

ಬಾಳೆಹೊನ್ನೂರು: ಸಮೀಪದ ಅಡಿಗೆಬೈಲು ಗ್ರಾಮದ ಸರಗಳಲೆ ಕೂಗು ರಾಮನಾಥ ಭೂತೇಶ್ವರ, ರಾಮಾಂಜನೇಯ ಹಾಗೂ ಪರಿವಾರ ದೇವರುಗಳ ವಾರ್ಷಿಕ ಸುಗ್ಗಿಹಬ್ಬ, ಕೆಂಡಾರ್ಚನೆ ಶನಿವಾರ ಮತ್ತು ಭಾನುವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಶನಿವಾರ ದೇವಸ್ಥಾನ ಹಾಗೂ ಸುಗ್ಗಿ ಗದ್ದೆಯಲ್ಲಿ ಸುಗ್ಗಿ ಉತ್ಸವ ನಡೆಯಿತು. ಭಾನುವಾರ ಧಾರ್ಮಿಕ ಕಾರ್ಯದಲ್ಲಿ ಮಂಗಳ ವಾದ್ಯಗಳೊಂದಿಗೆ ಹೊಂತೆ ಹೊತ್ತಿಸಿ, ಆರತಿ ಎತ್ತಿಸಿ ಕೂಗು ರಾಮನಾಥ, ರಾಮಾಂಜನೇಯ, ಭೂತೇಶ್ವರ ಹಾಗೂ ಪರಿವಾರದೇವತೆಗಳ ಉತ್ಸವ ಮೂರ್ತಿಯನ್ನು ಹೊತ್ತು ಕೆಂಡ ಹಾಯಲಾಯಿತು. ಬಳಿಕ ನೂರಾರು ಭಕ್ತರು ಕೆಂಡ ಹಾಯ್ದು ಭಕ್ತಿ ಸಮರ್ಪಿಸಿದರು.
ದೇವಸ್ಥಾನದ ಸುತ್ತಲೂ ವಿವಿಧ ವಾದ್ಯಗೋಷ್ಠಿಯೊಂದಿಗೆ ರಾಮಾಂಜನೇಯ, ಕೂಗು ರಾವನಾಥ, ಭೂತೇಶ್ವರ, ದುರ್ಗಾ ಪರಮೇಶ್ವರಿ ದೇವಿ, ಜಟ್ಟಿಗೇಶ್ವರ ಹಾಗೂ ಹುಲಿ ಚೌಡೇಶ್ವರಿ ಅಮ್ಮನವರ ಉತ್ಸವ ಮೂರ್ತಿಗಳ ಉತ್ಸವ ನಡೆಸಲಾಯಿತು.
ಕೆಂಡಾರ್ಚನೆಯ ನಂತರ ದರ್ಶನ ಪಾತ್ರಿಯಿಂದ ಹೇಳಿಕೆ, ಕೇಳಿಕೆ, ಮಹಾಮಂಗಳಾರತಿ, ಹಣ್ಣುಕಾಯಿ ಹರಕೆ ಒಪ್ಪಿಸುವುದು ಮತ್ತು ಹರಕೆ ಕಟ್ಟಿಕೊಳ್ಳುವ ಕೈಂಕರ್ಯಗಳು ನೆರವೇರಿದವು. ಅರ್ಚಕ ಎಸ್.ಪಿ.ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದವು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.