ವಾಹನ ಸಂಚರಿಸದಿದ್ದರೂ ಹಣ ಕಟ್ ಬೆಂ-ಮೈ ದಶಪಥ ಹೆದ್ದಾರಿ ಟೋಲ್‌ಪ್ಲಾಜಾದಲ್ಲಿ ತಾಂತ್ರಿಕ ಸಮಸ್ಯೆ ವಾಹನ ಸವಾರರಿಗೆ ಕಿರಿಕಿರಿ

25-03-web Toll3
Published on

 ಬಿಡದಿ: 

ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯ ಟೋಲ್ ಪ್ಲಾಜಾದಲ್ಲಿನ ತಾಂತ್ರಿಕ ಸಮಸ್ಯೆ ವಾಹನಗಳ ಸವಾರರಿಗೆ ಕಿರಿಕಿರಿ ತಂದೊಡ್ಡಿದೆ. ಕೆಲವು ವಾಹನಗಳ ಫಾಸ್ಟ್‌ಟ್ಯಾಗ್ ಸ್ಕ್ಯಾನ್ ಆಗುವುದರಲ್ಲಿ ತೊಂದರೆ ಆಗುತ್ತಿದ್ದರೆ, ಮತ್ತೊಂದೆಡೆ ಪದೇಪದೆ ಹಣ ಕಡಿತವಾಗುತ್ತಿದೆ.

ದಶಪಥ ಹೆದ್ದಾರಿಯಲ್ಲಿನ ಕಣಮಿಣಕಿ ಹಾಗೂ ಶೇಷಗಿರಿಹಳ್ಳಿ ಬಳಿ ಇರುವ ಎರಡು ಟೋಲ್ ಪ್ಲಾಜಾಗಳಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆ ಉದ್ಭವವಾಗುತ್ತಿದೆ. ಈ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಡವಿದೆ. ಪ್ರತಿನಿತ್ಯ ವಾಹನಗಳ ಸವಾರರು ಟೋಲ್ ಸಿಬ್ಬಂದಿ ಜತೆಗೆ ಗಲಾಟೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಟೋಲ್ ಪ್ರವೇಶ ಮಾಡದಿದ್ದರೂ ಹಣ ಕಡಿತ

ಟೋಲ್ ಪ್ಲಾಜಾದಲ್ಲಿ ವಾಹನಗಳು ಸಂಚಾರ ಮಾಡಿದಾಗ ಫಾಸ್ಟ್‌ಟ್ಯಾಗ್ ಮೂಲಕ ಹಣ ಕಡಿತವಾಗುತ್ತದೆ. ಆದರೆ ಮತ್ತೆ ಅದೇ ವಾಹನ ಟೋಲ್ ಪ್ಲಾಜ  ಪ್ರವೇಶ ಮಾಡದಿದ್ದರೂ ಹಣ ಕಡಿತವಾಗುತ್ತಿದೆ. ಮಂಡ್ಯ ಮೂಲದ ತ್ಯಾಗರಾಜ್ ಅವರ ಕಾರು ಒಮ್ಮೆ ಕಣಮಿಣಕಿ ಟೋಲ್ ಪ್ಲಾಜಾ ಪ್ರವೇಶ ಮಾಡಿದಾಗ ಫಾಸ್ಟ್‌ಟ್ಯಾಗ್ ಮೂಲಕ 135 ರೂ. ಕಡಿತವಾಗಿದೆ. ಸಂಜೆ ವೇಳೆಗೆ ಕಾರು ಟೋಲ್ ಬಳಿ ಸಂಚಾರ ಮಾಡದಿದ್ದರೂ ಮತ್ತೆ ಹಣ ಕಡಿತವಾಗಿದೆ. ಒಂದಲ್ಲ 3-4 ಬಾರಿ 135 ರೂ.ನಂತೆ ಹಣ ಕಡಿತವಾಗಿದೆ. ಹೀಗೆ ಸಾವಿರಾರು ವಾಹನಗಳಿಂದ ಲಕ್ಷಾಂತರ ರೂ ಕಡಿತವಾಗುತ್ತಿದ್ದು, ಅನಾಯಾಸವಾಗಿ ಟೋಲ್ ಸಂಗ್ರಹ ಮಾಡುತ್ತಿರುವ ಸಂಸ್ಥೆಗೆ ಸೇರುತ್ತಿದೆ. ಕೆಲವರು ಪದೇಪದೆ ಹಣ ಕಡಿತವಾಗುತ್ತಿರುವ ಬಗ್ಗೆ ಪ್ರಶ್ನೆ ಮಾಡುತ್ತಿದ್ದರೆ, ಮತ್ತೆ ಕೆಲವರು ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.

ತಪ್ಪಾಗಿದೆ ಸರಿಪಡಿಸುತ್ತೇವೆ

ವಾಹನ ಸಂಚಾರ ಮಾಡದಿದ್ದರೂ ಹಣ ಕಡಿತವಾದ ಬಗ್ಗೆ ತ್ಯಾಗರಾಜ್ ಅವರು ಕಣಮಿಣಕಿ ಟೋಲ್  ಪ್ಲಾಜಾದ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ತಪಾಸಣೆ ನಡೆಸಿದ ಸಿಬ್ಬಂದಿ ವಾಹನ ಬಾರದಿದ್ದರೂ ಹಣ ಕಡಿತವಾಗಿರುವುದು ಕಂಡುಬಂದಿದೆ. ಈ ಬಗ್ಗೆ ಪ್ಲಾಜಾದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದಕ್ಕೆ ಕ್ಷಮೆ ಕೇಳಿರುವ ಅಧಿಕಾರಿಗಳು, ನಮ್ಮಿಂದ ತಪ್ಪಾಗಿದೆ ಮುಂದಿನ ದಿನಗಳಲ್ಲಿ ಈ ಸಮಸ್ಯೆಯನ್ನು ಸರಿ ಪಡಿಸುತ್ತೇವೆ. ಹಾಗೂ ಹೆಚ್ಚುವರಿಯಾಗಿ ಕಡಿತವಾಗಿರುವ ಹಣವನ್ನು ವಾಪಸ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಪ್ರತಿನಿತ್ಯ ಗಲಾಟೆ

ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ಹೆಚ್ಚು ವಾಹನದಟ್ಟಣೆ ಇರುವ ರಸ್ತೆಯಾಗಿದೆ. ಇಂತಹ ರಸ್ತೆಯಲ್ಲಿನ ಟೋಲ್ ಪ್ಲಾಜಾಗಳಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡುಬರುತ್ತಿರುವುದರಿಂದ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಕೆಲವು ವಾಹನಗಳಲ್ಲಿ ಫಾಸ್ಟ್‌ಟ್ಯಾಗ್  ಇದ್ದರೂ ಹಣ ಕಡಿತವಾಗುತ್ತಿಲ್ಲ. ಈ ವಿಚಾರವಾಗಿ ಟೋಲ್ ಪ್ಲಾಜಾಗಳ ಬಳಿ ಪ್ರತಿನಿತ್ಯ ಗಲಾಟೆಗಳು ನಡೆಯುತ್ತಲೆ ಇವೆ.

ನಾವು ಮಂಡ್ಯದಿಂದ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದೆವು. ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಲ್ಲಿಫಾಸ್ಟ್‌ಟ್ಯಾಗ್ ಮೂಲಕ 135 ರೂ. ಕಡಿತವಾಗಿತ್ತು. ಬೆಂಗಳೂರು ತಲುಪುವಷ್ಟರಲ್ಲಿ ಮತ್ತೆ 135 ರೂ. ಕಡಿತವಾಗಿತ್ತು. ಅದಾದ ನಂತರ ಮತ್ತೆ 135 ರೂ. ಹಾಗೂ 70 ರೂ. ಕಡಿತವಾಗಿದೆ. ಹಾಗಾಗಿ ಶುಕ್ರವಾರ ಕಣಮಿಣಕಿ ಟೋಲ್ ಪ್ಲಾಜಾ ಬಳಿ ಬಂದು ಹಣ ಕಡಿತವಾದ ಬಗ್ಗೆ ಪ್ರಶ್ನೆ ಮಾಡಿದ್ದೆ. ಅಲ್ಲಿನ ಸಿಬ್ಬಂದಿಗಳು ತಪಾಸಣೆ ಮಾಡಿ ತಪ್ಪಾಗಿದೆ ನಿಮ್ಮ ಹಣವನ್ನ ಹಿಂತಿರುಗಿಸುತ್ತೇವೆ ಎಂದು ಹೇಳುತ್ತಿದ್ದಾರೆ. ನಾವು ಟೋಲ್ ಪ್ಲಾಜಾ ಬಳಿ ಇದ್ದ ಸಮಯದಲ್ಲಿ ಸಾಕಷ್ಟು ವಾಹನಗಳ ಮಾಲೀಕರು ಇದೇ ಸಮಸ್ಯೆ ಹೇಳಿಕೊಂಡು ಬಂದಿದ್ದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಲಿ.

ತ್ಯಾಗರಾಜ್ , ಸಮಸ್ಯೆಗೆ ಒಳಗಾದ ವಾಹನ ಮಾಲೀಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net