

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ರಾಷ್ಟ್ರೀಯ ಹೆದ್ದಾರಿ 275 (ಲೋಕೋಪಯೋಗಿ ಇಲಾಖೆ) ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ನಗರದಲ್ಲಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನಗರದ ಅಂಬೇಡ್ಕರ್ ಭವನದ ಎದುರು ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡ ಪ್ರಮಾಣದ ನೀರು ನಿಲುಗಡೆಯಾಗುತ್ತಿದ್ದು, ಮಳೆಬಂದಾಗ ಈ ಜಾಗ ರಸ್ತೆಯೋ? ಅಥವಾ ನದಿಯೋ ಎಂಬುದೇ ತಿಳಿಯದಾಗಿದೆ. ಈ ಸಮಸ್ಯೆ ಹಲವಾರು ವರ್ಷಗಳಿಂದ ಇದ್ದರೂ ಇಲಾಖೆ ಅಧಿಕಾರಿಗಳು ಬಗೆಹರಿಸಲು ಬೇಜವಾಬ್ದಾರಿತನ ತೋರುತ್ತಿದ್ದಾರೆ.
ಮಳೆ ಬಂದರೆ ನಗರದ ಅಂಬೇಡ್ಕರ್ ಭವನದ ಎದುರು ಬೆಂ&ಮೈ ಹೆದ್ದಾರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತದೆ. ಪಾಲಿಟೆಕ್ನಿಕ್ ಕಾಲೇಜಿನಿಂದ ಹಿಡಿದು ಅಂಬೇಡ್ಕರ್ ಭವನದವರೆಗೂ ಒಂದು ಬದಿಯಲ್ಲಿ ನೀರು ನಿಲುಗಡೆಯಾಗುತ್ತಿದೆ. ಇದು ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಮಂಡಿಯುದ್ದ ನೀರು ನಿಲುಗಡೆಯಾಗುವ ಕಾರಣ, ಮಳೆಬಂದಾಗ ಈ ಜಾಗದಲ್ಲಿ ಸಂಚರಿಸುವುದೇ ದೊಡ್ಡ ಸಾಹಸವಾಗಿದೆ.
ಈ ಸಮಸ್ಯೆ ಇಂದು ನಿನ್ನೆಯದಲ್ಲ. ಹಲವಾರು ವರ್ಷಗಳಿಂದ ಕಾಡುತ್ತಿದೆ. ಹೆದ್ದಾರಿಯ ಒಂದು ಕಡೆಯಿಂದ ಮತ್ತೊಂದು ಕಡೆಗೆ ನೀರು ಹರಿದುಹೋಗಲು ಇರುವ ಕೆಳಕಾಲುವೆ (ರಸ್ತೆಯ ಕೆಳಗೆ ಇದೆ) ಅಸಮರ್ಪಕವಾಗಿ ಇರುವುದೇ ಸಮಸ್ಯೆಗೆ ಮೂಲವಾಗಿದೆ. ನೀರು ಸರಾಗವಾಗಿ ಹರಿದುಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ, ಮಳೆಬಂದಾಗ ಅಪಾರ ಪ್ರಮಾಣದ ನೀರು ಹೆದ್ದಾರಿಯಲ್ಲಿ ನಿಲ್ಲುತ್ತಿದೆ. ಈ ಹಿಂದೆ ಹೆದ್ದಾರಿ ಅಗಲೀಕರಣವಾದರೂ ಈ ಜಾಗದಲ್ಲಿ ನೀರು ಹರಿದುಹೋಗಲು ವ್ಯವಸ್ಥೆ ಕಲ್ಪಿಸಿಲ್ಲ. ಈ ಹಿಂದೆ ಒಮ್ಮೆ ಸಮಸ್ಯೆ ಉಲ್ಬಣಗೊಂಡಾಗ ಕೆಳಕಾಲುವೆಯನ್ನು ಸ್ವಚ್ಛಗೊಳಿಸಲಾಗಿತ್ತು. ಆದರೆ, ಇದುವರೆಗೂ ಶಾಶ್ವತ ಪರಿಹಾರ ಕಲ್ಪಿಸಲು ಅಧಿಕಾರಿಗಳು ಮನಸ್ಸು ಮಾಡದ ಕಾರಣ, ಮಳೆಬಂದಾಗ ಜನತೆ ಸಮಸ್ಯೆ ಅನುಭವಿಸುವಂತಾಗಿದೆ.
ಪ್ರತಿಬಾರಿ ಮಳೆ ಬಂದಾಗಲೂ ಈ ಜಾಗದಲ್ಲಿ ದ್ವಿಚಕ್ರ ವಾಹನಗಳು ಸಂಚರಿಸಲು ಅಸಾಧ್ಯ ಎನ್ನುವಂತಾಗಿದೆ. ಅನಿವಾರ್ಯವಾಗಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸಬೇಕಾಗಿದೆ. ಈ ವೇಳೆ ಅಪಘಾತಗಳಾಗಿರುವ ಸಾಕಷ್ಟು ನಿದರ್ಶನಗಳಿವೆ. ನೀರಿನಲ್ಲಿ ಸಂಚರಿಸಲು ಸಾಧ್ಯವಿಲ್ಲದೇ ರಸ್ತೆ ವಿಭಜಕವನ್ನು ದಾಟಲು ಹೋಗಿ ಬಿದ್ದು ಪೆಟ್ಟು ಮಾಡಿಕೊಂಡಿರುವ ಉದಾಹರಣೆಗಳೂ ಇವೆ. ಆದರೂ, ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ದಿವ್ಯ ರ್ನಿಲ್ಯ ತೋರುತ್ತಿದ್ದಾರೆ. ಈ ಸಮಸ್ಯೆಯ ಅರಿವಿದ್ದರೂ ಗೊತ್ತಿಲ್ಲದ ರೀತಿ ವರ್ತಿಸುತ್ತಿದ್ದಾರೆ.
ಪ್ರತಿ ಬಾರಿ ಮಳೆ ಬಂದಾಗಲೂ ಈ ಜಾಗದಲ್ಲಿ ಸಮಸ್ಯೆ ತಲೆದೋರುತ್ತಿದೆ. ಹೆದ್ದಾರಿಯ ಒಂದು ಕಡೆಯಿಂದ ಮತ್ತೊಂದು ಕಡೆಗೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಿದರೆ ಸಮಸ್ಯೆ ಬಗೆಹರಿಯಲಿದೆ. ಆದರೆ, ಮಳೆಬಂದು ಹೋದ ನಂತರ, ಸರಿಹೋಗಲಿದೆ ಎಂಬ ರ್ನಿಲ್ಯ ಧೋರಣೆಯಿಂದ ಸಮಸ್ಯೆ ಶಾಶ್ವತವಾಗಿ ಉಳಿದುಕೊಂಡಿದೆ. ಜನರ ಆಕ್ರೋಶ ಭುಗಿಲೇಳುವ ಮುನ್ನ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದವರು ಮುಂದಾಗಲಿ ಎಂಬುದೇ ಪತ್ರಿಕೆಯ ಆಶಯವಾಗಿದೆ.
ಈ ಜಾಗದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆ ನೀರು ಸರಾಗವಾಗಿ ಹರಿದುಹೋಗಲು ಸಮಸ್ಯೆ ಇರುವ ಕಾರಣ ಸಮಸ್ಯೆ ಸೃಷ್ಟಿಯಾಗಿದೆ. ಈಗಾಗಲೇ ಒಂದು ಬಾರಿ ಕೆಳಕಾಲುವೆಯನ್ನು ಸ್ವಚ್ಛಗೊಳಿಸಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಿದ್ದೇವೆ. ಆದರೆ, ಅತಿಹೆಚ್ಚು ತ್ಯಾಜ್ಯದ ಸಮಸ್ಯೆಯಿಂದ ತೊಂದರೆಯಾಗುತ್ತಿದೆ. ತ್ಯಾಜ್ಯ ಕಟ್ಟಿಕೊಂಡಿರುವ ಕಾರಣ ನೀರಿನ ಸರಾಗ ಹರಿವಿಗೆ ಸಮಸ್ಯೆಯಾಗುತ್ತಿದೆ. ಇದನ್ನು ಸರಿಪಡಿಸಲಾಗುವುದು.
ಶಿವರಾಮು, ಎಇಇ, ರಾಷ್ಟ್ರೀಯ ಹೆದ್ದಾರಿ
ಅಂಬೇಡ್ಕರ್ ಭವನದ ಮುಂಭಾಗ ಸೇರಿ ಇನ್ನು ಕೆಲವೆಡೆ ಈ ಸಮಸ್ಯೆ ಇದೆ. ಮಳೆ ಬಂದಾಗ ಹೆದ್ದಾರಿಯಲ್ಲಿ ನೀರು ನಿಲುಗಡೆಯಾಗಿ ಸಮಸ್ಯೆಗೆ ಕಾರಣವಾಗುತ್ತಿದೆ. ಈ ಬಗ್ಗೆ ಹೆದ್ದಾರಿ ಅಧಿಕಾರಿಗಳಿಗೆ ಪತ್ರ ಬರೆದು ಗಮನ ಸೆಳೆಯಲಾಗಿದೆ. ಅಂಬೇಡ್ಕರ್ ಭವನದ ಎದುರು ಸಮಸ್ಯೆ ದೊಡ್ಡ ಪ್ರಮಾಣದಲ್ಲಿದೆ.
ಪುಟ್ಟಸ್ವಾಮಿ, ಪೌರಾಯುಕ್ತ, ನಗರಸಭೆ ಚನ್ನಪಟ್ಟಣ