

ರಾಮನಗರ: ನಿರೀಕ್ಷೆಯಂತೆ ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕೂಟಗಲ್ ಕ್ಷೇತ್ರದ ಸದಸ್ಯ ಎಚ್.ಎನ್. ಅಶೋಕ್ ಅವಿರೋಧ ಆಯ್ಕೆಯಾದರು.
ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಶೋಕ್ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಅವರು ಅಶೋಕ್ ಆಯ್ಕೆ ೋಷಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಜಿಪಂನ 22 ಸದಸ್ಯರ ಪೈಕಿ 20 ಸದಸ್ಯರು ಪಾಲ್ಗೊಂಡಿದ್ದರು.
ಮಾಗಡಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿರುವ ಕೂಟಗಲ್ ಜಿಪಂ ಕ್ಷೇತ್ರದ ಸದಸ್ಯರಾಗಿರುವ ಅಧ್ಯಕ್ಷ ಎಚ್.ಎನ್.ಅಶೋಕ್, ಜೆಡಿಎಸ್ ಚಿಹ್ನೆಯಲ್ಲಿ ಗೆದ್ದಿದ್ದರೂ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಬಾಕಿಯಿರುವ 8 ತಿಂಗಳ ಅವಧಿಯನ್ನು ಅವರು ಪೂರ್ಣಗೊಳಿಸಲಿದ್ದಾರೆ. ಕಾಂಗ್ರೆಸ್‌ನಲ್ಲಿ ನಡೆದಿದ್ದ ಅಧಿಕಾರ ಹಂಚಿಕೆ ಸೂತ್ರದಂತೆ ಅಶೋಕ್ ಅಧಿಕಾರ ಹಿಡಿದಿದ್ದಾರೆ. ಜಿಪಂ ನಿಕಟಪೂರ್ವ ಅಧ್ಯಕ್ಷ ಎಚ್. ಬಸಪ್ಪ ಆ.10ರಂದು ಸಲ್ಲಿಸಿದ್ದ ರಾಜೀನಾಮೆ ಆ. 24ರಂದು ಅಂಗೀಕಾರಗೊಂಡು ಗುರುವಾರ ಚುನಾವಣೆ ನಿಗದಿಯಾಗಿತ್ತು.
ನೂತನ ಅಧ್ಯಕ್ಷರನ್ನು ವಿಧಾನ ಪರಿಷತ್ ಸದಸ್ಯ ಎಸ್.ರವಿ, ಜಿಪಂ ಉಪಾಧ್ಯಕ್ಷೆ ಉಷಾ ರವಿ, ನಿಕಟಪೂರ್ವ ಅಧ್ಯಕ್ಷ ಬಸಪ್ಪ, ಮಾಜಿ ಉಪಾಧ್ಯಕ್ಷರಾದ ದಿವ್ಯಾ ಗಂಗಾಧರ್, ಜಿ.ಡಿ.ವೀಣಾ ಚಂದ್ರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎನ್. ಸುಗುಣ ತಿಮ್ಮಪ್ಪರಾಜು, ಭಾಗ್ಯ, ಸದಸ್ಯರಾದ ಎಸ್.ಗಂಗಾಧರ್, ಪ್ರಸನ್ನಕುಮಾರ್, ಜಯರತ್ನ ರಾಜೇಂದ್ರ, ಕಾಂಗ್ರೆಸ್ ಮುಖಂಡರಾದ ಜಿಯಾವುಲ್ಲಾ, ಇಕ್ಬಾಲ್ ಹುಸೇನ್, ಎಲ್.ಚಂದ್ರಶೇಖರ್, ಸಿ.ಉಮೇಶ್, ತಾಪಂ ಅಧ್ಯಕ್ಷ ಭದ್ರಯ್ಯ, ಸದಸ್ಯರಾದ ಗಾಣಕಲ್ ನಟರಾಜು, ಜಗದೀಶ್, ರೇಣುಕಪ್ಪ, ಯುವ ಮುಖಂಡ ಚಂದ್ರಸಾಗರ್ ಸೇರಿ ಜಿಲ್ಲೆಯ ಅನೇಕ ನಾಯಕರು, ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದಿಸಿದರು.
ಜಿಲ್ಲೆ ಅಭಿವೃದ್ಧಿಗೆ ಶ್ರಮಿಸುವೆ: ನೂತನ ಅಧ್ಯಕ್ಷ ಎಚ್.ಎನ್.ಅಶೋಕ್ ಮಾತನಾಡಿ, ತಮಗೆ ಲಭಿಸಿರುವ ಈ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಅರಿವಿದ್ದು, ಅವುಗಳಿಗೆ ಪರಿಹಾರ ಕಂಡುಕೊಳ್ಳುವುದರ ಜತೆಗೆ, ಕೃಷಿ ಮತ್ತು ರೇಷ್ಮೆಕೃಷಿ ಪ್ರಧಾನವಾದ ಜಿಲ್ಲೆಯಲ್ಲಿ ಹೊಸ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ನನ್ನದೇ ಆದ ಕನಸುಗಳಿದ್ದು, ಲಭ್ಯ ಅವಧಿಯಲ್ಲಿ ಪರಿಣಾಮಕಾರಿಯಾಗಿ ಸಾಕಾರಗೊಳಿಸಲು ಎಲ್ಲರ ವಿಶ್ವಾಸದೊಂದಿಗೆ ಕೆಲಸ ಮಾಡುವುದಾಗಿ ತಿಳಿಸಿದರು. ಈ ಸ್ಥಾನ ದೊರೆಯಲು ಕಾರಣರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಸೋದರ ಹಾಗೂ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಎಸ್.ರವಿ ಆದಿಯಾಗಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇನೆ ಎಂದರು.
ತಾಂತ್ರಿಕವಾಗಿ ಜೆಡಿಎಸ್‌ಗೆ ಅಧಿಕಾರ: ಜೆಡಿಎಸ್ ಚಿಹ್ನೆಯಲ್ಲಿ ಗೆದ್ದಿರುವ ಕಾರಣ ಅಶೋಕ್ ಅಧ್ಯಕ್ಷರಾಗಿರುವುದರಿಂದ ತಾಂತ್ರಿಕವಾಗಿ ಜೆಡಿಎಸ್‌ಗೆ ಅಧಿಕಾರ ಸಿಕ್ಕಂತಾಗಿದೆ. ಆದರೆ, ಜೆಡಿಎಸ್ ನಾಯಕರೇ ಅಶೋಕ್ ಅವರನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಜಿಪಂ ಅಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗದಂತೆ ಕಂಡರೂ ಅಶೋಕ್ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿರುವುದರಿಂದ ಇದು ಕಾಂಗ್ರೆಸ್ ಆಡಳಿತವೇ ಆಗಿರುತ್ತದೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಈ ಹಿಂದೆ ಅಧಿಕಾರ ಹಂಚಿಕೆ ವೇಳೆ ಕೊಟ್ಟಿದ್ದ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ.
ಅಧಿಕಾರ ಹಂಚಿಕೆ ಪೂರ್ಣ: 22 ಸದಸ್ಯ ಬಲದ ಜಿಪಂನಲ್ಲಿ ಕಾಂಗ್ರೆಸ್ 16, ಜೆಡಿಎಸ್ 6 ಸ್ಥಾನಗಳನ್ನು ಹೊಂದಿವೆ. ಜೆಡಿಎಸ್‌ನ 6 ಮಂದಿ ಪೈಕಿ ಅಶೋಕ್ ಹಾಗೂ ನಾಗರತ್ನ ಚಂದ್ರೇಗೌಡ ಈಗಾಗಲೇ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದು, ಜೆಡಿಎಸ್ ಬಲ 4ಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳನ್ನು ವಿಧಾನಸಭಾ ಕ್ಷೇತ್ರವಾರು ಸದಸ್ಯರಿಗೆ ತಲಾ 12 ತಿಂಗಳು ಸಮಾನವಾಗಿ ಹಂಚಿಕೆ ಮಾಡುವ ನಿರ್ಧಾರವನ್ನು ಕಾಂಗ್ರೆಸ್ ನಾಯಕರು ಮಾಡಿದ್ದರು. ಉಪಾಧ್ಯಕ್ಷರ ಬದಲಾವಣೆ ನಂತರ ಎಲ್ಲರಿಗೂ ಸಮಾನವಾಗಿ ಅಧಿಕಾರ ಹಂಚಿಕೆ ಮಾಡಿದ ಕಾರ್ಯ ಪೂರ್ಣಗೊಂಡಂತಾಗಿದೆ.