

ಬಾಗಿಲು ತೆಗೆಸಲು ಹನುಮಾಪುರ ಗ್ರಾಮಸ್ಥರ ಆಗ್ರಹ
ಬೀಗ ಹಾಕಿದವರ ವಿರುದ್ಧ ಕ್ರಮಕ್ಕೆ ಪಟ್ಟು
ಮಾಗಡಿ
ಅರ್ಚಕರನ್ನು ಬದಲಾವಣೆ ಮಾಡುವಂತೆ ದೇವಾಲಯಕ್ಕೆ ಬೀಗ ಜಡಿದ ಪ್ರಸಂಗ ತಾಲೂಕಿನ ಹನುಮಾಪುರದ ವಡಿಸಲಮ್ಮ ದೇವಾಲಯದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಅರ್ಚಕ ರಾಜಣ್ಣ ಸೇರಿ ಅವರ ಪೂರ್ವಿಕರ ಕಾಲದಿಂದಲೂ ಗ್ರಾಮದ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತ ಬಂದಿದ್ದಾರೆ. ಆದರೆ, ದೇವಾಲಯದ ಟ್ರಸ್ಟಿ ಬೆಂಗಳೂರಿನ ಬೈರಸಂದ್ರದ ಕುಮಾರ್ ಎಂಬುವರು ಮಂಗಳವಾರ ದೇವಾಲಯದ ಬಳಿ ತೆರಳಿ ಅರ್ಚಕರನ್ನು ಹೊರಗೆ ಕರೆದು ಏಕಾಏಕಿ ಬಾಗಿಲಿಗೆ ಬೀಗ ಜಡಿದಿದ್ದಾರೆ. ಇದರಿಂದ ದೇವಾಲಯದಲ್ಲಿ ಪೂಜೆ ಸ್ಥಗಿತಗೊಂಡಿದ್ದು, ಭಕ್ತರು ಬಾಗಿಲಲ್ಲೇ ಪೂಜೆ ಸಲ್ಲಿಸುತ್ತಿದ್ದಾರೆ. ಹಾಗೂ ಬಾಗಿಲು ತೆಗೆಸಿ ಪೂಜೆ ಅವಕಾಶ ಮಾಡಿಕೊಡುವಂತೆ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ವಡಿಸಲಮ್ಮ ದೇವಾಲಯ ಟ್ರಸ್ಟ್ ಖಜಾಂಚಿ ಶ್ರೀನಿವಾಸ್ ಮಾತನಾಡಿ, ಭೋವಿ ಬಂಡಿ ಜನಾಂಗ ಮತ್ತು ಗ್ರಾಮಸ್ಥರ ಸಹಕಾರದಿಂದ ದೇವಾಲಯ ನಿರ್ಮಿಸಲಾಗಿದೆ. ಅರ್ಚಕ ರಾಜಣ್ಣ ದಿನನಿತ್ಯ ಪೂಜೆ ಮಾಡಿಕೊಂಡು ಬಂದಿದ್ದಾರೆ. ಅರ್ಚಕರಿಂದ ಗ್ರಾಮಸ್ಥರಿಗೆ ಮತ್ತು ಭಕ್ತರಿಗೆ ಯಾವುದೇ ಸಮಸ್ಯೆ ಇಲ್ಲದಿದ್ದರೂ ಕುಮಾರ್ ಅವರು ದೇವಾಲಯಕ್ಕೆ ಬೀಗ ಹಾಕಿರುವುದರಿಂದ ಭಕ್ತರ ಭಾವನೆಗೆ ಧಕ್ಕೆ ಉಂಟಾಗಿದೆ. ದೇವಾಲಯದ ಬಾಗಿಲು ತೆಗೆಸಿ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಗಡಿ ಠಾಣೆಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಕಾರಣ ಏನು?
ಟ್ರಸ್ಟ್‌ನಲ್ಲಿದ್ದ ಎಂ.ಕುಮಾರ್ ಮತ್ತು ಎಚ್.ಆನಂದ್ ಎಂಬುವರು ಸ್ವಂತ ಲಾಭದ ಉದ್ದೇಶದಿಂದಾಗಿ ಇತ್ತೀಚೆಗೆ ಬೇರೊಂದು ಟ್ರಸ್ಟ್ ಮಾಡಿಕೊಂಡು, ವಡಿಸಲಮ್ಮ ದೇವಾಲಯ ನಿರ್ಮಾಣ ಮಾಡಿದ್ದು, ದೇವಾಲಯ ನಮ್ಮದು. ಎಲ್ಲರೂ ನಾನು ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ ಬೀಗ ಹಾಕುವುದಾಗಿ ತಿಳಿಸಿ ಅರ್ಚಕರು ಹಾಗೂ ಭಕ್ತರನ್ನು ದೇವಾಲಯದಿಂದ ಹೊರಹಾಕಿ ಬೀಗ ಹಾಕಿದ್ದಾರೆ ಎಂದು ಶ್ರೀನಿವಾಸ್ ಆರೋಪಿಸಿದರು.
ದೇವಾಲಯದ ಮರು ಜೀರ್ಣೋದ್ಧಾರ ನೆಪದಲ್ಲಿ ಬೇರೆಯವರಿಂದ ವಂತಿಗೆ ವಸೂಲಿ ಮಾಡಿ ಯಾವುದೇ ಲೆಕ್ಕಪತ್ರ ನೀಡಿಲ್ಲ. ಇದು ಅರ್ಚಕರಿಗೆ ತಿಳಿದಿದ್ದು, ಟ್ರಸ್ಟ್‌ನ ಇತರರಿಗೆ ತಿಳಿಸುತ್ತಾರೆ ಎಂಬ ಉದ್ದೇಶದಿಂದ ಅರ್ಚಕರನ್ನು ಬದಲಾವಣೆ ಮಾಡಲು ಇಂತಹ ಕೆಲಸ ಮಾಡಿದ್ದಾರೆ. ಈ ಸಂಬಂಧ ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದು ಶ್ರೀನಿವಾಸ್ ತಿಳಿಸಿದರು.
ಗ್ರಾಮದ ರಾಜಣ್ಣ, ಚಿನ್ನಣ್ಣ, ರಾಜಶೇಖರಪ್ಪ, ರಾಮಕೃಷ್ಣಯ್ಯ, ಕೃಷ್ಣಮೂರ್ತಿ, ಮುನಿಯಪ್ಪ, ಗಂಗಾಧರ, ಸೀನಯ್ಯ, ಮಂಜುನಾಥ, ಸರಸ್ವತಮ್ಮ, ಶಿವಾನಂದ, ಈರಣ್ಣ, ಮಂಜಮ್ಮ, ವೆಂಕಟಮ್ಮ, ಸುರೇಶ್, ರಮೇಶ್, ಚಿಕ್ಕಣ್ಣ ಇತರರು ಹಾಜರಿದ್ದರು.