ಧೆಯಿಂದ ಹೈವೋಲ್ಟೇಜ್​ ಕ್ಷೇತ್ರವಾಗಿರುವ ರಾಮನಗರಕ್ಕೆ ಕಾಂಗ್ರೆಸ್​ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಗೊಂದಲಕ್ಕೆ ತೆರೆ ಬಿದ್ದಿದೆ. ಈ ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರೇ ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇತ್ತೀಚೆಗೆ ರಾಮನಗರದಿಂದ ಸಂಸದ ಡಿ.ಕೆ.ಸುರೇಶ್​ ಅವರನ್ನು ಕಣಕ್ಕೆ ಇಳಿಯುವಂತೆ ಹೈಕಮಾಂಡ್​ ಸೂಚನೆ ನೀಡಿದೆ ಎಂದು ಹೇಳಲಾಗಿತ್ತು. ಇದು ಇಲ್ಲಿನ ಕಾಂಗ್ರೆಸ್​ ಕಾರ್ಯಕರ್ತರ ಆತ್ಮಸ್ಥೆರ್ಯ ಹೆಚ್ಚಿಸಿತ್ತು. ಆದರೆ ಎಚ್​.ಎ. ಇಕ್ಬಾಲ್​ ಹುಸೇನ್​ ಅವರೇ ನಮ್ಮ ಅಭ್ಯರ್ಥಿ ಎಂದು ಪಕ್ಷ ಘೋಷಣೆ ಮಾಡುತ್ತಿದ್ದಂತೆ ಡಿ.ಕೆ.ಸುರೇಶ್​ ಸ್ಪರ್ಧೆ ವಿಚಾರದಲ್ಲಿ ಉಂಟಾಗಿದ್ದ ಗೊಂದಲಕ್ಕೆ ತೆರೆಬಿದ್ದಿದೆ.

ಚನ್ನಪಟ್ಟಣ ಕುತೂಹಲ
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡದೇ ಇರುವುದು ಕಾಂಗ್ರೆಸ್​ ಈ ಕ್ಷೇತ್ರದ ವಿಚಾರಕ್ಕೆ ಸಂಬಂಧಿಸಿದಂತೆ ಬದಲಿ ಯೋಜನೆ ಮಾಡುತ್ತಿದೆ ಎನ್ನುವ ಮಾಹಿತಿ ಬಹಿರಂಗಪಡಿಸಿದೆ. ಉದ್ಯಮಿಯೂ ಆಗಿರುವ ಪ್ರಸನ್ನಗೌಡ ಕ್ಷೇತ್ರದಲ್ಲಿ ಪಕ್ಷ ಸಂಟನೆ ಮಾಡುತ್ತಿದ್ದಾರೆ. ಪ್ರಸನ್ನಗೌಡರೇ ನಮ್ಮ ಅಭ್ಯರ್ಥಿ ಎಂದು ಸ್ವತಃ ಡಿ.ಕೆ.ಸುರೇಶ್​ ಅವರೇ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಅದರೆ ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಟಿಕೆಟ್​ ಅಂತಿಮಗೊಂಡರೂ ಪ್ರಸನ್ನಗೌಡಗೆ ಏಕೆ ಟಿಕೆಟ್​ ನೀಡಿಲ್ಲ ಎನ್ನುವ ಪ್ರಶ್ನೆ ಎದ್ದಿದೆ.
ಅಲ್ಲದೆ ಈ ಹಿಂದೆ ಸಂಸದ ಡಿ.ಕೆ.ಸುರೇಶ್​, ಚನ್ನಪಟ್ಟಣಕ್ಕೆ ಯಾರೂ ನಿರೀಕ್ಷೆ ಮಾಡಿರದ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ಅವರು ಚನ್ನಪಟ್ಟಣದಿಂದ ಸಿ.ಪಿ.ಯೋಗೇಶ್ವರ್​ ಅವರನ್ನು ಕಣಕ್ಕೆ ಇಳಿಸಲು ಪ್ರಯತ್ನ ನಡೆಸುತ್ತಿರಬಹುದು ಎನ್ನುವ ಲೆಕ್ಕಾಚಾರವೂ ಇದೆ.
ಆದರೆ ಯೋಗೇಶ್ವರ್​ ಈಗಾಗಲೇ ಬಿಜೆಪಿ ಬ್ಯಾನರ್​ ಅಡಿಯಲ್ಲಿ ಸ್ವಾಭಿಮಾನ ಸಂಕಲ್ಪ ನಡಿಗೆ ಮಾಡುವ ಮೂಲಕ ಮತದಾರರ ಮನ ಮುಟ್ಟುವ ಕೆಲಸ ಮಾಡುತ್ತಿದ್ದಾರೆ. ಅವರು ಕಾಂಗ್ರೆಸ್​ ಕಡೆ ಮುಖ ಮಾಡುವುದು ಬಹುತೇಕ ಕಷ್ಟ ಎನ್ನಲಾಗಿದೆ. ಇದರ ಹೊರತಾಗಿ ಎರಡನೇ ಪಟ್ಟಿಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಪ್ರಸನ್ನಗೌಡಗೆ ಟಿಕೆಟ್​ ದೊರೆಯುವುದೇ, ಇಲ್ಲ ಡಿ.ಕೆ.ಸುರೇಶ್​ ಹೇಳಿದಂತೆ ಅಚ್ಚರಿ ಅಭ್ಯರ್ಥಿಗೆ ದೊರೆಯುವುದೇ ಕಾದು ನೋಡಬೇಕಿದೆ. ಇದರ ಜತೆಗೆ ಚನ್ನಪಟ್ಟಣದಲ್ಲಿ ಡಿ.ಕೆ ಶಿವಕುಮಾರ್​ ಅವರ ಸಹೋದರಿ ಪತಿ ಶರತ್​ಚಂದ್ರ ಆಮ್​ ಆದ್ಮಿ ಪಾರ್ಟಿ ಅಭ್ಯರ್ಥಿ ಆಗಿರುವುದೂ ಅಚ್ಚರಿಯೇ ಆಗಿದೆ.

ಅಷ್ಟು ಸುಲಭವಲ್ಲ
ಸದ್ಯಕ್ಕೆ ಘೋಷಣೆ ಮಾಡಿರುವ ಮೂರು ಕ್ಷೇತ್ರಗಳಲ್ಲಿ ಕನಕಪುರ ಹೊರತುಪಡಿಸಿ ಮಾಗಡಿ ಮತ್ತು ರಾಮನಗರದಲ್ಲಿ ಕಾಂಗ್ರೆಸ್​ ಗೆಲುವು ಅಷ್ಟು ಸುಲಭವಲ್ಲ. ಈ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್​ ಪ್ರಬಲ ಪೈಪೋಟಿ ನೀಡುತ್ತಿದ್ದು, ಇತಿಹಾಸದ ಫಲಿತಾಂಶಗಳು ಹೆಚ್ಚಾಗಿ ಜೆಡಿಎಸ್​ ಪಾಲಿಗಿವೆ. ಈ ಹಿನ್ನೆಲೆಯಲ್ಲಿ ರಾಮನಗರದಲ್ಲಿ ನಿಖಿಲ್​ ಕುಮಾರಸ್ವಾಮಿ ಅವರ ಸ್ಪರ್ಧೆ ಜೆಡಿಎಸ್​ ಪಾಲಿಗೆ ಮಾಡು ಇಲ್ಲವೇ ಮಡಿ ಹೋರಾಟ. ನಿಖಿಲ್​ ಸೋಲು ದೇವೇಗೌಡರ ಕುಟುಂಬಕ್ಕೆ ಆದ ಸೋಲು ಎನ್ನುವಂತೆ ಬಿಂಬಿಸಲಾಗುತ್ತಿದೆ. ಇದರ ವಿರುದ್ಧ ಈಜಿ ಇಕ್ಬಾಲ್​ ಹುಸೇನ್​ ಗೆಲುವಿನ ದಡ ಮುಟ್ಟಬೇಕು. ಆದರೆ, ಜೆಡಿಎಸ್​ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಅದು ಅಷ್ಟು ಸುಲಭವಲ್ಲ.

ಮಾಗಡಿಯಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಸುಮಾರು 50 ಸಾವಿರ ಮತಗಳ ಅಂತರದಿಂದ ಸೋಲುಕಂಡಿದ್ದ ಬಾಲಕೃಷ್ಣ, ಈ ಬಾರಿ ಹೆಚ್ಚಿನ ಹುರುಪಿನಲ್ಲಿ ಪಕ್ಷ ಸಂಟನೆ ಮಾಡುತ್ತಿದ್ದಾರೆ. ಆದರೆ ಮಾಗಡಿಯಲ್ಲಿಯೂ ದೇವೇಗೌಡರ ಕುಟುಂಬದ ಹವಾ ಇರುವ ಕಾರಣ ಇವರ ಗೆಲುವು ಅಷ್ಟು ಸುಲಭವಲ್ಲ. ಎದುರಾಳಿ ಅಭ್ಯರ್ಥಿ ಮಂಜುನಾಥ್​ ಹಾಗೂ ದೇವೇಗೌಡರ ಕುಟುಂಬ ಎಡವಿದರಷ್ಟೇ ಇದರ ಲಾಭವನ್ನು ಬಾಲಕೃಷ್ಣ ಪಡೆದುಕೊಳ್ಳಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net