ನಾಯಕರ ಪ್ರಚೋದನಕಾರಿ ಭಾಷಣ ಕೊಲೆಗೆ ಕಾರಣ: ರಮಾನಾಥ ರೈ ಆರೋಪ

ramanath rain new
Published on

ಮಂಗಳೂರು: ಯಾರದೋ ರಾಜಕೀಯ ಲಾಭಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುರ್ಬಲ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಯುವಜನರ ಕೊಲೆಗಳು ನಿರಂತರ ನಡೆಯುತ್ತಿವೆ. ನಾಯಕರ ಪ್ರಚೋದನಕಾರಿ ಭಾಷಣಗಳೇ ಇಲ್ಲಿ ಅಮಾಯಕ ಯುವಕರ ಕೊಲೆಗಳಿಗೆ ಪ್ರೇರಣೆ ನೀಡುತ್ತಿವೆ. ಇಂತಹ ಮಾನವ ವಿರೋಧಿ ಕೃತ್ಯಗಳಿಗೆ ಪೂರ್ಣ ವಿರಾಮ ಹಾಕಬೇಕಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.


ಧರ್ಮ ಆಧಾರಿತ ನಡೆಯುವ ಕೊಲೆಗಳಲ್ಲಿ ಪ್ರಾಣ ಕಳೆದುಕೊಂಡವರು, ಜೈಲಿಗೆ ಹೋದವರು, ನ್ಯಾಯಾಲಯದಲ್ಲಿ ವಿವಿಧ ಪ್ರಕರಣಗಳನ್ನು ಎದುರಿಸುತ್ತಿರುವವರು ಎಲ್ಲರೂ ಹಿಂದುಳಿದ, ದುರ್ಬಲ ಹಿಂದು ಹಾಗೂ ಮುಸ್ಲಿಂ ಹುಡುಗರೇ ಆಗಿದ್ದಾರೆ. ಅಧಿಕಾರ ಅನುಭವಿಸುವವರು ಬೇರೆಯೇ ಜನರು ಎನ್ನುವುದು ಸಾಮಾನ್ಯ ಸತ್ಯವಾಗಿದೆ ಎಂದು ಅವರು ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.


ಒಂದು ಊರನ್ನು ಕೇಂದ್ರೀಕರಿಸಿ ಕೆಲವೇ ದಿನಗಳ ಅಂತರದಲ್ಲಿ ಎರಡು ಕೊಲೆಗಳಾಗಿವೆ. ಒಂದು ಕೊಲೆ ನಡೆದಾಗ ಸರ್ಕಾರ, ಪೊಲೀಸ್ ಇಲಾಖೆ ಎಚ್ಚರ ವಹಿಸಿದ್ದರೆ ಇನ್ನೊಂದು ಕೊಲೆಯನ್ನು ತಪ್ಪಿಸಬಹುದಿತ್ತು. ನೈಜ ಕೊಲೆಗಾರರನ್ನು ಪತ್ತೆಹಚ್ಚಿ ಅವರನ್ನು ಕಠಿಣ ಶಿಕ್ಷಗೆ ಗುರಿಪಡಿಸುವ ಹಾಗೂ ಕೊಲೆಯಾದ ಪ್ರವೀಣ್ ನೆಟ್ಟಾರ್ ಹಾಗೂ ಮಸೂದ್ ಕುಟುಂಬಗಳಿಗೆ ತಾರತಮ್ಯವಿಲ್ಲದೆ ತಲಾ 25 ಲಕ್ಷ ರೂ ಪರಿಹಾರ ನೀಡುವ ಕೆಲಸ ನಡೆಯಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.


ಜಿಲ್ಲೆಯಲ್ಲಿ ಹಿಂದೆ ಕೋಮು ಗಲಭೆ ಸಂಭವಿಸಿ ಕೊಲೆಗಳು ನಡೆಯುತ್ತಿದ್ದವು. ಮತದ ಆಧಾರದಲ್ಲಿ ಓರ್ವನನ್ನು ಟಾರ್ಗೆಟ್ ಮಾಡಿ ವ್ಯವಸ್ಥಿತವಾಗಿ ಕೊಲೆ ನಡೆಸುವುದು ಇತ್ತೀಚಿನ ವರ್ಷಗಳ ಬೆಳವಣಿಗೆ. ಪ್ರಮುಖ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಕೊಲೆ ರಾಜಕೀಯ ಆರಂಭಗೊಳ್ಳುತ್ತದೆ. ಇಂತಹ ಪ್ರಕರಣಗಳಲ್ಲಿ ಹತ್ಯೆಯಾಗುವವರಿಗೆ ‘ಹುತಾತ್ಮ’ ಸ್ಥಾನ ಬಿಟ್ಟರೆ ಬೇರೆ ಯಾವುದೂ ಸಿಗುವುದಿಲ್ಲ ಎಂದು ಅವರು ಆಪಾದಿಸಿದರು.


ಇಂತಹ ಕೊಲೆಗಳು ನಡಯುವ ಪ್ರತೀ ಸಂದರ್ಭ ಕೊಲೆ ಮಾಡುವವರು ಮಾತ್ರ ಶಿಕ್ಷೆಗೆ ಒಳಗಾಗುತ್ತಾರೆ. ಆದರೆ ಕೊಲೆಯ ಹಿಂದಿರುವ ಶಕ್ತಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕೊಲೆ ಹಿಂದಿರುವ ಸೂತ್ರದಾರರನ್ನು ಪತ್ತೆ ಹಚ್ಚಿ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದರೆ ಮಾತ್ರ ಇಂದಿನ ಸಮಸ್ಯೆಗೆ ಪೂರ್ಣ ವಿರಾಮ ಹಾಕಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ. ಹರಿನಾಥ್, ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಕಾಂಗ್ರೆಸ್ ಹಿಂದುಳಿದ ವಿಭಾಗದ ಜಿಲ್ಲಾ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಮುಖಂಡರಾದ ದೀಪಕ್ ಪೂಜಾರಿ, ಪ್ರತಭಾ ಕುಳಾಯಿ, ಪದ್ಮನಾಭ ಅಮೀನ್, ನಝೀರ್ ಬಜಾಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net