ರಾಮನಗರಕ್ಕೆ ನವಬೆಂಗಳೂರು ಬೇಡವೇ ಬೇಡ: ವಿಚಾರ ಸಂಕಿರಣದಲ್ಲಿ ಒಕ್ಕೊರಲ ಅಭಿಪ್ರಾಯ

rmg
Published on

ಚನ್ನಪಟ್ಟಣ: ಸಹಜ ಸೊಬಗಿನ ರಾಮನಗರಕ್ಕೆ ನವ ಬೆಂಗಳೂರು ಎನ್ನುವ ಹೆಸರು ಬೇಡ ಎನ್ನುವ ಒಕ್ಕೊರಲ ಅಭಿಪ್ರಾಯ ಚನ್ನಪಟ್ಟಣದಲ್ಲಿ ಭಾನುವಾರ ನಡೆದ ಸಂವಾದದಲ್ಲಿ ಹೊರಹೊಮ್ಮಿತು.

ನವ ಬೆಂಗಳೂರು ಎಂಬುದು ಕಾಂಕ್ರೀಟ್ ಕಾಡಿನ ಪ್ರತಿರೂಪ, ಜಿಲ್ಲೆಯ ಪ್ರಕೃತಿ, ಸಂಸ್ಕೃತಿ ಮತ್ತು ಜನರ ಬದುಕು ಹೀಗೆ ಉಳಿಯಬೇಕು, ಇಲ್ಲವಾದರೆ ನಮ್ಮತನ ಸಂಪೂರ್ಣವಾಗಿ ನಶಿಸಲಿದೆ ಎಂಬ ಸಂದೇಶವನ್ನು ಮುಖಂಡರು ಹೊರಹಾಕಿದರು. ಈ ವಿಷಯ ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ರಾಜ್ಯ ರೈತಸಂಘದ ಸಹಯೋಗದೊಂದಿಗೆ ನವಕರ್ನಾಟಕ ಯುವಶಕ್ತಿ ಸಂಘಟನೆ ನಗರದ ಶತಮಾನೋತ್ಸವ ಭವನದಲ್ಲಿ ಭಾನುವಾರ ವಿಚಾರ ಸಂಕಿರಣ ಆಯೋಜಿಸಿತ್ತು. ಇಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರು ಮತ್ತು ಗಣ್ಯರು ಹೆಸರು ಬದಲಾವಣೆ ಬಗ್ಗೆ ಆತಂಕ ವ್ಯಕ್ತಪಡಿಸುವ ಜತೆಗೆ ವಿರೋಧ ವ್ಯಕ್ತಪಡಿಸಿದರು.

ರಿಯಲ್ ಎಸ್ಟೇಟ್ ಉದ್ಯಮಿಗಳ ಹುನ್ನಾರ: ಜಿಲ್ಲೆಯ ರೈತರು ಹಾಗೂ ನಿವಾಸಿಗಳಿಗೆ ನವಬೆಂಗಳೂರು ಎಂಬ ಹೆಸರಿನಿಂದ ಎರಡು ಹೊತ್ತು ಊಟ ಸಿಗುವುದಿಲ್ಲ. ಈ ನೆಲಕ್ಕೆ ಬೆಂಗಳೂರಿನ ಲೇಬಲ್ ಅಂಟಿಸಿ ಬಂಡವಾಳಶಾಹಿಗಳಿಗೆ ಭೂಮಿ ನೀಡಲು ಕೆಲ ಕಮಿಷನ್ ಏಜೆಂಟ್‌ಗಳು ಸೃಷ್ಟಿಸುತ್ತಿರುವ ಭೂಮ್ ಇದು. ಇದನ್ನು ನಂಬಿದರೆ ಜಿಲ್ಲೆಯ ಇತಿಹಾಸ ಅಳಿಸುವ ಅಪಾಯವಿದೆ ಎಂದು ಪತ್ರಕರ್ತ ಸು.ತ.ರಾಮೇಗೌಡ ಎಚ್ಚರಿಸಿದರು.

ವಾಚ್‌ಮನ್‌ಗಳಾಗಲು ಸಿದ್ಧರಿಲ್ಲ: ಸಭೆಯಲ್ಲಿ ಅಭಿಪ್ರಾಯ ಮಂಡಿಸಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ರಾಮು, ರಾಮನಗರ ಶ್ರೀಮಂತ ಕೃಷಿ ಪ್ರದೇಶ. ಜಿಲ್ಲೆಯನ್ನು ಕಾಡುತ್ತಿದ್ದ ನೀರಾವರಿ ಸಮಸ್ಯೆಗೆ ಇದೀಗ ತಾನೇ ಪರಿಹಾರ ದೊರೆತು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ನಮ್ಮ ಜಮೀನನ್ನು ಕಸಿದು ಕೈಗಾರಿಕೆಗಳಿಗೆ, ಕೆಲ ಬಂಡವಾಳ ಶಾಹಿಗಳಿಗೆ ನೀಡಿ ನಮ್ಮದೇ ಭೂಮಿಗೆ ನಮ್ಮನ್ನು ವಾಚ್‌ಮನ್ ಮಾಡುವ ಹುನ್ನಾರ ಇದರ ಹಿಂದಿದೆ. ಇಂತಹ ತಂತ್ರಕ್ಕೆ ಮರಳಾಗುವುದು ಬೇಡ ಎಂದರು.

ಬೆಕ್ಕಿಗೆ ಗಂಟೆ ಕಟ್ಟಿದ್ದೇವೆ: ನವಕರ್ನಾಟಕ ಯುವಶಕ್ತಿ ವೇದಿಕೆ ರಾಜ್ಯಾಧ್ಯಕ್ಷ ಕೆ.ಎನ್.ಲಿಂಗೇಗೌಡ ಮಾತನಾಡಿ, ನವಬೆಂಗಳೂರು ಹೆಸರನ್ನು ಸರ್ಕಾರದ ಮಟ್ಟದಲ್ಲಿರುವ ಕೆಲ ಮಂದಿ ಚಾಲ್ತಿಗೆ ತರುವ ಮೂಲಕ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ್ದಾರೆ. ಇದರ ವಿರುದ್ಧ ಜನಾಂದೋಲನ ರೂಪಿಸಬೇಕು ಎಂಬ ಉದ್ದೇಶದಿಂದ ವೇದಿಕೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಬೆಕ್ಕಿಗೆ ಗಂಟೆ ಕಟ್ಟಿದ್ದೇವೆ, ಸಾಧಕ ಬಾಧಕಗಳ ಕುರಿತು ಚರ್ಚೆ ರೂಪುಗೊಳ್ಳಬೇಕು. ಜಿಲ್ಲೆಯನ್ನು ಈಗಾಗಲೇ ಬೆಂಗಳೂರು ಮಹಾನಗರ ಸಾಕಷ್ಟು ಶೋಷಿಸಿದೆ. ಮುಂದೆ ನವಬೆಂಗಳೂರು ಹೆಸರಿನಿಂದ ಇಡೀ ಜಿಲ್ಲೆಯನ್ನು ನುಂಗುವುದಕ್ಕೆ ನಾವು ಅವಕಾಶ ನೀಡಬಾರದು ಎಂದರು. ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಸಾಹಿತಿ ಕೋ.ವೆಂ.ರಾಮಕೃಷ್ಣೇಗೌಡ, ಬೆಂಗಳೂರು ನಗರ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಸಿ.ಕೆ.ರಾಮೇಗೌಡ, ಶಿಕ್ಷಣ ತಜ್ಞ ಪ್ರೊ.ಮಲ್ಲಯ್ಯ ಮೊದಲಾದವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯ ನಿರ್ಣಯಗಳು: *ಯಾವುದೇ ಕಾರಣಕ್ಕೂ ನವಬೆಂಗಳೂರು ಹೆಸರು ಬೇಡ *ಕೃಷಿ, ತೋಟಗಾರಿಕೆ, ರೇಷ್ಮೆ ಉದ್ಯಮ, ಹೈನೋದ್ಯಮಕ್ಕೆ ಉತ್ತೇಜನ ನೀಡುವ ಯೋಜನೆಗಳನ್ನು ರೂಪಿಸಿ ರಾಮನಗರವನ್ನೇ ಹೊಸ ಮಾದರಿಯಾಗಿ ರೂಪಿಸಲಿ. * ಪ್ರಾಕೃತಿಕ ಸೊಬಗು ಹಾಳು ಮಾಡುವ ಪ್ರಯತ್ನವನ್ನು ಒಕ್ಕೊರಲಿನಿಂದ ಖಂಡಿಸಬೇಕು. * ಜಿಲ್ಲೆಯನ್ನು ಬೆಂಗಳೂರಿನ ಡಸ್ಟ್‌ಬಿನ್ ಆಗಿಸುವ ಪ್ರಯತ್ನಕ್ಕೆ ಅವಕಾಶ ನೀಡಬಾರದು. * ನವಬೆಂಗಳೂರಿನ ಅಪಾಯದ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಜನಾಂದೋಲನ ರೂಪಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net