

ಗಂಗಾಧರ್ ಬೈರಾಪಟ್ಟಣ ರಾಮನಗರ
ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪೂರ್ವ ಮುಂಗಾರು ಮಳೆ ಬೀಳದಿದ್ದರೂ ಕೃಷಿ ಇಲಾಖೆ ಮತ್ತು ರೈತರು ಮುಂಗಾರು ಮಳೆಗಾಗಿ ಕಾಯುತ್ತಾ ಕೃಷಿ ಚಟುವಟಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಮಳೆಯಾಶ್ರಿತ ಕೃಷಿ ಪ್ರಧಾನ ಜಿಲ್ಲೆಯಾಗಿರುವ ರಾಮನಗರದಲ್ಲಿ ರಾಗಿ ಪ್ರಮುಖ ಬೆಳೆಯಾಗಿದ್ದು, ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಮಾನ್ಸೂನ್ ಮಳೆಯೂ ಉತ್ತಮವಾಗಿ ಬೀಳುವ ನಿರೀಕ್ಷೆಯೊಂದಿಗೆ ಕೃಷಿ ಚಟುವಟಿಕೆ ಸಿದ್ಧತೆ ನಡೆದಿದೆ.
ಜಿಲ್ಲೆಯಲ್ಲಿ ಈ ಬಾರಿ ಒಟ್ಟು 92,655 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ರಾಗಿ ಪ್ರಮುಖವಾಗಿದ್ದು, 72550 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಉಳಿದಂತೆ ಇದರ ಜತೆಗೆ ಭತ್ತ, ನೆಲಗಡಲೆ, ಅವರೆ, ತೊಗರಿ ಸೇರಿ ಇತರ ಬೆಳೆಗಳ ಬಿತ್ತನೆ ಕಾರ್ಯಕ್ಕೂ ಸಿದ್ಧತೆ ನಡೆದಿದೆ. ಇದಕ್ಕೆ ಮಳೆಯೂ ಉತ್ತಮ ಸಾಥ್ ನೀಡಬೇಕಿದೆ.
ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಅಷ್ಟೇನು ಚುರುಕು ಪಡೆದಿಲ್ಲ. ಜೂ.1ರಿಂದ ಜೂ.9ರವರೆಗೂ ಜಿಲ್ಲೆಯಲ್ಲಿ ಒಟ್ಟು 9 ಮಿ.ಮೀ. ಮಳೆಯಾಗಿದೆ. ವಾಡಿಕೆಯಂತೆ ಜಿಲ್ಲೆಯಲ್ಲಿ ಒಟ್ಟು 34 ಮಿ.ಮೀ. ಮಳೆ ಆಗಬೇಕಿತ್ತು. ಆದರೆ, ಜಿಲ್ಲೆಯಲ್ಲಿ ಶೇ.73 ಮಳೆ ಕೊರತೆ ಆಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಮಳೆ ಚನ್ನಪಟ್ಟಣದಲ್ಲಿ ಆಗಿದ್ದು, ಇಲ್ಲಿ 21 ಮಿ.ಮೀ., ಮಾಗಡಿಯಲ್ಲಿ 13 ಮಿ.ಮೀ., ರಾಮನಗರದಲ್ಲಿ 10 ಮಿ.ಮೀ. ಮತ್ತು ಕನಕಪುರದಲ್ಲಿ 4 ಮಿ.ಮೀ. ಮಳೆಯಾಗಿದೆ.
ರೈತರಿಂದಲೂ ಸಿದ್ಧತೆ: ಜಿಲ್ಲೆಯಲ್ಲಿ ಮಳೆಯಾಗುತ್ತಿರುವ ಕಾರಣ, ರೈತರು ಭೂಮಿ ಹಸನು ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪೂರ್ವ ಮುಂಗಾರಿನಲ್ಲಿ ಬಿದ್ದ ಅಷ್ಟಿಷ್ಟು ಮಳೆಯಲ್ಲಿಯೇ ಈಗಾಗಲೇ 1030 ಹೆಕ್ಟೇರ್‌ನಲ್ಲಿ ಎಳ್ಳು, ಅಲಸಂದೆ, ತೊಗರಿ ಬಿತ್ತನೆ ಮಾಡಿದ್ದಾರೆ. ಮುಂಗಾರು ಮಳೆ ಈಗಾಗಲೇ ತಡವಾಗಿದ್ದು, ರೈತರು ಮಳೆ ನಿರೀಕ್ಷೆಯಲ್ಲಿದ್ದಾರೆ. ರಾಗಿ ಸೇರಿ ಇತರ ಬೆಳೆಗಳ ಬಿತ್ತನೆಗಾಗಿ ಸಿದ್ಧತೆ ನಡೆಯುತ್ತಿದೆ. ಕೃಷಿ ಇಲಾಖೆಯೂ ಇದಕ್ಕೆ ಪೂರಕವಾಗಿ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ರೈತರಿಗೆ ವಿತರಣೆ ಮಾಡಲು ತಯಾರಾಗಿದೆ.
27158 ಟನ್ ರಸಗೊಬ್ಬರದ ಬೇಡಿಕೆ
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಒಟ್ಟು 27158 ಟನ್ ರಸಗೊಬ್ಬರದ ಬೇಡಿಕೆ ಇದ್ದು, ಒಟ್ಟು 11777 ಟನ್ ರಸಗೊಬ್ಬರ ಪೂರೈಕೆ ಆಗಿದೆ. ಈಗಾಗಲೇ 5263 ಟನ್ ಗೊಬ್ಬರ ವಿತರಣೆ ಮಾಡಲಾಗಿದೆ. 6514 ಟನ್ ರಸಗೊಬ್ಬರ ದಾಸ್ತಾನು ವಿವಿಧ ಗೋದಾಮಿನಲ್ಲಿದೆ. ರಸಗೊಬ್ಬರಗಳಲ್ಲಿಯೇ ಯೂರಿಯಾಗೆ ಹೆಚ್ಚಿನ ಬೇಡಿಕೆ ಇದ್ದು, ಪ್ರಸ್ತುತ 4166 ಟನ್ ದಾಸ್ತಾನು ಇದೆ. ಉಳಿದಂತೆ ನ್ಯಾನೊ ಯೂರಿಯಾಗೆ 58278 ಬಾಟಲ್‌ಗಳ ಬೇಡಿಕೆ ಇದೆಯಾದರೂ ಈವರೆಗೂ ಒಂದೇ ಒಂದು ಬಾಟಲ್ ಪೂರೈಕೆ ಆಗದಿರುವುದು ವಿಪರ್ಯಾಸ. ಅಧಿಕಾರಿಗಳು ಬೇಡಿಕೆಗೆ ತಕ್ಕಂತೆ ರಸಗೊಬ್ಬರ ಸಂಗ್ರಹ ಮಾಡಿ, ಅಗತ್ಯ ಸಂದರ್ಭದಲ್ಲಿ ರೈತರಿಗೆ ನೀಡುವ ಕೆಲಸ ಕೃಷಿ ಇಲಾಖೆ ವ್ಯವಸ್ಥಿತವಾಗಿ ಮಾಡಬೇಕಿದೆ.
ಪ್ರಮುಖ ಬೆಳೆಗಳ ಬಿತ್ತನೆ (ಹೆಕ್ಟೇರ್‌ಗಳಲ್ಲಿ)
ಬೆಳೆ ಬಿತ್ತನೆ ಪ್ರದೇಶ
ಏಕದಳ: 74855
ದ್ವಿದಳ: 10715
ಎಣ್ಣೆಕಾಳು: 2670
ಇತರೆ: 4415
ಒಟ್ಟು: 92655
ಮಳೆ ವಿವರ (ಜೂ.1ರಿಂದ 9)
ತಾಲೂಕು ವಾಡಿಕೆ ವಾಸ್ತವ ಕೊರತೆ
ಚನ್ನಪಟ್ಟಣ 33 21 37%
ಕನಕಪುರ 37 04 90%
ಮಾಗಡಿ 37 13 65%
ರಾಮನಗರ 34 10 71%
ಜಿಲ್ಲೆ - 34 09 73%
ಜಿಲ್ಲೆಯಲ್ಲಿ ಪೂರ್ವ ಮುಂಗಾರು ಉತ್ತಮವಾಗಿ ಆಗಿಲ್ಲ. ಇದರ ಹೊರತಾಗಿಯೂ ಮುಂಗಾರು ನಿರೀಕ್ಷೆಯೊಂದಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ರೈತರೂ ಬಿತ್ತನೆ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೃಷಿ ಇಲಾಖೆಯೂ ಅಗತ್ಯ ನೆರವು ನೀಡಲು ಸಿದ್ಧವಾಗಿದೆ. ರಸಗೊಬ್ಬರ ಸೇರಿ ಬಿತ್ತನೆ ಬೀಜದ ಅಗತ್ಯ ದಾಸ್ತಾನು ಮಾಡಲಾಗಿದೆ.
ಸೋಮಸುಂದರ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ರಾಮನಗರ