ಸುತ್ತೂರು ಮಠದಿಂದ ಧಾರ್ಮಿಕ, ಜ್ಞಾನದಾಸೋಹ ಕೈಂಕರ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿಕೆ

Rmgm-Ph-01-Shivadeekse-Darmaprachara Suttur Shivaratri Deshikendra Swamiji Rmgm - 22-8-2023
Published on

 ರಾಮನಗರ

ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಜ್ಞಾನದಾಸೋಹ ಕೈಂಕರ್ಯಗಳನ್ನು ನಡೆಸುತ್ತಾ ಬರುತ್ತಿದೆ ಎಂದು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ರಾಮನಗರದ ವಿವೇಕಾನಂದ ನಗರದ ಪೊಲೀಸ್ ಶಂಕರಪ್ಪ ನಿವಾಸದಲ್ಲಿ ನಡೆದ ಶಿವದೀಕ್ಷಾ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಶಿವ ದೀಕ್ಷೆ, ಲಿಂಗ ದೀಕ್ಷೆ ಪಡೆದವರನ್ನು ಆಶೀರ್ವದಿಸಿ ಮಾತನಾಡಿದರು.

ಒಂದು ಸಹಸ್ರ ವರ್ಷಗಳಿಗೂ ಮಿಕ್ಕ ಭವ್ಯ ಇತಿಹಾಸ ಶ್ರೀಮಠಕ್ಕಿದೆ. ಎಲ್ಲ ಜಗದ್ಗುರುಗಳು ತಮ್ಮ ಅನುಪಮ ತಪೋನುಷ್ಠಾನದಿಂದ ಮಹತ್ತರ ಲೋಕೋದ್ಧಾರದ ಕಾರ್ಯಗಳನ್ನು ಕೈಗೊಂಡಿದ್ದಾರೆ. ಗ್ರಾಮೀಣ ಜನರ ಸರ್ವಾಂಗೀಣ ಶ್ರೇಯಸ್ಸಿಗಾಗಿ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಸ್ಥಾಪಿಸಲಾಗಿದೆ. ದತ್ತಿಯ ವತಿಯಿಂದ ಧಾರ್ಮಿಕ ಶಿಬಿರಗಳು, ಕೃತಿಗಳ ಪ್ರಕಟಣೆ, ಶ್ರೇಷ್ಠ ಕೃತಿಗಳಿಗೆ ಪ್ರಶಸ್ತಿ, ಧರ್ಮಪ್ರಸಾರ, ಲಿಂಗಧಾರಣೆ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ. ರಾಜ್ಯದ ಹಲವಾರು ಜಿಲ್ಲೆ, ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ ಭಾಗಗಳಲ್ಲಿಯೂ ಧರ್ಮಪ್ರಸಾರ ಮಾಡಿ 87,453ಕ್ಕೂ ಹೆಚ್ಚು ಮಂದಿಗೆ ಶಿವದೀಕ್ಷೆ, ಲಿಂಗದೀಕ್ಷೆ ಸಂಸ್ಕಾರ ನೀಡಲಾಗಿದೆ ಎಂದರು.

ರಾಮನಗರ ತಾಲೂಕಿನಲ್ಲಿ ಕಳೆದ ತಿಂಗಳಿಂದ ಮಠ ಮತ್ತು ಜಿಲ್ಲೆಯ ಮಠ ಮಾನ್ಯಗಳ ಪೂಜ್ಯರು ಯಶಸ್ವಿಯಾಗಿ ಶಿವದೀಕ್ಷೆ ಕಾರ್ಯಕ್ರಮ ನಡೆಸಿಕೊಟ್ಟು ಸಾವಿರಾರು ಜನರು ಇದರ ಸದುಪಯೋಗ ಪಡೆದುಕೊಂಡಿರುವುದು ಸಂತಸ. ಶ್ರೀಮಠ ನಿರಂತರವಾಗಿ ಧರ್ಮಪ್ರಸಾರ ಕಾರ್ಯಕ್ರಮವನ್ನು ನಾಡಿನ ಉದ್ದಗಲಕ್ಕೂ ನಡೆಸುತ್ತದೆ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾದ ರಾಮನಗರ ತಾಲೂಕು ಅಧ್ಯಕ್ಷ ಪೊಲೀಸ್ ಶಂಕರಪ್ಪ ಮಾತನಾಡಿ, ಶ್ರೀ ಮಠದ ಕಾರ್ಯಕ್ರಮದಿಂದ ಸಾವಿರಾರು ಜನ ಲಿಂಗದೀಕ್ಷೆ, ಶಿವದೀಕ್ಷೆ ಕಾರ್ಯಕ್ರಮದ ಪ್ರಯೋಜನ ಪಡೆಯುವಂತಾಯಿತು. ಜತೆಗೆ ವೀರಶೈವ ಧರ್ಮ ಪ್ರಚಾರಕ್ಕೆ ಉತ್ತಮ ವೇದಿಕೆ ದೊರೆಯಿತು. ಜುಲೈ 7ರಿಂದ ಇದುವರೆಗೂ ತಾಲೂಕಿನ ಹಲವಾರು ಗ್ರಾಮಗಳಲ್ಲಿ ವೀರಶೈವ ಯುವಕ ಸಂಘ ಮತ್ತು ಜಿಲ್ಲೆಯ ಮಠಗಳ ಸ್ವಾಮೀಜಿಗಳ ಆಶೀರ್ವಾದದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಮುಕ್ತಾಯ ಸಮಾರಂಭದಲ್ಲಿ ಹಿರಿಯ ಶ್ರೀಗಳೇ ಆಗಮಿಸಿ ಹರಸಿ ಆಶೀರ್ವಾದ ಮಾಡಿರುವುದು ಸಂತಸ ತಂದಿದೆ ಎಂದರು.

ಬೇವೂರು ಮಠಾಧ್ಯಕ್ಷ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಕುಡಿನೀರು ಕಟ್ಟೆ ವಿರಕ್ತ ಮಠಾಧ್ಯಕ್ಷ ಶ್ರೀ ಶಿವರುದ್ರ ಸ್ವಾಮೀಜಿ, ರೇವಣಸಿದ್ದೇಶ್ವರ ಬೆಟ್ಟ ದಾಸೋಹ ಮಠದ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಸರಗೂರು ಮಠಾಧ್ಯಕ್ಷ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ವೀರಶೈವ ಯುವಕ ಸಂಘದ ರಾಮನಗರ ತಾಲೂಕು ಅಧ್ಯಕ್ಷ ಎಂ.ಆರ್. ಶಿವಕುಮಾರಸ್ವಾಮಿ, ಮಹಾಸಭಾ ಕಾರ್ಯದರ್ಶಿ ಎಂ.ಮಹೇಶ್, ಮಾಜಿ ಶಾಸಕ ಕೆ. ರಾಜು, ನಗರಸಭೆ ಸದಸ್ಯ ಕೆ. ಶೇಷಾದ್ರಿ, ಮುಖಂಡರು ಸರಸ್ವತಮ್ಮ, ಎ.ಜೆ. ಸುರೇಶ್, ರಾಜಣ್ಣ, ಸಿ. ನಾಗರಾಜು, ಶಿವಕುಮಾರಸ್ವಾಮಿ, ಗುರುಲಿಂಗಯ್ಯ, ರಾಜಶೇಖರ್, ಶಿವಸ್ವಾಮಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net