

ರಾಮನಗರ: ಹೊರ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಕಾಯಂಗೊಳಿಸುವಂತೆ ಆಗ್ರಹಿಸಿ ಪೌರ ಕಾರ್ಮಿಕರು ಶುಕ್ರವಾರದಿಂದ ಅನಿ-ರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ನಗರದ ಜಿಲ್ಲಾ-ಧಿಕಾರಿ ಕಚೇರಿ ಸಂಕೀರ್ಣದ ಎದುರು ಮುಷ್ಕರ ಆರಂಭಿಸಿರುವ ಪೌರಕಾರ್ಮಿಕರು ಸರ್ಕಾರ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಕಳೆದ ಹಲವು ತಿಂಗಳ ಹಿಂದೆಯೇ ರಾಜ್ಯದಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರನ್ನು ಕಾಯಂಗೊಳಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಸೇವೆ ಕಾಯಂಗೆ ಆಗ್ರಹಿಸಿ ಸ್ವಚ್ಛತೆ ಮಾಡುವುದು, ಕುಡಿಯವ ನೀರು ಪೂರೆಕೆ ತಡೆಹಿಡಿದು ಮುಷ್ಕರದಲ್ಲಿ ಭಾಗವಹಿಸಿದ್ದೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಎರಡು ತಿಂಗಳು ಕೆಲಸ ನಿರ್ವಹಿಸಿದರೆ, ಒಂದು ತಿಂಗಳ ವೇತನ ನೀಡಲಾಗುತ್ತಿದೆ. ಆಹಾರ ಪದಾರ್ಥಗಳು ಸೇರಿ ಎಲ್ಲ ವಸ್ತುಗಳ ಬೆಲೆ ಗಗನಮುಖಿಯಾಗಿದೆ. ಸಮಯಕ್ಕೆ ಸರಿಯಾಗಿ ವೇತನವಾಗದೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಉದ್ಯೋಗ ಕಾಯಂ ಮಾಡದಿದ್ದರೆ ಜೀವನ ಕಷ್ಟವಾಗಲಿದೆ ಎಂದು ನೋವು ತೋಡಿಕೊಂಡರು.
ಹೊರಗುತ್ತಿಗೆ ಪೌರ ಕಾರ್ಮಿಕರ ಸಂದ ಜಿಲ್ಲಾಧ್ಯಕ್ಷ ಚಲಪತಿ ಮಾತನಾಡಿ, ಬಿಬಿಎಂಪಿ ಸೇರಿ ರಾಜ್ಯದ 314 ನಗರ ಸ್ಥಳಿಯ ಸಂಸ್ಥೆಗಳಲ್ಲಿ 30 ಸಾವಿರ ಪೌರಕಾರ್ಮಿಕರು ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕಸ ಸಾಗಿಸುವ ವಾಹನ ಚಾಲಕರಾಗಿ, ಬಾಟಲ್ಮ್ಯಾನ್, ಸ್ವಚ್ಛತಾ ಹಾಗೂ ಕುಡಿಯುವ ನೀರು ಪೂರೈಕೆ ಮಾಡುವ ನೀರು ಗಂಟಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಗರ ಸ್ಥಳಿಯ ಸಂಸ್ಥೆಗಳಲ್ಲಿ ಖಾಲಿ ಇರುವ ಪೌರ ಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡುವಂತೆ ಹಾಗೂ ಹೊರಗುತ್ತಿಗೆ ನೌಕರರನ್ನು ಗುತ್ತಿಗೆ ಪದ್ಧತಿ ಬದಲು ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ವೇತನಕ್ಕೆ ಒಳಪಡಿಸುವಂತೆ ಮೇ 19ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದವು. ಈ ವೇಳೆ ಸರ್ಕಾರಕ್ಕೂ ಗಡುವು ನೀಡಿದ್ದೆವು. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರಿಂದ ಅನಿವಾರ್ಯವಾಗಿ ಅರ್ನಿದಿಷ್ಟಾವಧಿ ಹೋರಾಟ ಹಮ್ಮಿಕೊಂಡಿದ್ದೇವೆ ಎಂದರು.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಪೌರಕಾರ್ಮಿಕರು, ಹೊರಗುತ್ತಿಗೆ ನೌಕರರು ಕಸ ಸಾಗಿಸುವ ವಾಹನ ಚಾಲಕರು , ವಾಟರ್ಮ್ಯಾನ್ಗಳು, ಡೇಟಾ ಎಂಟ್ರಿ ಆಪರೇಟರ್ಗಳು, ಕಸ ನಿರ್ವಹಣೆ ಸಹಾಯಕರು, ಒಳಚರಂಡಿ ಕಾರ್ಮಿಕರು, ಸ್ಮಶಾನ ಕಾವಲುಗಾರರು, ಸ್ಯಾನಿಟರಿ ಸೂಪರ್ವೆಸರ್ಗಳು ಸೇರಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ಮಿಕರು ಪಾಲ್ಗೊಂಡಿದ್ದರು.