

ಸಂಬಂಧಿ ಯುವತಿಯನ್ನೇ ಪ್ರೀತಿಸುತ್ತಿದ್ದ ಯುವಕ, ಅಪಹರಿಸಿ ಕೊಲೆಗೆ ಯತ್ನ
ರಾಮನಗರ: ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದ ಯುವತಿ ಸಂಬಂಧಿಕರು, ಯುವಕನ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿರುವ ಘಟನೆ ಶನಿವಾರ ಕುಂಬಳಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ ಶಶಾಂಕ್ (18) ತೀವ್ರ ಸುಟ್ಟಗಾಯಗಳಿಂದ ಚಿಕಿತ್ಸೆ ಪಡೆಯುತ್ತಿರುವ ಪ್ರೇಮಿ.
ಆರ್ ಆರ್ ನಗರದ ನಿವಾಸಿ ರಂಗನಾಥ್ ಮತ್ತು ಸತ್ಯಪ್ರೇಮ ದಂಪತಿಯ ಪುತ್ರ ಶಶಾಂಕ್, ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಬಳಿ ಇರುವ ಎಸಿಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದು, ತನ್ನ ಹತ್ತಿರದ ಸಂಬಂಧಿ ಯುವತಿಯನ್ನು ಪ್ರೀತಿಸುತ್ತಿದ್ದಾನೆ.
ಈ ಪ್ರೀತಿಗೆ ಯುವತಿ ಮನೆಯಲ್ಲಿ ವಿರೋಧವಿತ್ತು. ಇದರ ಹೊರತಾಗಿಯೂ ಯುವತಿ ಕಳೆದ ಸೋಮವಾರ ಶಶಾಂಕ್ ಜೊತೆಗೆ ಅವರ ಮನೆಗೂ ತೆರಳಿದ್ದಳು. ಈ ಮಾಹಿತಿ ಪಡೆದ ಯುವತಿ ಪಾಲಕರು ಶಶಾಂಕ್ ಮನೆಗೆ ನುಗ್ಗಿದ್ದ, ಆತನ ಮೇಲೆ ಹಲ್ಲೆ ನಡೆಸಿ, ಯುವತಿಯನ್ನು ಕರೆದುಕೊಂಡು ಹೋಗಿದ್ದರು.
ಆದರೆ, ಶನಿವಾರ ತಂದೆ ರಂಗನಾಥ್ ಅವರ ಬಳಿ ಕಾಲೇಜಿಗೆ ಡ್ರಾಪ್ ಪಡೆದುಕೊಂಡು, ನಂತರ ತರಗತಿಗಳು ಇಲ್ಲ ಎನ್ನುವ ಕಾರಣ ಮನೆಗೆ ತೆರಳಲು ಬಸ್ಗೆ ಕಾಯುತ್ತಿದ್ದ ವೇಳೆ ಶಶಾಂಕ್ ದೊಡ್ಡಪ್ಪ ಎನ್ನಲಾದ ಮನು ಇತರೆ 6 ಮಂದಿ ಅಪಹರಣ ಮಾಡಿ, ನಂತರ ಕಣಿಮಿಕೆ ಬಳಿ ರ್ನಿಜನ ಪ್ರದೇಶದಲ್ಲಿ ಈತನ ಮೇಲೆ ಹಲ್ಲೆ ನಡೆಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು.
ನಂತರ ಹೊರಳಾಡಿ ಬೆಂಕಿ ನಂದಿಸಿಕೊಂಡಿದ್ದ ಶಶಾಂಕ್, ತನ್ನ ಸ್ನೇಹಿತರಿಗೆ ಕರೆ ಮಾಡಿ ಪರಿಸ್ಥಿತಿಯನ್ನು ತಿಳಿಸಿದ್ದ. ನಂತರ ಈತನ ಸ್ನೇಹಿತರು ತಕ್ಷಣವೇ ಈತನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಸಂಬಂಧ ಕುಂಬಳುಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.