ರಾಮನಗರದಲ್ಲಿ ಕರೊನಾ ಎದುರಿಸಲು ಡಿಜಿಟಲ್ ವಾರ್‌ರೂಂ

digital war room
Published on

ರಾಮನಗರ: ಕೋವಿಡ್ 19ರ ವಿರುದ್ಧ ಸಮರಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಗಣಕೀಕರಣಗೊಳಿಸಿ ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳುವ ಡಿಜಿಟಲ್ ವಾರ್ ರೂಂ ಅನ್ನು ಜಿಲ್ಲಾಡಳಿತ ಸಿದ್ಧಗೊಳಿಸುತ್ತಿದೆ.

ಜಿಲ್ಲಾ ಹಂತದಲ್ಲಿ ಇದೇ ಮೊದಲು ಎನ್ನಲಾಗುತ್ತಿರುವ ವಾರ್ ರೂಂ ರಾಮನಗರದಲ್ಲಿ ಸಿದ್ಧವಾಗುತ್ತಿದ್ದು, ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ತಮ್ಮ ಬಳಿ ಏನಿದೆ ಎನ್ನುವ ಹುಡುಕಾಟಕ್ಕೆ ಬ್ರೇಕ್ ಹಾಕಿ ತಕ್ಷಣಕ್ಕೆ ಸ್ಪಂದಿಸುವ ವ್ಯವಸ್ಥೆ ಇದಾಗಿದೆ. ಇದಕ್ಕಾಗಿ ಜಿಲ್ಲೆಯ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸುತ್ತಿದೆ.

ಏನಿದು ವಾರ್ ರೂಂ?: ಜಿಲ್ಲೆಯಲ್ಲಿ ಎಷ್ಟು ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ, ಇವುಗಳಲ್ಲಿರುವ ವೈದ್ಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಎಷ್ಟು, ಕೋವಿಡ್ ಚಿಕಿತ್ಸೆಗಾಗಿ ಏನೆಲ್ಲ ಸೌಕರ್ಯಗಳು ಮತ್ತು ವ್ಯವಸ್ಥೆ ಇದೆ ಎನ್ನುವ ಮಾಹಿತಿಗಳನ್ನು ಕಲೆ ಹಾಕಿ ಸಂಗ್ರಹಿಸಿಟ್ಟುಕೊಳ್ಳುವ ಕೆಲಸ ವಾರ್ ರೂಂನಲ್ಲಿ ನಡೆಯಲಿದೆ. ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆಗಾಗಿ ಎಲ್ಲೆಲ್ಲಿ ಏನೇನು ಲಭ್ಯವಿದೆ ಎನ್ನುವ ಹುಡುಕಾಟ ಮಾಡುವ ಬದಲು ಬೆರಳ ತುದಿಯಲ್ಲಿ ದೊರೆಯುವ ಮಾಹಿತಿ ಆಧಾರದ ಮೇಲೆ ಸಿಬ್ಬಂದಿ ಬಳಕೆ ಮಾಡಿಕೊಳ್ಳಲು ಮತ್ತು ರೋಗಿಯನ್ನು ಸೌಲಭ್ಯವಿರುವ ಆಸ್ಪತ್ರೆಗಳಿಗೆ ದಾಖಲು ಮಾಡಲು ಸುಲಭವಾಗುತ್ತದೆ.

ರೋಗಿಗಳ ಮಾಹಿತಿ: ಡಿಜಿಟಲ್ ವಾರ್ ರೂಂನಲ್ಲಿ ಕೋವಿಡ್‌ನ ಶಂಕಿತ ರೋಗಿಗಳ ಮಾಹಿತಿಯೂ ಲಭ್ಯವಾಗಲಿದೆ. ಜಿಲ್ಲೆಯಲ್ಲಿ ಈವರೆವಿಗೂ ನಿಗಾದಲ್ಲಿದ್ದ ರೋಗಿಗಳೂ ಸೇರಿ ಪ್ರತಿದಿನ ನಿಗಾಕ್ಕೆ ಒಳಪಡುವ ರೋಗಿಯ ಸಂಪೂರ್ಣ ಮಾಹಿತಿ ಇದರಲ್ಲಿ ಅಡಕವಾಗಲಿದೆ. ಶಂಕಿತ ರೋಗಿಯ ಪ್ರತಿ ಹಂತದ ಸಂಪೂರ್ಣ ಇತಿಹಾಸ ಬೆರಳ ತುದಿಯಲ್ಲಿ ಲಭ್ಯವಾಗಲಿದೆ. ಇದರ ಜತೆಗೆ ಕೋವಿಡ್‌ಗಾಗಿ ಸ್ಥಾಪಿಸಲಾಗಿರುವ ಹೆಲ್ಪ್ ಲೈನ್‌ಗೆ ಸಂಬಂಧಿಸಿದ ಮಾಹಿತಿಯನ್ನು ಒಳಪಡಿಸಲಾಗುತ್ತದೆ. ಇದರ ಜತೆಗೆ ಮತ್ತಷ್ಟು ಮಾಹಿತಿಗಳನ್ನು ಅಡಕ ಮಾಡುವ ಸಂಬಂಧ ಅಂತಿಮ ರೂಪುರೇಷೆ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ 4-5 ಕಂಪ್ಯೂಟರ್‌ಗಳನ್ನು ಬಳಕೆ ಮಾಡಿಕೊಂಡು ಕೋವಿಡ್‌ಗೆ ಸಂಬಂಧಿಸಿದ ಮಾಹಿತಿ ಜತೆಗೆ, ಆಸ್ಪತ್ರೆಗಳು ಮತ್ತು ಸಿಬ್ಬಂದಿ ಹಾಗೂ ಲಭ್ಯ ಸೌಕರ್ಯಗಳ ಮಾಹಿತಿಯನ್ನು ದಾಖಲು ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಕೆಲವೇ ದಿನಗಳಲ್ಲಿ ವಾರ್ ರೂಂ ಸೇವೆಗೆ ತೆರೆಯಲಿದೆ.

ಅಧಿಕಾರಿಗಳ ಬಳಕೆಗಷ್ಟೇ: ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರ ಸೂಚನೆ ಮೇರೆಗೆ ಸಿದ್ಧಗೊಳ್ಳುತ್ತಿರುವ ಡಿಜಿಟಲ್ ವಾರ್ ರೂಂನಲ್ಲಿರುವ ಮಾಹಿತಿಯನ್ನು ಕೇವಲ ಜಿಲ್ಲಾಧಿಕಾರಿ ಕಚೇರಿ, ಆರೋಗ್ಯ ಇಲಾಖೆ, ಜಿಪಂನ ಕೆಲವು ಇಲಾಖೆಗಳಿಗಷ್ಟೇ ಬಳಕೆ ಮಾಡುವ ಅವಕಾಶ ಇರುತ್ತದೆ.

ಎಲ್ಲರಿಗೂ ಪರೀಕ್ಷೆ: ಉಸಿರಾಟ ತೊಂದರೆ ಇರುವವರಲ್ಲೂ ಕರೊನಾ ಪಾಸಿಟಿವ್ ಬರುತ್ತಿರುವ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಉಸಿರಾಟ ತೊಂದರೆ ಇರುವ ರೋಗಿಗಳ ಮಾಹಿತಿ ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ. ಉಸಿರಾಟದ ತೊಂದರೆ ಇರುವ ರೋಗಿಗಳ ಮಾಹಿತಿಯನ್ನು ಪ್ರತಿ ಆಸ್ಪತ್ರೆಯಿಂದಲೂ ಕಲೆ ಹಾಕಲಾಗುತ್ತಿದ್ದು ಇವರನ್ನೂ ಕರೊನಾ ಪರೀಕ್ಷೆ ಒಳಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಸೂಚನೆ ಮೇರೆಗೆ ಡಿಜಿಟಲ್ ವಾರ್ ರೂಂ ಸಿದ್ಧವಾಗುತ್ತಿದೆ. ತುರ್ತು ಸಂದರ್ಭದಲ್ಲಿ ಜಿಲ್ಲೆಯಲ್ಲಿ ಲಭ್ಯವಿರುವ ಆರೋಗ್ಯ ಸೇವೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಬೆರಳ ತುದಿಗೆ ಲಭ್ಯವಾಗಿ, ಎಲ್ಲದಕ್ಕೂ ಸ್ಪಂದಿಸಲು ಸಹಕಾರಿಯಾಗಲಿದೆ. ಎಂ.ಎಸ್.ಅರ್ಚನಾ ಜಿಲ್ಲಾಧಿಕಾರಿ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net