ಎಂಇಎಸ್ ಪುಂಡಾಟಿಕೆಗೆ ಬ್ರೇಕ್ ಹಾಕಲು ಕರವೇ ಒತ್ತಾಯ

08-12-rama-Karave
Published on

ವಿಜಯವಾಣಿ ಸುದ್ದಿಜಾಲ

ರಾಮನಗರ: ಬೆಳಗಾವಿ ವಿವಾದವನ್ನು ಕೆಣಕಿ ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ, ಕನ್ನಡಿಗರ ಸಂಸ್ಥೆಗಳ ಮೇಲೆ, ಕನ್ನಡಿಗರ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸುತ್ತಿರುವ ಗೂಂಡಾಗಳ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ರಾಮನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಭಾಷಾವಾರು ಪ್ರಾಂತ್ಯ ವಿಂಗಡಣೆಯ ನಂತರ ಕರ್ನಾಟಕ ಅನೇಕ ಕನ್ನಡದ ಪ್ರದೇಶಗಳನ್ನು ಕಳೆದು ಕೊಂಡರೂ ರಾಷ್ಟ್ರೀಯ ಐಕ್ಯತೆಗೆ ಭಂಗ ಬಾರದೆಂದು ಆದ ಅನ್ಯಾಯವನ್ನು ಸಹಿಸಿಕೊಂಡು ಬಂದಿದೆ. ಆದರೆ ಕನ್ನಡದ ನೆಲವಾದ ಬೆಳಗಾವಿ ತಮಗೆ ಸೇರಬೇಕು ಎಂದು ಮಹಾರಾಷ್ಟ್ರ ದಶಕಗಳಿಂದ ತಗಾದೆ ತೆಗೆಯುತ್ತ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಲು ಕಾರಣವಾಗಿದೆ. ಮಹಾರಾಷ್ಟ್ರದ ಒತ್ತಡದಿಂದಲೇ ಕೇಂದ್ರ ಸರ್ಕಾರದಿಂದ ರಚಿಸಲ್ಪಟ್ಟ ಮೆಹರ್ ಚಂದ್ ಮಹಾಜನ್ ಅವರ ಏಕಸದಸ್ಯ ಆಯೋಗ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕು ಎಂದು ತೀರ್ಪು ನೀಡಿದೆ. ಆದರೆ ಇದನ್ನು ಒಪ್ಪದ ಮಹಾರಾಷ್ಟ್ರ ಸರ್ಕಾರ ಮತ್ತು ಅಲ್ಲಿನ ರಾಜಕಾರಣಿಗಳು ದಶಕಗಳಿಂದ ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರ ನಡುವೆ ಸಂಘರ್ಷದ ವಾತಾವರಣವನ್ನು ನಿರ್ಮಿಸಲು ಯತ್ನಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಎಂಬ ಭಾಷಾಂಧ ಗೂಂಡಾ ಸಂಘಟನೆಗೆ ಹಣಕಾಸಿನ ಬೆಂಬಲ ನೀಡಿ ಗಡಿಭಾಗದಲ್ಲಿ ದಾಂಧಲೆ ನಡೆಸಲು, ಕನ್ನಡಿಗರ ಮೇಲೆ ದಾಳಿ ನಡೆಸಲು ಕಾರಣರಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು

ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಕಬ್ಬಾಳೇಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿಎಂ ಎನ್ ಸತ್ಯನಾರಾಯಣ ವಿದ್ಯಾರ್ಥಿಘಟಕದ ರಘು ರಾಂ, ರಾಮನಗರ ತಾಲೂಕು ಅಧ್ಯಕ್ಷ ದೇವರಾಜು, ಕಾರ್ಯದರ್ಶಿ ಚೆನ್ನಕೇಶವ, ಕನಕಪುರ ತಾಲೂಕು ಅಧ್ಯಕ್ಷ ಜಯರಾಮೇಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಚನ್ನಪಟ್ಟಣ ತಾಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷ ಸಂಜಯ್ ಕುಮಾರ್ ಹನಿಯೂರು, ಹೋಬಳಿ ಯುವ ಘಟಕದ ಅಧ್ಯಕ್ಷ ಮನು, ಕನಕಪುರ ತಾಲೂಕು ವಿದ್ಯಾರ್ಥಿ ಘಟಕದ ಅಭಿಷೇಕ್ , ಶ್ರೀನಿವಾಸ್ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net