

ಕನಕಪುರ: ಬಾಕಿ ಸಂಬಂಳಕ್ಕೆ ಆಗ್ರಹಿಸಿ ಪೌರ ಕಾರ್ಮಿಕರಿಬ್ಬರು ಮೈ ಮೇಲೇ ಮಲ ಸುರಿದು ಕೊಂಡು ಪ್ರತಿಭಟನೆ ಮಾಡಿರುವ ಘಟನೆ ಕನಕಪುರ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆದಿದೆ.
ಪಂಚಾಯತಿಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಸುರೇಶ್್ ಮತ್ತು ರಂಗಸ್ವಾಮಿ ಎಂಬುವರಿಗೆ 11 ತಿಂಗಳ ಬಾಕಿ ವೇತನ ಬರಬೇಕಿತ್ತು. ಇದನ್ನು ಪಡೆದುಕೊಳ್ಳುವ ಸಲುವಾಗಿ ಹಲವಾರು ಬಾರಿ ಮನವಿ ಮಾಡಿದರೂ ಯಾರೂ ಇವರ ಬೇಡಿಕೆಗೆ ಸ್ಫಂದಿಸಲಿಲ್ಲ. ಇದರಿಂದ ಬೇಸತ್ತ ಇಬ್ಬರೂ ಮಂಗಳವಾರ ತಮ್ಮ ಮೈ ಮೇಲೆ ಮಲ ಸುರಿದು ಕೊಂಡು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಈ ಅಮಾನವೀಯ ಘಟನೆಯಿಂದ ಎಚ್ಚೆತ್ತ ಗ್ರಾಮ ಪಂಚಾಯಿತಿ ತಕ್ಷಣವೇ ಇಬ್ಬರಿಗೂ ಒಂದು ಲಕ್ಷ ರೂ ನಗದು ಹಾಗೂ ಉಳಿಕೆ 2.2 ಲಕ್ಷ ರೂ.ಗಳ ಚೆಕ್್ ಅನ್ನು ನೀಡುವ ಮೂಲಕ ತಪ್ಪನ್ನು ಮುಚ್ಚಿಕೊಳ್ಳುವ ಯತ್ನ ಮಾಡಲಾಗಿದೆ.
ಗ್ರಾಮ ಪಂಚಾಯಿತಿಯ ಈ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಪೌರ ಕಾರ್ಮಿಕರು ತಮ್ಮ ನೋವನ್ನು ಈ ಹಂತದವರೆಗೆ ತರುವ ಮಟ್ಟಕ್ಕೆ ಬಿಟ್ಟುಕೊಂಡಿರುವ ಗ್ರಾಪಂ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹವೂ ಕೇಳಿ ಬಂದಿದೆ.