

ರಾಮನಗರ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯಲು ಮೂರ‌್ನಾಲ್ಕು ದಿನಗಳಲ್ಲಿ ಕ್ರಮ ವಹಿಸದಿದ್ದರೆ ಟೋಲ್ ಸಂಗ್ರಹಿಸಲು ಬಿಡುವುದಿಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಂಗಳೂರು-ಮೈಸೂರು ನಡುವಿನ ವಾಹನ ಸವಾರರ ಸುರಕ್ಷತೆಗಾಗಿಯೇ ಹೆದ್ದಾರಿ ನಿರ್ಮಿಸಲಾಗಿದೆ. ಆದರೆ ಇದು ಉಪಯೋಗಕ್ಕೆ ಬರುತ್ತಿಲ್ಲ. ರಾಮನಗರ, ಬಿಡದಿ ಚನ್ನಪಟ್ಟಣದಲ್ಲಿಯೇ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಇವುಗಳನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಕೂಡಲೇ ಈ ಕೆಲಸ ಆಗಬೇಕು. ಇದು ಸಾಧ್ಯವಾಗದಿದ್ದರೆ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ. ಮಂಡ್ಯ ಭಾಗದಲ್ಲಿಯೂ ಇದಕ್ಕೆ ಸಿದ್ಧರಿದ್ದು ನಮ್ಮನ್ನು ಬಂಧಿಸಿದರೂ ಜಗ್ಗುವುದಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ರೋಡ್ ಸೈನ್, ಕ್ಯಾಮರಾ ಅಳವಡಿಸಿ
ಹೆದ್ದಾರಿಯಲ್ಲಿ ಅಪಘಾತ ಸ್ಥಳಗಳನ್ನು ಗುರುತಿಸಿದ್ದು ಸದರಿ ಸ್ಥಳಗಳಲ್ಲಿ ಮುನ್ನೆಚ್ಚರಿಕೆಯಾಗಿ ರೋಡ್ ಸೈನ್‌ಗಳು, ಸ್ಪೀಡ್ ಕ್ಯಾಮರಾಗಳನ್ನು ಅಳವಡಿಸಿ ಹೆಚ್ಚು ವೇಗವಾಗಿ ಚಲಿಸುವ ವಾಹನಗಳಿಗೆ ದಂಡ ವಿಧಿಸಿ, ಅಪಘಾತ ಸಂಭವಿಸದಂತೆ ತಡೆಯಲು ಕ್ರಮ ವಹಿಸುವಂತೆ ತಿಳಿಸಿದರು. ಜತೆಗೆ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಸಮಯದಲ್ಲಿ ಕೆರೆಗಳು ಹಾಳಾಗಿದ್ದು, ಇವುಗಳನ್ನು ದುರಸ್ತಿ ಮಾಡುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು. ಹೆದ್ದಾರಿಗಳ ಪ್ರವೇಶ ಮತ್ತು ಹೊರ ಹೋಗುವ ಮಾರ್ಗಗಳನ್ನು ಸಮರ್ಪಕವಾಗಿ ನಿರ್ವಹಿಸುವುದಲ್ಲದೆ ಅವಶ್ಯವಿರುವ ಕಡೆ ಪ್ರವೇಶ ಮತ್ತು ಹೊರ ಹೋಗುವ ಮಾರ್ಗಗಳನ್ನು ನಿರ್ಮಿಸಲು ಕ್ರಮವಹಿಸಬೇಕು ಎಂದು ಸಂಸದ ಸುರೇಶ್ ನಿರ್ದೇಶನ ನೀಡಿದರು.
ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೇರಿ ಭಾರಿ ವಾಹನಗಳು ಬಲಭಾಗದಲ್ಲಿ ಸಂಚರಿಸುತ್ತಿದ್ದು ಅವುಗಳು ಎಡಭಾಗದ ಮೊದಲ ಮತ್ತು ಎರಡನೇ ಲೈನ್‌ನಲ್ಲಿ ಸಂಚರಿಸಲು ಕ್ರಮವಹಿಸಬೇಕು. ಹೆದ್ದಾರಿ 209ರಲ್ಲಿ ದೇವಿಕಾ ರಾಣಿ ಎಸ್ಟೇಟ್ ಹತ್ತಿರ ಆನೆಗಳು ಸಂಚರಿಸುವ ಸ್ಥಳವಾಗಿದ್ದು, ಇಲ್ಲಿ ಆನೆ ಕಾರಿಡಾರ್ ನಿರ್ಮಿಸುವಂತೆ, ಅವಶ್ಯವಿರುವ ಕಡೆ ರ‌್ಯಾಂಪ್ ನಿರ್ಮಿಸಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ತಿಳಿಸಿದರು. ರಾಮನಗರದಲ್ಲಿ ಪ್ರವಾಹ ಉಂಟಾದಾಗ ರಸ್ತೆಗಳು ಮತ್ತು ಚರಂಡಿಗಳು ಹಾಳಾಗಿದ್ದು, ಇವುಗಳನ್ನು ಸಹ ದುರಸ್ತಿಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಡಿ.ಕೆ. ಸುರೇಶ್ ತಿಳಿಸಿದರು.
ಶಾಸಕ ಇಕ್ಬಾಲ್ ಹುಸೇನ್, ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಎಸ್‌ಪಿ ಕಾರ್ತಿಕ್ ರೆಡ್ಡಿ, ಎಡಿಸಿ ಶಿವಾನಂದ ಮೂರ್ತಿ, ಉಪಭಾಗಾಧಿಕಾರಿ ಮಂಜುನಾಥ್ ಇತರರು ಉಪಸ್ಥಿತರಿದ್ದರು.
ಜಿಲ್ಲಾಸ್ಪತ್ರೆಯಲ್ಲಿ ಟ್ರಾಮಾ ಕೇಂದ್ರ
ಜಿಲ್ಲೆಯಲ್ಲಿ ಸಂಭವಿಸುವ ಅಪಘಾತಗಳಲ್ಲಿ ಅಪಘಾತಕ್ಕೀಡಾದವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಆ ಒಂದು ಗಂಟೆ ಗೋಲ್ಡನ್ ಅವರ್ ಆಗಿದ್ದು ಸೂಕ್ತ ಚಿಕಿತ್ಸೆ ನೀಡಿದಲ್ಲಿ ಪ್ರಾಣ ಉಳಿಯುವ ಸಂಭವ ಹೆಚ್ಚು ಇರುತ್ತದೆ. ಆದ್ದರಿಂದ ಜಿಲ್ಲಾಸ್ಪತ್ರೆಯಲ್ಲಿ ಟ್ರಾಮಾ ಕೇಂದ್ರ ಸ್ಥಾಪಿಸಲಾಗುವುದು ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಅಪಘಾತ ತಡೆಗೆ ಜಂಟಿ ಸಮೀಕ್ಷೆ
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳನ್ನು ತಡೆಯಲು ಪೊಲೀಸ್ ಹಾಗೂ ಲೋಕೋಪಯೋಗಿ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್‌ಗಳು ಸೇರಿ ಸಮಿತಿ ರಚಿಸಿ ಅಪಘಾತಗಳು ಸಂಭವಿಸದಂತೆ ಕ್ರಮ ವಹಿಸಲು ಮತ್ತು ವಾಹನಗಳು ಸುಗಮವಾಗಿ ಸಂಚರಿಸಲು ಸಮೀಕ್ಷೆ ಮಾಡಿ ವರದಿ ನೀಡುವಂತೆ ಡಿ.ಕೆ. ಸುರೇಶ್ ತಿಳಿಸಿದರು.