ನಾರಿಯರ ಬಲ ಹೆಚ್ಚಿಸಿದ "ಶಕ್ತಿ' ದಿನದಿಂದ ದಿನಕ್ಕೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳ ರಾಮನಗರ ವಿಭಾಗದಲ್ಲಿ ಲಕ್ಷ ಮಂದಿಯಿಂದ ಉಚಿತ ಪ್ರಯಾಣ

Hook for free travel in inter-state buses
ಸಾಂದರ್ಭಿಕ ಚಿತ್ರ
Published on

ಗಂಗಾಧರ್​ ಬೈರಾಪಟ್ಟಣ ರಾಮನಗರ

ರಾಜ್ಯ ಕಾಂಗ್ರೆಸ್​ ಸರ್ಕಾರದ ಶಕ್ತಿ ಯೋಜನೆ ಜಿಲ್ಲೆಯ ನಾರಿಯರ ಬಲ ಹೆಚ್ಚಿಸಿದ್ದು, ದಿನದಿಂದ ದಿನಕ್ಕೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ.

ಜೂ.11ರಂದು ರಾಜ್ಯಾದ್ಯಂತ ಜಾರಿಗೆ ಬಂದ ಶಕ್ತಿ ಯೋಜನೆಗೆ ಮೊದಲ ದಿನದಿಂದಲೇ ಉತ್ತಮ ಪ್ರತಿಕ್ರಿಯೆ ಮಹಿಳಾ ಪ್ರಯಾಣಿಕರಿಂದ ವ್ಯಕ್ತವಾಗಿತ್ತು. ಇದು ದಿನ ಕಳೆದಂತೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದ್ದು, ರಾಮನಗರ ಜಿಲ್ಲೆಯಲ್ಲಿ ಮೊದಲ ದಿನ ಕೇವಲ 11 ಸಾವಿರ ಇದ್ದ ಪ್ರಯಾಣಿಕರ ಸಂಖ್ಯೆ 5ನೇ ದಿನಕ್ಕೆ ಲಕ್ಷದ ಸನಿಹಕ್ಕೆ ಬಂದಿದೆ. ಗುರುವಾರ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ 92 ಸಾವಿರ.

ಹೆಚ್ಚಿದ ಸಂಚಾರ

ರಾಮನಗರ ವಿಭಾಗಕ್ಕೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್​ ಘಟಕ ಸೇರಿ ಒಟ್ಟು 6 ಘಟಕಗಳಿದ್ದು, ಪ್ರತಿ ದಿನ ಸಾಮಾನ್ಯ ದಿನಗಳಲ್ಲಿ 500ಕ್ಕೂ ಹೆಚ್ಚು ಮಾರ್ಗಗಳಲ್ಲಿ ಬಸ್​ಗಳ ಸಂಚಾರ ನಡೆಯುತ್ತದೆ. ಈ ಮೊದಲು ಪ್ರಯಾಣಿಕರು ಇಲ್ಲದೆ ಖಾಲಿ ಸಂಚರಿಸುತ್ತಿದ್ದ ಬಸ್​ಗಳಲ್ಲೂ ಈಗ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ಗ್ರಾಮೀಣ ಸಾರಿಗೆ ಜತೆಗೆ ಎಕ್ಸ್​ಪ್ರೆಸ್​ಗಳಲ್ಲಿಯೂ ಮಹಿಳಾ ಪ್ರಯಾಣಿಕರ ಸಂಖ್ಯೆ ಮೂರುಪಟ್ಟು ಹೆಚ್ಚಿದೆ. ಅದರಲ್ಲೂ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವವರ ಸಂಖ್ಯೆಯೇ ಹೆಚ್ಚಿದೆ. ಕಳೆದ ನಾಲ್ಕು ದಿನಗಳಿಂದ ಸರಿ ಸುಮಾರು 2.71 ಲಕ್ಷ ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಇದರಲ್ಲಿ ಕನಕಪುರ ಟಕ ವ್ಯಾಪ್ತಿಯ ಬಸ್​ಗಳಲ್ಲಿಯೇ ಹೆಚ್ಚು ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ.

ಕೋಟಿ ಸನಿಹಕ್ಕೆ ಬಿಲ್​

ಜೂ.11ರಿಂದ ಜೂ.15ರವರೆಗೆ 5 ದಿನಗಳಲ್ಲಿ 271420 ಮಹಿಳಾ ಪ್ರಯಾಣಿಕರು ವಿವಿಧ ವಿಭಾಗದ ಬಸ್​ಗಳಲ್ಲಿ ಸಂಚಾರ ಮಾಡಿದ್ದು, ಇದರ ಒಟ್ಟು ಮೊತ್ತ 5 ದಿನಗಳಲ್ಲಿ 94 ಲಕ್ಷಕ್ಕೆ ತಲುಪಿದೆ. ಇನ್ನು ಶುಕ್ರವಾರವೂ ಸೇರಿದರೆ 6 ದಿನಗಳ ಪ್ರಯಾಣದ ಮೊತ್ತ ಒಂದು ಕೋಟಿ ರೂ. ದಾಟಲಿದೆ. ಹೆಚ್ಚು ಮಹಿಳಾ ಪ್ರಯಾಣಿಕರು ಸಂಚಾರ ಮಾಡಿರುವ ಕನಕಪುರ ಡಿಪೋದಲ್ಲಿ 21 ಲಕ್ಷ ರೂ. ಮೊತ್ತದ ಉಚಿತ ಟಿಕೆಟ್​ ಬಳಕೆ ಆಗಿದೆ.

ಬೇಡಿಕೆ ಹೆಚ್ಚಿದೆ

ಇನ್ನು ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಸ್​ಗಳಿಗೂ ಬೇಡಿಕೆ ಹೆಚ್ಚಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚುವರಿ ಬಸ್​ಗಳ ಸಂಚಾರಕ್ಕೆ ಅವಕಾಶ ಇಲ್ಲದಂತೆ ಆಗಿದೆ. ಒಂದೆಡೆ ಬಸ್​ಗಳ ಕೊರತೆ ಜತೆಗೆ ಸಿಬ್ಬಂದಿ ಕೊರತೆಯೂ ಇರುವ ಕಾರಣ ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಬಸ್​ಗಳನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ. ಕೆಎಸ್​ಆರ್​ಟಿಸಿ ಅಧಿಕಾರಿಗಳು. ಈ ಸಂಬಂಧ ಈಗಾಗಲೇ ಮೇಲಿನ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಬಸ್​ಗಳು ಹಾಗೂ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿ ದೊರೆತರೆ ಮತ್ತಷ್ಟು ಬಸ್​ಗಳು ಸಂಚಾರ ಮಾಡಲಿವೆ.

ಖಾಸಗಿ ಬಸ್​ಗಳು ಖಾಲಿ

ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದರೆ ಇತ್ತ ಖಾಸಗಿ ಬಸ್​ಗಳು ಖಾಲಿಯಾಗಿ ಸಂಚಾರ ಮಾಡುವಂತೆ ಆಗಿದೆ. ಜಿಲ್ಲೆಯ ಪ್ರಮುಖ ನಗರ ಪಟ್ಟಣಗಳಿಂದ ಪ್ರತಿದಿನ 50ಕ್ಕೂ ಹೆಚ್ಚು ಬಸ್​ಗಳು ಬೆಂಗಳೂರು ಸೇರಿ ವಿವಿಧೆಡೆ ಸಂಚರಿಸುತ್ತಿದ್ದವು. ಸರ್ಕಾರಿ ಬಸ್​ಗಳಿಗಿಂತ ಕಡಿಮೆ ದರ ಇದ್ದ ಕಾರಣ ಮಹಿಳಾ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿಯೇ ಪ್ರಯಾಣಿಸುತ್ತಿದ್ದರು. ಆದರೆ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದ ಕಾರಣ ಮಹಿಳಾ ಪ್ರಯಾಣಿಕರು ಖಾಸಗಿ ಬಸ್​ಗಳ ಕಡೆಗೆ ಮುಖ ಮಾಡುತ್ತಿಲ್ಲ. ಇದರಿಂದಾಗಿ ಖಾಸಗಿ ಬಸ್​ಗಳ ಸಂಚಾರವೂ ವಿರಳವಾಗುತ್ತಿವೆ.

ಮಹಿಳೆಯರ ಉಚಿತ ಪ್ರಯಾಣದ ವಿವರ (ಜೂ.11ರಿಂದ 15ರವರೆಗೆ)

ಡಿಪೋ        ಪ್ರಯಾಣಿಕರ ಸಂಖ್ಯೆ     ಮೊತ್ತ (ರೂ.ಗಳಲ್ಲಿ)

ರಾಮನಗರ       47118                    1832087

ಚನ್ನಪಟ್ಟಣ     42660                     1684800

ಕನಕಪುರ         69776                     2102089

ಹಾರೋಹಳ್ಳಿ     39000                    1411845

ಮಾಗಡಿ           43479                    1513556

ಆನೇಕಲ್​         29387                     900715

ಒಟ್ಟು             271420                   9445092

ರಾಮನಗರ ವಿಭಾಗ ವ್ಯಾಪ್ತಿಯ ಬಸ್​ಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಿಂದೆ ಇದ್ದ ಎಲ್ಲ ಮಾರ್ಗಗಳಲ್ಲಿಯೂ ಬಸ್​ಗಳು ಎಂದಿನಂತೆ ಸಂಚರಿಸುತ್ತಿದ್ದು, ಸರ್ಕಾರದ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ನಮ್ಮ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

 ಎಂ.ಜಗದೀಶ್​, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್​ಆರ್​ಟಿಸಿ ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net