

ಗಂಗಾಧರ್ ಬೈರಾಪಟ್ಟಣ ರಾಮನಗರ
ಅಬಕಾರಿ ಇಲಾಖೆ ದಾಸ್ತಾನು ಮಳಿಗೆಯಲ್ಲಿಯೇ ಅಕ್ರಮವಾಗಿ ಮದ್ಯ ಸಾಗಿಸಲಾಗುತ್ತಿತ್ತೇ? ಇಂತಹ ಒಂದು ಪ್ರಶ್ನೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ನಾನಾ ತರಹದ ಚರ್ಚೆಗಳು ಆರಂಭಗೊಂಡಿದ್ದು, ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲು ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ರಾಮನಗರ ಅಬಕಾರಿ ಇಲಾಖೆ ಅಧಿಕಾರಿಗಳು, ಮೂರು ದಿನಗಳ ಹಿಂದೆ ವಿನಯ್ ಕುಮಾರ್ ಎಂಬುವರನ್ನು ವಶಕ್ಕೆ ಪಡೆದು 46 ಲೀಟರ್ ಮದ್ಯ ಹಾಗೂ ಒಂದು ಕಾರು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ. ಆದರೆ ಈ ಪ್ರಕರಣದೊಂದಿಗೆ ಕಳೆದ ಹಲವು ವರ್ಷಗಳಿಂದಲೂ ದಾಸ್ತಾನು ಮಳಿಗೆಯಲ್ಲಿ ರಾತ್ರಿ ವೇಳೆ ಅಕ್ರಮವಾಗಿ ಮದ್ಯ ಸಾಗಾಟ ಮಾಡಲಾಗುತ್ತಿತ್ತು ಎನ್ನುವ ಚರ್ಚೆ ಆರಂಭಗೊಂಡಿದ್ದು, ಅಧಿಕಾರಿಗಳು ಮಾತ್ರ ಈ ಮರ್ಮದ ಗುಟ್ಟು ಬಿಟ್ಟುಕೊಡುತ್ತಿಲ್ಲ.
ವ್ಯವಸ್ಥಾಪಕರ ಬದಲಾವಣೆ: ರಾಮನಗರ ಅಬಕಾರಿ ದಾಸ್ತಾನು ಮಳಿಗೆಯಲ್ಲಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇಲ್ಲಿನ ವ್ಯವಸ್ಥಾಪಕ ಶಿವಲಿಂಗಯ್ಯ ಎಂಬುವವರನ್ನು ಬದಲಾವಣೆ ಮಾಡಲಾಗಿದೆ. ಅವರ ಜಾಗಕ್ಕೆ ಶಿವರಾಜ್ ಎಂಬುವರನ್ನು ಸರ್ಕಾರ ನಿಯೋಜಿಸಿದೆ. ಇದರೊಂದಿಗೆ ಅಕ್ರಮದಲ್ಲಿ ವ್ಯವಸ್ಥಾಪಕನ ನಂಟು ಇತ್ತು ಎನ್ನುವುದು ಖಚಿತವಾದಂತೆ ಆಗಿದೆ.
ಬೆಂಗಳೂರಿನ ತಂಡ: ರಾಮನಗರ ಅಬಕಾರಿ ಅಧಿಕಾರಿಗಳು ಅಕ್ರಮ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದರೂ ಇಡೀ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಸಲಾಗಿದೆ ಎನ್ನುವ ಚರ್ಚೆಗಳು ಮದ್ಯ ಮಾರಾಟಗಾರರ ನಡುವೆಯೇ ನಡೆದಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಅಬಕಾರಿ ಇಲಾಖೆ ಬೆಂಗಳೂರಿನಿಂದಲೇ ತಂಡ ಕಳುಹಿಸಿ ಇಲ್ಲಿನ ಎಲ್ಲ ವ್ಯವಹಾರಗಳ ದಾಖಲೆಗಳನ್ನು ಪರಿಶೀಲನೆ ಮಾಡಿದೆ ಎಂದು ತಿಳಿದು ಬಂದಿದೆ. ಇದರಿಂದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆವರುವಂತೆ ಆಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಯಾವೊಬ್ಬ ಅಧಿಕಾರಿಯೂ ಪ್ರಕರಣ ಸಂಬಂಧ ಮಾಹಿತಿ ನೀಡಲು ಅಥವಾ ಮಾತನಾಡಲು ಮುಂದೆ ಬರುತ್ತಿಲ್ಲ.
ಹಲವು ವರ್ಷಗಳ ಅಕ್ರಮ: ಮೂರು ದಿನಗಳ ಹಿಂದೆ ಬೆಳಕಿಗೆ ಬಂದ ಪ್ರಕರಣ ಸ್ಯಾಂಪಲ್ ಅಷ್ಟೇ, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತನಿಖೆ ನಡೆಸಿದರೆ, ಕಳೆದ ಹಲವು ವರ್ಷಗಳಿಂದಲೂ ನಡೆಯುತ್ತಿದ್ದ ಭಾರೀ ಅಕ್ರಮ ಹೊರ ಬರಲಿದೆ ಎಂದು ಹೇಳಲಾಗಿದೆ. ಒಂದು ವೇಳೆ ತನಿಖೆ ನಡೆಸಿದರೆ ಖಂಡಿತವಾಗಿ ಬಹಳಷ್ಟು ಅಧಿಕಾರಿಗಳ ತಲೆದಂಡ ಖಚಿತ.
ಸ್ವಿಚ್ಡ್ ಆಫ್: ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆಯಲು ಜಿಲ್ಲೆಯ ಅಬಕಾರಿ ಉಪ ಆಯುಕ್ತರನ್ನು ಮೊಬೈಲ್ ಮೂಲಕ ಸಂಪರ್ಕಿಸಿದರೆ ಅವರ ಮೊಬೈಲ್ ಸ್ವಿಚ್ಢ್ ಆಫ್ ಎಂದು ಬರುತ್ತಿದೆ. ಭಾನುವಾರದಿಂದಲೂ ಅಬಕಾರಿ ಡಿಸಿ ಸಂಪರ್ಕಕ್ಕೆ ಸಿಗುತಿಲ್ಲ. ಪ್ರಕರಣ ದಾಖಲು ಮಾಡಿಕೊಂಡಿರುವ ಅಬಕಾರಿ ಇನ್‌ಸ್ಪೆಕ್ಟರ್ ಪ್ರಕರಣ ದಾಖಲಾಗಿರುವುದನ್ನು ಖಚಿತಪಡಿಸಿದ್ದಾರೆ.
ಅಪ್ಪ - ಮಗ: ಅಬಕಾರಿ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಸಿಕ್ಕಿಬಿದ್ದಿರುವ ವಿನಯ್ ಕುಮಾರ್ ಮತ್ತು ಹಿಂದಿನ ಮಳಿಗೆ ವ್ಯವಸ್ಥಾಪಕ ಶಿವಲಿಂಗಯ್ಯ ಇಬ್ಬರೂ ತಂದೆ ಮಗನಾಗಿದ್ದು, ಇಡೀ ಪ್ರಕರಣದ ಹಿಂದೆ ಯಾರೆಲ್ಲಾ ಇರಬಹುದು ಎನ್ನುವ ಶಂಕೆಯೂ ಮೂಡಿದೆ.