

ಕನಕಪುರ
ಮೇಕೆದಾಟು ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಮೇಕೆದಾಟು ಹೋರಾಟ ಸಮಿತಿ, ರೈತ ಸಂಘ ಹಾಗೂ ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಹೋರಾಟ ಸಮಿತಿಯ ನೂರಾರು ಸದಸ್ಯರು, ರೈತರು, ನಗರದ ಅಯ್ಯಪ್ಪಸ್ವಾಮಿ ದೇವಾಲಯದಿಂದ ತಾಲೂಕು ಕಚೇರಿಯವರೆಗೆ ಮೆರವಣಿಗೆಯಲ್ಲಿ ಸಾಗಿ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಸ್ಮಿತಾರಾಮು ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಯಕರ್ನಾಟಕ ಸಂಘಟನೆಯ ಮಾಜಿ ಅಧ್ಯಕ್ಷ ಕುಮಾರಸ್ವಾಮಿ, ರೈತ ಸಂದ ರಾಜ್ಯಾಧ್ಯಕ್ಷ ಮಂಜೇಗೌಡ, ಸ್ವತಃ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರೇ ಮೇಕೆದಾಟು ಯೋಜನೆ ಜಾರಿಗಾಗಿ ಈ ಹಿಂದೆ ಪಾದಯಾತ್ರೆ ಹಾಗೂ ನಿರಂತರ ಹೋರಾಟ ಮಾಡಿದ್ದಾರೆ. ಈಗ ಅವರೇ ಅಧಿಕಾರದಲ್ಲಿದ್ದು, ಆರು ಜಿಲ್ಲೆಗಳ ರೈತರ ಮತ್ತು ಜನ, ಜಾನುವಾರುಗಳ ಅನುಕೂಲಕ್ಕಾಗಿ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಿದರು.
ಸರ್ಕಾರ ಬಂದರೆ ಯೋಜನೆಯನ್ನು ಜಾರಿ ಮಾಡುವ ಭರವಸೆ ನೀಡಿದ್ದೀರಿ. ಈಗ ನಿಮ್ಮದೇ ಸರ್ಕಾರವಿದ್ದು, ನುಡಿದಂತೆ ಯೋಜನೆ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದರು.
ಬಜೆಟ್ನಲ್ಲೇ ಹಣ ಮೀಸಲಿಡಿ
ನೂತನ ಸರ್ಕಾರದ ಬಜೆಟ್ ಸಿದ್ಧಪಡಿಸುವಾಗ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಡಿಪಿಆರ್ನಲ್ಲೇ ಸಂಪೂರ್ಣ ಹಣ ಮೀಸಲಿಡಬೇಕು, ಹಾಗೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಬೇಕು. ಹಿಂದಿನ ಸರ್ಕಾರ ಡಿಪಿಆರ್ ತಯಾರಿಸಿ ಒಂದು ಸಾವಿರ ಕೋಟಿ ರೂ. ಹಣವನ್ನು ನಿಗದಿ ಮಾಡಿ ಕಾಲಹರಣ ಮಾಡಿತ್ತು. ನೀವೂ ಸಹ ಡಿಪಿಆರ್ನಲ್ಲಿ ಎರಡು ಸಾವಿರ ಕೋಟಿ ಹಣವಿಟ್ಟು ಕಾಮಗಾರಿಯನ್ನು ಪ್ರಾರಂಭಿಸದೆ ಜನರ ಕಣ್ಣೊರೆಸುವ ತಂತ್ರ ಮಾಡಬಾರದು. ನಿಮ್ಮ ಸರ್ಕಾರದ ಅವಧಿಯಲ್ಲೇ ಯೋಜನೆ ಪೂರ್ಣಗೊಳಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.
ಮುಖಂಡರಾದ ಸಂಪತ್ಕುಮಾರ್, ದೇವರಾಜು, ಆರ್.ವಿ.ಹೊನೇಗೌಡ, ಎಂ.ಡಿ.ಶಿವಕುಮಾರ್, ದುಂಡಯ್ಯ, ಕಚುವನಹಳ್ಳಿ ಕುಮಾರ್, ನದೀಮ್, ಮಹಿಳಾ ಪದಾಧಿಕಾರಿಗಳಾದ ನಾಗರತ್ನಮ್ಮ, ಮಾರಮ್ಮ, ಕನ್ನಡ ಪರ ಸಂಟನೆಯ ಎ.ಪಿ.ಕೃಷ್ಣಪ್ಪ, ಭಾಸ್ಕರ್, ಜಯಸಿಂಹ, ಒಕ್ಕಲಿಗರ ಸಂದ ಗಬ್ಬಾಡಿ ಕಾಡೇಗೌಡ, ಹೊನ್ನೇಗೌಡ, ವಿರೇಶ, ಕೆಆರ್ಎಸ್ ಪಕ್ಷದ ಪ್ರಶಾಂತ್ ಹೊಸದುರ್ಗ ಮುಂತಾದವರು ಹಾಜರಿದ್ದರು.