ದಕ್ಷಿಣಕಾಶಿ ರಾಮನಾಥಪುರದಲ್ಲಿ ಜಾತ್ರೆ

16ark-1
Published on

ಶ್ರೀ ಪ್ರಸನ್ನ ಸುಬ್ರಹ್ಮಣ್ಯೇಶ್ವರ ದೇವರ ಮಹಾ ರಥೋತ್ಸವಕ್ಕೆ ಕ್ಷೇತ್ರ ಸಜ್ಜು
ಅರಕಲಗೂಡು: ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ರಾಮನಾಥಪುರದಲ್ಲಿ ಡಿ. 18ರಂದು ನಡೆಯುವ ಪ್ರಸನ್ನ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಮಹಾ ರಥೋತ್ಸವಕ್ಕೆ ಊರಿಗೆ ಊರೇ ಸಂಭ್ರಮದಿಂದ ಸಿದ್ಧಗೊಂಡಿದೆ. ಮೈಸೂರು ಸೀಮೆ ಭಾಗದಲ್ಲಿ ನಡೆಯುವ ಮೊದಲ ಜಾತ್ರಾ ಮಹೋತ್ಸವ ಎಂಬ ಪ್ರಸಿದ್ಧಿಗೆ ಪಾತ್ರವಾಗಿರುವ ದೇವಾಲಯಗಳ ಊರು ರಾಮನಾಥಪುರದಲ್ಲಿ ಸೋಮವಾರದಿಂದ ಆರಂಭವಾಗುವ ಜಾತ್ರೆ ಮಾರ್ಗಶಿರ ಮಾಸ ಪರ್ಯಂತ ನಡೆಯಲಿದೆ. ಮಹಾ ರಥೋತ್ಸವಕ್ಕೆ 35 ಅಡಿ ಎತ್ತರದ ರಥ ಸಿಂಗಾರಗೊಂಡಿದೆ. ಬೆಳಗ್ಗೆ ಪೂಜಾ ವಿಧಾನಗಳನ್ನು ಪೂರೈಸಿದ ಬಳಿಕ ಅಲಂಕೃತ ರಥದ ಮೇಲೆ ದೇವರ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಮಧ್ಯಾಹ್ನ 12 ಗಂಟೆಗೆ ತೇರು ಎಳೆಯಲಾಗುತ್ತದೆ. ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಒಳಾಂಗಣದಲ್ಲಿ ಆಕರ್ಷಕವಾದ ಹೂವಿನ ತೋರಣ ನಿರ್ಮಿಸಿ ದೇವಸ್ಥಾನವನ್ನು ಸಿಂಗರಿಸಲಾಗಿದೆ.
ಷಷ್ಠಿ ಜಾತ್ರೆ ಪ್ರಯುಕ್ತ ದೇವಸ್ಥಾನದ ರಥ ಬೀದಿ ಹಾಗೂ ರಾಮೇಶ್ವರ ದೇವಾಲಯ ಬೀದಿಯಲ್ಲಿ ವಿವಿಧ ರೀತಿಯ ವ್ಯಾಪಾರ ಮಳಿಗೆಗಳು ತಲೆ ಎತ್ತಿವೆ. ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ವಾಹನ ದಟ್ಟಣೆ ನಿಯಂತ್ರಿಸಲು ಖಾಸಗಿ ಭೂಮಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ, ತಾತ್ಕಾಲಿಕವಾಗಿ ಶೌಚಗೃಹ, ಕುಡಿಯುವ ನೀರಿನ ಸೌಲಭ್ಯ ಕೈಗೊಳ್ಳಲಾಗಿದೆ.
ಐತಿಹಾಸಿಕ ಗ್ರಾಮದಲ್ಲಿ ಶ್ರೀ ರಾಮೇಶ್ವರ, ಅಗಸ್ತ್ಯೇಶ್ವರ, ಪಟ್ಟಾಭಿರಾಮ ಸೇರಿದಂತೆ ಅನೇಕ ದೇವಸ್ಥಾನಗಳಿವೆ. ಇವುಗಳ ಪೈಕಿ ಪ್ರಸನ್ನ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಅಸಖ್ಯಾಂತ ಭಕ್ತರನ್ನು ಹೊಂದಿದ್ದು, ಜಾತ್ರಾ ವೈಭವ ಮೇಳೈಸಲಿದೆ.
ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಒಂದು ಇತಿಹಾಸವೇ ಇದೆ. ಕುಕ್ಕೆ ಸುಬ್ರಹ್ಮಣ್ಯ ಮಠದ ಗುರು ಪರಂಪರೆಯ 14ನೇ ಯತಿ ಶ್ರೀ ವಿಭುದೇಶ ತೀರ್ಥ ಸ್ವಾಮೀಜಿ ಯಾತ್ರಾರ್ಥವಾಗಿ ರಾಮನಾಥಪುರಕ್ಕೆ ಬಂದಿದ್ದರು. ಇಲ್ಲಿಯ ಸಂಕ್ರಾಂತಿ ಮಂಟದಲ್ಲಿ ಬಿಡಾರ ಹೂಡಿದ್ದರು. ಆಗ ಕನಸಿನಲ್ಲಿ ಸುಬ್ರಹ್ಮಣ್ಯ ಸ್ವಾಮಿ ಬಂದು ‘ಇಲ್ಲಿತನಕ ನಾನು ನಿನ್ನನ್ನು ಹಿಂಬಾಲಿಸಿದ್ದೇನೆ. ನಾನು ಇಲ್ಲಿಯೇ ನೆಲೆಸಲು ಅಪೇಕ್ಷಿಸುತ್ತೇನೆ. ನಿನ್ನ ಬಳಿಗೆ ಬಲ್ಲಾಳರಾಯನನ್ನು ಎಚ್ಚರಿಸಿ ಇಲ್ಲಿಗೆ ಕಳಿಸುತ್ತೇನೆ. ಅವನೊಂದಿಗೆ ಹೊಳೆನರಸೀಪುರದ ಪಾಳೇಗಾರ ನರಸಪ್ಪನಾಯಕನ ಸಹಾಯದಿಂದ ನನ್ನನ್ನು ಇಲ್ಲಿ ಪ್ರತಿಷ್ಠಾಪಿಸುವಂತೆ ಹೇಳಿ ಹೊಳೆನರಸೀಪುರ ಪಾಳೇಯಗಾರ ನರಸಪ್ಪನಾಯಕನಿಗೂ ಕಾಣಿಕೊಳ್ಳುತ್ತೇನೆ. ರಾಮನಾಥಪುರದಲ್ಲಿ ಗುರುಗಳ ಇಚ್ಛೆಯಂತೆ ನಡೆದುಕೊಂಡರೆ ಆತನಿಗೆ ಸಂತಾನ ಪ್ರಾಪ್ತಿಯಾಗುವುದು ಎಂದು ಸೂಚಿಸುವೆ’ ಎಂದು ಹೇಳಿದನಂತೆ. ಅದರಂತೆ ಶ್ರೀಗಳ ಮರ್ಗದರ್ಶನದಲ್ಲಿ ಇಲ್ಲಿ ಸುಬ್ರಹ್ಮಣ್ಯ ಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಿದರು. ಈ ದೇವಾಲಯ ದ್ರಾವಿಡ ಶೈಲಿಯಲ್ಲಿದ್ದು ಸಾಕಷ್ಟು ದೊಡ್ಡದಾದ ದೇವಾಲಯವಾಗಿದೆ. ಅಂದಿನಿಂದಲೂ ಜಾತ್ರೆ ಉತ್ಸವಗಳು ಇಲ್ಲಿ ನಡೆಯುತ್ತಿವೆ. ಮಾರ್ಗಶಿರ ಶುದ್ಧ ಷಷ್ಠಿಯಂದು ನಡೆಯುವ ರಥೋತ್ಸವ ಬಹು ವಿಖ್ಯಾತ. ರಥೋತ್ಸವದಲ್ಲಿ ಭಾಗಿಯಾಗಲು ಈಗಾಗಲೇ ಸುಕ್ಷೇತ್ರಕ್ಕೆ ಭಕ್ತರ ದಂಡು ಬರಲಾರಂಭಿಸಿದೆ. ಜಾತ್ರೆಯ ಸಡಗರ ಮೇಳೈಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net