

ಕಿಕ್ಕೇರಿ: ಪಟ್ಟಣ ಸೇರಿದಂತೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ರಾಮದೇವರ ನಾಮಸ್ತುತಿ ಶ್ರದ್ಧಾಭಕ್ತಿಯಿಂದ ಜರುಗಿತು.
ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿ ಪ್ರತಿಷ್ಠಾಪನೆ ವೇಳೆ ಜನತೆ ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ರಾಮಮಂದಿರ ವಿವಿಧ ದೇಗುಲಗಳಿಗೆ ತೆರಳಿದರು.
ರಾಮದೇವರ ನಾಮ ಪಠಣೆ ಮಾಡಿದರು. ಜೈಶ್ರೀರಾಮ್ ಎಂದು ಜೈಕಾರ ಹಾಕಿದರು. ಭಜನೆ, ಕೀರ್ತನೆ ಹಾಡಿದರು. ಶ್ರದ್ಧೆಯಿಂದ ದೀರ್ಘದಂಡ ನಮಸ್ಕಾರ ಹಾಕಿದರು. ದೇವರಿಗೆ ಹಣ್ಣು, ಕಾಯಿ ಅರ್ಪಿಸಿ ಆರತಿ ಬೆಳಗಿದರು. ಕೇಸರಿ ವಸ್ತ್ರಧಾರಣೆ ಮಾಡಿ, ಕೇಸರಿ ತಿಲಕ ಇಟ್ಟುಕೊಂಡು ಸಂಭ್ರಮಿಸಿದರು.
ಪಟ್ಟಣದ ಬ್ರಹ್ಮೇಶ್ವರ ದೇಗುಲದಲ್ಲಿ ರಾಮತಾರಕ ಹೋಮ ನಡೆಯಿತು. ಕೆಂಪೇಗೌಡ ಒಕ್ಕಲಿಗ ರಾಮಮಂದಿರ, ಕುರುಹಿನಶೆಟ್ಟಿ ಅಂಗಡಿಬೀದಿ, ಹಳೇ ಭಜನೆಮನೆ, ಒಕ್ಕಲಿಗ ರಾಮಮಂದಿರ, ಮಾದಾಪುರ ವಿಪ್ರ ರಾಮಮಂದಿರ, ಕೋಟಹಳ್ಳಿ, ಮಂದಗೆರೆ, ಸಾಸಲು, ಅಂಕನಹಳ್ಳಿ, ರಾಮನಹಳ್ಳಿ, ಕೋಟಹಳ್ಳಿ, ಗೋವಿಂದನಹಳ್ಳಿ, ಗೂಡೆಹೊಸಹಳ್ಳಿ, ಕಡಹೆಮ್ಮಿಗೆ, ಸೊಳ್ಳೇಪುರ, ಡಾಣನಹಳ್ಳಿ ಗ್ರಾಮದ ಹನುಮ, ಮತ್ತಿತರ ದೇಗುಲಗಳಲ್ಲಿ ರಾಮದೇವರ ಪ್ರಾಣ ಪ್ರತಿಷ್ಠಾಪನೆ ವೇಳೆ ಪೂಜೆಗಳು ನಡೆದವು.
ಹೋಬಳಿಯಾದ್ಯಂತ ಎತ್ತ ನೋಡಿದರೂ ಕೇಸರಿ ಧ್ವಜಗಳು ಹಾರಾಡಿದವು. ಜಾತಿ ಭೇದ ಮರೆತು ಎಲ್ಲ ಸಮುದಾಯದವರು ಒಗ್ಗೂಡಿ ದೇಗುಲಗಳಿಗೆ ತೆರಳಿ ರಾಮಭಜನೆ ಮಾಡಿದರು. ಮನೆ ಮನೆಗಳಲ್ಲಿ ಪ್ರತಿಷ್ಠಾಪನೆ ವೇಳೆ ಹಣತೆ ಹಚ್ಚಿ, ಶಂಖ ಊದಿದರು. ಘಂಟೆ, ಜಗಟೆ ನಾದ ಮೊಳಗಿಸಿ ಸಂಭ್ರಮಿಸಿದರು.
ಅನ್ನದಾಸೋಹ, ನೀರು ಮಜ್ಜಿಗೆ, ಪಾನಕ, ಕೋಸಂಬರಿ, ರಸಾಯನ, ಸಿಹಿ ಬೂಂದಿ, ಲಡ್ಡು ಮತ್ತಿತರ ಪ್ರಸಾದಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.