ರೈತರ ಸಮಸ್ಯೆಗೆ ಶ್ರಮಿಸುವೆ

RMGM
Published on

ಕೈಲಾಂಚ : ರೈತರ ಸಮಸ್ಯೆ ಪರಿಹಾರಕ್ಕಾಗಿ ಅವರ ಕಷ್ಟ ಸುಖ ವಿಚಾರಿಸುವ ಕೆಲಸ ತನ್ನದಾಗಿದ್ದು, ಅವರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.
ಕೈಲಾಂಚ ಹೋಬಳಿಯ ಕೆ.ಜಿ. ಹೊಸಹಳ್ಳಿಯಲ್ಲಿ ಮಂಗಳವಾರ ಬಗರ್ ಹುಕುಂ ಸಾಗುವಳಿ ಅರ್ಜಿದಾರರ ಸ್ಥಳ ಪರಿಶೀಲನಾ ವೇಳೆ ಸುದ್ದಿಗಾರರ ಜತೆ ಮಾತನಾಡಿದರು.

ರೈತನ ಕಷ್ಟ ಕಂಡಿದ್ದೇನೆ. ನಾನು ರೈತನ ಮಗನಾಗಿದ್ದು, ಆ ಕಷ್ಟ ನನಗರಿವಿದೆ. ಹಾಗಾಗಿ ರೈತರ ಸಮಸ್ಯೆ ಪರಿಹರಿಸಲು ಮುಂದಾಗಿದ್ದೇನೆ. ತಾಲೂಕಿನಲ್ಲಿ ಬಗರ್ ಹುಕುಂಗೆ ಸಂಬಂಧಿಸಿದಂತೆ ಯಾವೊಬ್ಬ ರೈತರಿಗೆ ಜಮೀನು ಮಂಜೂರಾತಿ ಮಾಡಿಲ್ಲ. ಗ್ರಾಮಾಂತರಕ್ಕೆ ಆಗಮಿಸಿ ರೈತರ ಕಷ್ಟ ಸುಖ ವಿಚಾರಿಸುವ ಕೆಲಸ ಈ ಹಿಂದಿನ ಜನಪ್ರತಿನಿಧಿಗಳು ನಡೆಸಿಲ್ಲ ಎಂದರು.

ನಮೂನೆ 50, 53, 57ರಲ್ಲಿ ಎಷ್ಟು ಅರ್ಜಿಗಳಿವೆ. ಅದರಲ್ಲಿ ಯಾರೆಲ್ಲ ವ್ಯವಸಾಯ ಮಾಡುತ್ತಿದ್ದಾರೆ ಎಂಬ ಮಾಹಿತಿ ಪಡೆಯಲಾಗಿದೆ. ಬಾಕಿ ಉಳಿದಿರುವ ಅರ್ಜಿಗಳನ್ನು ವಿಲೇ ಮಾಡಲಾಗುತ್ತಿದೆ. ಬಗರ್‌ಹುಕಂ ಸಂಬಂಧ ಈಗಾಗಲೇ ಅಧಿಕಾರಿಗಳ ಮಟ್ಟದಲ್ಲಿ ಸಾಕಷ್ಟು ಸಭೆ ನಡೆಸಲಾಗಿದೆ. 40 ವರ್ಷಕ್ಕೂ ಮೇಲ್ಪಟ್ಟು ವ್ಯವಸಾಯ ಮಾಡುತ್ತಿರುವ ರೈತರು ಹಕ್ಕು ಪಡೆಯದೆ ವಂಚಿತರಾಗಿದ್ದಾರೆ. ಬಗರ್‌ಹುಕುಂ ಸಾಗುವಳಿಗೆ ಅರ್ಜಿ ಹಾಕಿದ್ದ ಕೆಲವರು ಮೃತಪಟ್ಟಿದ್ದಾರೆ. ಅವರ ಮಕ್ಕಳು ಅರ್ಜಿ ವಿಲೇವಾರಿಗಾಗಿ ಕಾಯುತ್ತಿದ್ದಾರೆ. ಹಾಗಾಗಿ ಆದಷ್ಟು ಬೇಗ ವಿಲೇಮಾಡಲು ತೀರ್ಮಾನ ಮಾಡಲಾಗಿದೆ. ಈ ಸಂಬಂಧ ಬಗರ್ ಹುಕ್ಕಂ ಸಾಗುವಳಿ ಅರ್ಜಿದಾರರ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಶೀಘ್ರದಲ್ಲಿ ಪರಿಹಾರ ದೊರಕಿಸಿಕೊಡಲಾಗುತ್ತದೆ ಎಂದು ತಿಳಿಸಿದರು.

ಸದಸ್ಯರಾದ ಕಮಲಮ್ಮ, ನಾಗೇಶ್, ಮಹದೇವಯ್ಯ, ತೇಜ, ದೇವರಾಜಮ್ಮ, ಮುಖಂಡರಾದ ಅರುಣ್, ಕೋಟಹಳ್ಳಿ ವೆಂಕಟೇಶ್‌ಮೂರ್ತಿ, ರೇಣುಕಾಪ್ರಸಾದ್, ಭೀಮ, ದೊಡ್ಡವೀರಯ್ಯ, ಪಾರ್ಥಸಾರಥಿ, ವಾಸು, ಕೆಂಪರಾಮು, ದಾಸೇಗೌಡ, ರಾಮಣ್ಣ, ಅನಿಲ್ ಜೋಗಿಂದರ್, ಶ್ರೀನಿವಾಸ್, ಲೋಕೇಶ್ ಇದ್ದರು.

ಕೆರೆ ತುಂಬಿಸುತ್ತೇನೆ: ಕೈಲಾಂಚ ಭಾಗದಲ್ಲಿನ ತೆಂಗಿನಕಲ್ಲು, ಅವ್ವೇರಹಳ್ಳಿ ಕೆರೆಗೆ ನೀರು ಬಂದಿದೆ. ಹಲವು ಕೆರೆಗಳಿಗೆ ನೀರು ತರುವ ಪ್ರಯತ್ನ ಕೆಲಸಗಳು ನಡೆಯುತ್ತಿವೆ. ಮುಂಗಾರು ಕೈಕೊಟ್ಟ ಪರಿಣಾಮ ಮಳೆ ಇಲ್ಲದೆ ಯೋಜನೆಗಳು ಉಳಿದಿದ್ದವು, ಈಗ ಮುಂದುವರಿಯಲಿವೆ. ಬುಧವಾರ ಕಾಳೇಗೌಡನದೊಡ್ಡಿಯ ಏತನೀರಾವರಿಗೆ ಭೂಮಿ ಪೂಜೆ ನಡೆಯಲಿದೆ. ನೀರಾವರಿ ಯೋಜನೆಗಳಿಗೆ ಪ್ರಮುಖ ಆದ್ಯತೆ ನೀಡುತ್ತೇನೆ ಎಂದು ಶಾಸಕರು ಹೇಳಿದರು.

ರಾಜನೀತಿ ಮಾಡುತ್ತಿದ್ದೇನೆ ನಾನು ರಾಜಕಾರಣ ಮಾಡುತ್ತಿಲ್ಲ, ಬದಲಿಗೆ ರಾಜನೀತಿ ಮಾಡುತ್ತಿದ್ದೇನೆ. ನನಗೆ ಮುಡಾ, ಕೇಂದ್ರ ಮಂತ್ರಿ, ಮುಖ್ಯಮಂತ್ರಿ ರಾಜೀನಾಮೆ ವಿಷಯಗಳ ರಾಜಕೀಯ ಬೇಡ, ಬದಲಿಗೆ ರೈತರ ಹಾಗೂ ಜನತೆ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿದ್ದೇನೆ. ಈ ವಿಷಯದಲ್ಲಿ ನನಗೆ ಯಾವುದೇ ರಾಜಕೀಯ ಬೇಡ. ನನ್ನ ಕ್ಷೇತ್ರಕ್ಕೆ ಸರ್ಕಾರ ಅನುದಾನ ಕೊಡುತ್ತದೆ. ಎಂದು ಶಾಸಕರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net