ರಾಮನಾಥಪುರದಲ್ಲಿ ತುಳು ಷಷ್ಠಿ ರಥೋತ್ಸವ

1 jatre
Published on

 ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ತೇರು-  ಸಾವಿರಾರು ಭಕ್ತರ ಸಂಗಮ

ಅರಕಲಗೂಡು : ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದ ಕ್ಷೇತ್ರ ರಾಮನಾಥಪುರದಲ್ಲಿ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ತುಳು ಷಷ್ಠಿ ರಥೋತ್ಸವ ಭಾನುವಾರ ಭಾರಿ ಜನಸಾಗರದ ನಡುವೆ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವದೊಂದಿಗೆ ಸಾರ್ವತ್ರಿಕ ರಜಾ ದಿನವಾದ ಕಾರಣ ಭಕ್ತರ ದಂಡೇ ಕ್ಷೇತ್ರಕ್ಕೆ ಹರಿದು ಬಂದಿತು. ಸ್ವಾಮಿಗೆ ಪೂಜೆ ಸಲ್ಲಿಸಲು ಭಕ್ತರು ಮೈಲುದ್ದದವರೆಗೆ ಸಾಲುಗಟ್ಟಿ ನಿಂತಿದ್ದರು. ದೇವಸ್ಥಾನದಲ್ಲೂ ಭಕ್ತರು ಕಾಲಿಡದಷ್ಟು ನೂಕುನುಗ್ಗಲು ಏರ್ಪಟ್ಟಿತ್ತು.

ಮಧ್ಯಾಹ್ನ 12 ಗಂಟೆಗೆ ಶುಭ ಮುಹೂರ್ತದಲ್ಲಿ ಗೋವಿಂದನ ನಾಮಸ್ಮರಣೆ ಮಾಡುತ್ತಾ ದೇವರ ಉತ್ಸವ ಮೂರ್ತಿ ಹೊರತಂದು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ನೆರೆದಿದ್ದ ಜನರ ಜಯಘೋಷಗಳೊಂದಿಗೆ ಭಕ್ತರು ತೇರು ಎಳೆದರು. ತೇರು ಮುಂದೆ ಸಾಗುವಾಗ ಜನಸಂದಣಿ ಲೆಕ್ಕಿಸದೆ ಭಕ್ತರು ರಥದತ್ತ ಹಣ್ಣು, ದವನ ಎಸೆದು ಭಕ್ತಿಭಾವ ಮೆರೆದರು. ಬೆಳಗ್ಗೆಯಿಂದಲೇ ತಂಡೋಪತಂಡವಾಗಿ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಕಾವೇರಿ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ದೇವಸ್ಥಾನಸಲ್ಲಿ ಸರದಿ ಸಾಲಿನಲ್ಲಿ ಸಾಗಿ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು. ಹಣ್ಣು, ತುಪ್ಪ, ನೈವೇದ್ಯ ಅರ್ಪಿಸಿ ದೇವರ ದರ್ಶನ ಪಡೆದರು. ದೇವಸ್ಥಾನದ ಪಾರುಪತ್ತೇದಾರ ರಮೇಶ ಭಟ್ ನೆಲ್ಲಿತೀರ್ಥ ನೇತೃತ್ವದಲ್ಲಿ ಪೂಜಾ ವಿಧಾನಗಳು ವಿಧಿವತ್ತಾಗಿ ನಡೆದವು.

ಹರಕೆ ಸಮರ್ಪಣೆ:

ಹರಕೆ ಹೊತ್ತಿದ್ದ ಭಕ್ತರು ನದಿಯಲ್ಲಿ ಮಿಂದೆದ್ದು, ಕೇಶ ಮುಂಡನ ಮಾಡಿಸಿಕೊಂಡು ದರ್ಶನ ಪಡೆದರು. ಶ್ರೀ ರಾಮೇಶ್ವರ, ಪಟ್ಟಾಭಿರಾಮ, ಆಂಜನೇಯ ಸ್ವಾಮಿ, ಅಗಸ್ತ್ಯರ ದೇವಾಲಯಗಳಿಗೆ ತೆರಳಿ ದರ್ಶನ ಪಡೆದರು. ವಹ್ನಿ ಪುಷ್ಕರಣಿಯಲ್ಲಿ ಮೀನುಗಳಿಗೆ ತಿಂಡಿ ಹಾಕಿ ಬಗೆ ಬಗೆಯ ಗಾತ್ರದ ಮೀನುಗಳನ್ನು ಕಣ್ತುಂಬಿಕೊಂಡು ಆನಂದಿಸಿದರು. ಜಾತ್ರೆಯಲ್ಲಿ ಕಡಲೆಪುರಿ, ವಿವಿಧ ರೀತಿಯ ಸಿಹಿ ತಿನಿಸುಗಳ ವ್ಯಾಪಾರ ಭರ್ಜರಿಯಾಗಿ ಸಾಗಿತ್ತು. ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ವಿವಿಧ ಸಂಘ ಸಂಸ್ಥೆಗಳು, ದಾನಿಗಳು ಮಜ್ಜಿಗೆ ,ಪಾನಕ ನೀಡಿ ಬಿಸಿಲಿನಿಂದ ಬಳಲಿದ್ದ ಭಕ್ತರ ಬಾಯಾರಿಕೆ ನಿವಾರಿಸಿದರು. ಅನ್ನದಾನ ಸೇವೆಯೂ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net