ರಾಮನಾಥಪುರದಲ್ಲಿ ರಾಯರ ವರ್ಧಂತಿ

12ark1
Published on

ಪಂಡಿತ ಕನಕಾಚಾರ್ಯರ ನೇತೃತ್ವ

ಅರಕಲಗೂಡು : ಮನುಷ್ಯ ಸಕಲ ಜೀವಿಗಳಿಗೂ ಪರೋಪ ಕಾರಿಯಾಗಿ ಸಮಾಜಕ್ಕೆ ಮಾನವತ್ವದ ಸಂದೇಶ ಒದಗಿಸಬೇಕಿದೆ ಎಂದು ಪಂಡಿತ ಪುರಂದರಾಚಾರ್ಯ ಹಯಗ್ರೀವ ಹೇಳಿದರು. ತಾಲೂಕಿನ ರಾಮನಾಥಪುರದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಮಂಗಳವಾರ ಶ್ರೀ ಗುರು ಸಾರ್ವಭೌಮರ ವರ್ಧಂತಿ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೇರೆಲ್ಲ ದೋಷ ಗಳಿಗೆ ಪ್ರಾಯಶ್ಚಿತ್ತವಿರಬಹುದು. ಆದರೆ ಕೃತಜ್ಞತಾ ದೋಷಕ್ಕೆ ಪ್ರಾಯಶ್ಚಿತ್ತವಿಲ್ಲ ಎಂಬ ಸಂದೇಶವನ್ನು ಮಹಾಭಾರತದ ಶಾಂತಿ ಪರ್ವದಲ್ಲಿ ಭೀಷ್ಮಾಚಾರ್ಯರು ಧರ್ಮರಾಜನನ್ನು ನಿಮಿತ್ತ ಮಾಡಿ ಸಮಸ್ತ ಮಾನವಕುಲಕ್ಕೆ ಸಂದೇಶವನ್ನು ನೀಡಿದ್ದಾರೆ. ಶಾಂತಿಪರ್ವದಲ್ಲಿ ಮನುಕುಲ ಯಾವ ರೀತಿಯಲ್ಲಿ ಮುನ್ನಡೆಯಬೇಕು ಎನ್ನುವ ಕುರಿತು ದಿವ್ಯ ಸಂದೇಶ ಅಡಕವಾಗಿದೆ ಎಂದು ನುಡಿದರು.
ರಾಘವೇಂದ್ರ ಸ್ವಾಮಿಗಳು ಕಲಿಯುಗದ ಕಲ್ಪತರು. ಬೇಡಿದ್ದನ್ನು ನೀಡುವ ಕಾಮಧೇನು. ಅವರ ಗ್ರಂಥಗಳ ಅಧ್ಯಯನದಿಂದಲೇ ಅವರಿಗೆ ನಾವು ಗೌರವ ಸಮರ್ಪಣೆ ಮಾಡಬೇಕು ಎಂದರು. ರಾಯರು ಸಕಲ ವರ್ಗ ಮತ್ತು ಸಮುದಾಯದವರಿಗೆ ಅನುಗ್ರಹ ಮಾಡಿದ್ದಾರೆ. ಅವರ ಜೀವನ ಮತ್ತು ಸಂದೇಶವನ್ನು ಪಾಲಿಸೋಣ ಎಂದು ಅವರು ಹೇಳಿದರು. ಶ್ರೀ ರಾಘವೇಂದ್ರಸ್ವಾಮಿ ಸನ್ನಿಧಿ ಉತ್ತರಾದಿ ಮಠದ ವ್ಯವಸ್ಥಾಪಕ, ಹಿರಿಯೂರು ರಾಘವೇಂದ್ರ ಹಾಗೂ ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net