

ವಿಜಯವಾಣಿ ಸುದ್ದಿಜಾಲ ಮಂಗಳೂರು
ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಸಂಬಂಧಿಸಿ ಬಿಜೆಪಿ ಚುನಾಯಿತ ಜನಪ್ರತಿನಿಧಿಗಳು ಪ್ರತಿಭಟನೆ ನಡೆಸಿದ್ದಾರೆ. ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ಜಿಲ್ಲೆಯ ಬಿಜೆಪಿ ನಾಯಕರು ನೀರಿನಿಂದ ತೆಗೆದ ಮೀನಿನಂತೆ ಆಗಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ವಾಗ್ದಾಳಿ ನಡೆಸಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆದರಿಸಿ ಅಧಿಕಾರಿಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು ಎನ್ನುವ ಬಿಜೆಪಿ ನಾಯಕರ ತಂತ್ರ ಫಲಿಸದು. ಈಗ ಅವರು ಹೇಳಿದ್ದು ಎಲ್ಲವೂ ನಡೆಯಲ್ಲ. ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಕಡಿಮೆ ಶಾಸಕರು ಇರಬಹುದು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಬಲಿಷ್ಠ ಸರ್ಕಾರ ಇದೆ. ನ್ಯಾಯಪರವಾಗಿ ಕೆಲಸ ಮಾಡುವ ಅಧಿಕಾರಿಗಳು ಯಾರದೇ ಬೆದರಿಕೆಗಳಿಗೆ ಅಂಜಬೇಕಾಗಿಲ್ಲ ಎಂದು ಹೇಳಿದರು.
ಈ ಹಿಂದೆ ಬಿಜೆಪಿ ರಾಜ್ಯದಲ್ಲಿ ಸರ್ಕಾರ ನಡೆಸುತ್ತಿದ್ದ ವೇಳೆ ಅವರಿಗೆ ಬೇಕಾಗುವ ಜಿಲ್ಲಾಧಿಕಾರಿಯನ್ನು ತಂದು ಸಾಕಷ್ಟು ಅಕ್ರಮಗಳನ್ನು ಬಿಜೆಪಿಯವರು ನಡೆಸಿದ್ದರು. ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಅಕ್ರಮ ಸಕ್ರಮ ಯೋಜನೆಯಲ್ಲಿ 71 ಪ್ರಕರಣಗಳು ಕಾನೂನು ಬಾಹಿರವಾಗಿ ನಡೆದಿರುವ ಬಗ್ಗೆ ದೂರು ನೀಡಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಉಜ್ವಲ ಯೋಜನೆಯನ್ನು ಕ್ಷೇತ್ರದ ಮತದಾರನೂ ಅಲ್ಲದ, ಶಾಸಕನೂ ಅಲ್ಲದವರಿಂದ ಹಂಚಿಕೆ ಮಾಡಲಾಗಿತ್ತು. ಇಂತಹ ದಬ್ಬಾಳಿಕೆಗಳು ಬಿಜೆಪಿ ಆಡಳಿತದಲ್ಲಿ ಅಧಿಕಾರಿಗಳ ಮೂಲಕ ನಡೆಸಲಾಗುತ್ತಿತ್ತು. ಅದನ್ನೀಗ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅಧಿಕಾರಿಗಳನ್ನು ಬೆದರಿಸುವ ತಂತ್ರವನ್ನು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಶಶಿಧರ ಹೆಗ್ಡೆ, ಲ್ಯಾನ್ಸಿ ಲಾಟ್‌ಪಿಂಟೋ, ಶುಭೋದಯ ಆಳ್ವ, ಜಯಶೀಲ ಅಡ್ಯಂತಾಯ, ಶಾಹುಲ್ ಹಮೀದ್, ಪ್ರಥ್ವಿರಾಜ್, ಜೋಕಿಂ ಡಿಸೋಜಾ, ವಿಶ್ವಾಸ್ ದಾಸ್, ಚಂದ್ರ ಪ್ರಕಾಶ್ ಶೆಟ್ಟಿ, ಬೇಬಿ ಕುಂದರ್, ಜೆ.ಅಬ್ದುಲ್ ಸಲೀಂ, ಪ್ರಕಾಶ್ ಸಾಲಿಯಾನ್,ಎಸ್.ಅಪ್ಪಿ, ಜಯಶೀಲ ಅಡ್ಯಂತಾಯ, ಸುಹಾನ್ ಆಳ್ವ, ಶಬೀರ್ ಎಸ್ ಮೊದಲಾದವರು ಉಪಸ್ಥಿತರಿದ್ದರು.