

ಕನಕಪುರ
ಅಮಾಯಕನೊಬ್ಬನನ್ನು ಕೊಲೆ ಮಾಡಿ, ಅಪಘಾತವೆಂಬಂತೆ ಬಿಂಬಿಸಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿರುವ ಆರೋಪಿಗಳನ್ನು ಬಂಧಿಸುವಂತೆ ಮೃತನ ಸಂಬಂಧಿಕರು, ಗ್ರಾಮಸ್ಥರು ಮನೆ ಎದುರಿನ ರಸ್ತೆಯಲ್ಲಿ ಶವ ಇಟ್ಟು ಪ್ರತಿಭಟನೆ ನಡೆಸಿರುವುದು ಕೋಡಿಹಳ್ಳಿ ಠಾಣೆ ವ್ಯಾಪ್ತಿಯ ಅಳ್ಳಿಮರದದೊಡ್ಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ಮಾದೇಶ್ (47) ಮೃತ. ಈತ ಬಿಜೆಪಿ ಕಾರ್ಯಕರ್ತ ಎನ್ನಲಾಗಿದ್ದು, ಪ್ರತಿಭಟನೆಯಿಂದಾಗಿ ಒಂದು ಗಂಟೆಗೂ ಹೆಚ್ಚುಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಘಟನೆ ವಿವರ: ಅಳ್ಳಿಮರದೊಡ್ಡಿ ಗ್ರಾಮದಲ್ಲಿ ನಾಗರಾಜ ಹಾಗೂ ಪಟೇಲ್ ಶಂಕರ್ ಎಂಬುವರ ಗುಂಪುಗಳ ನಡುವೆ ವೈಯಕ್ತಿಕ ಕಾರಣಕ್ಕಾಗಿ ಭಾನುವಾರ ಗಲಾಟೆ ನಡೆದಿತ್ತು. ಅಂದು ರಾತ್ರಿ ಪಟೇಲ್ ಶಂಕರ್ ಎಂಬಾತ ಮಾದೇಶನಿಗೆ ಕರೆ ಮಾಡಿ ನಾಗರಾಜನ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಮಾತನಾಡಿ ಆತನನ್ನು ಕರೆಸಿಕೊಂಡು ಗ್ರಾಮದ ಕೆರೆಯ ಏರಿ ರಸ್ತೆಯಲ್ಲಿ ಮಾತನಾಡುತ್ತಿದ್ದಾಗ ಎರಡು ಕಾರುಗಳು ಮಾದೇಶನಿಗೆ ಡಿಕ್ಕಿ ಹೊಡೆದಿವೆ.
ಗಾಯಗೊಂಡಿದ್ದ ಮಾದೇಶನನ್ನು ರಾತ್ರಿಯೇ ಕನಕಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಮಧ್ಯಾಹ್ನ ಚಿಕಿತ್ಸೆ ಲಭಿಸದೆ ಮೃತಪಟ್ಟಿದ್ದಾನೆ. ಮೃತದೇಹವನ್ನು ಗ್ರಾಮಕ್ಕೆ ತಂದ ಸಂಬಂಧಿಕರು ಹಾಗೂ ಗ್ರಾಮಸ್ಥರು ಮಾದೇಶನದು ಅಪಘಾತವಲ್ಲ, ಕೊಲೆ ಎಂದು ಶಂಕೆ ವ್ಯಕ್ತಪಡಿಸಿ ಶವವನ್ನು ಮನೆಯ ಮುಂದಿಟ್ಟು ಪ್ರತಿಭಟನೆ ನಡೆಸಿದರು.
ಎರಡು ಗುಂಪುಗಳ ವೈಷಮ್ಯಕ್ಕೆ ಮಾದೇಶ ಬಲಿಯಾಗಿದ್ದಾನೆ. ಅಪಘಾತದ ನೆಪದಲ್ಲಿ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಯುತ್ತಿದೆ. ಪ್ರಕರಣ ಸಂಬಂಧ ಪಟೇಲ್ ಶಂಕರ್‌ನನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಮೃತನ ಕುಟುಂಬದವರು ಒತ್ತಾಯಿಸಿದರು. ಸಂಜೆ 5 ಗಂಟೆಯವರೆಗೂ ರಸ್ತೆತಡೆ ನಡೆಸಿದ್ದರಿಂದ ಸಂಚಾರ ಅಸ್ತವ್ಯವಸ್ಥಗೊಂಡಿತ್ತು.
ಗ್ರಾಮಸ್ಥರೇ ಶಂಕರ್ ಎಂಬಾತನ ಹೆಸರು ಬರೆದು ಪೊಲೀಸರಿಗೆ ಲಿಖಿತ ದೂರು ನೀಡಿದ್ದ ಹಿನ್ನೆಲೆಯಲ್ಲಿ ಕುಟುಂಬದವರು ಪ್ರತಿ ಹಿಂಪಡೆದರು. ಸ್ಥಳಕ್ಕೆ ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಎಲ್. ಕೃಷ್ಣ, ಸಬ್‌ಇನ್ಸ್‌ಪೆಕ್ಟರ್ ರವಿಕುಮಾರ್ ಭೇಟಿ ನೀಡಿದ್ದು, ಹಾಗೂ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಕೋಡಿಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.