ರಾಮನಗರ- ಕನಕಪುರ ಹೆದ್ದಾರಿ ಗುಂಡಿಮಯ!

Road problem
Published on

*ನಿತ್ಯ ಸಂಚರಿಸುವವರ ನೋವು ಕೇಳುವವರೇ ಇಲ್ಲ 

* ವಿದ್ಯಾರ್ಥಿಗಳು, ರಾತ್ರಿ ಪಾಳಿ ಕೆಲಸಗಾರರಿಗೆ ಸಂಚಾರದ್ದೇ ಸಮಸ್ಯೆ

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ರಾಮನಗರ - ಕನಕಪುರ ರಾಜ್ಯ ಹೆದ್ದಾರಿ 3ರ ಅಲ್ಲಲ್ಲಿ ಗುಂಡಿ ಬಿದ್ದು, ಸುಗಮ ಸಂಚಾರಕ್ಕೆ ತೊಡಕಾಗಿದೆ.

ಹೆದ್ದಾರಿ ಕೇವಲ ತಾಲೂಕು ಕೇಂದ್ರ ಅಷ್ಟೇ ಅಲ್ಲದೆ, ತಮಿಳುನಾಡಿನಿಂದ ಆಂಧ್ರಪ್ರದೇಶದ ಗಡಿವರೆಗೆ ಸಂಪರ್ಕ ಕಲ್ಪಿಸುತ್ತದೆ. ಕನಕಪುರ ಸರ್ಕಲ್‌ನಿಂದ ಕೋಟಹಳ್ಳಿ, ರಾಮನಗರ ತಾಲೂಕು ಗಡಿವರೆಗೆ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿ ಬಿದ್ದು ಡಾಂಬರು ಹಾಳಾಗಿದೆ. ಅಪಾರ ಪ್ರಮಾಣದಲ್ಲಿ ವಾಹನಗಳು ಸಂಚರಿಸುವ ಹಿನ್ನೆಲೆಯಲ್ಲಿ ಕಿತ್ತು ಹೋಗಿರುವ ರಸ್ತೆಯಲ್ಲೀಗ ಮಂಡಿ ಉದ್ದದ ಗುಂಡಿಗಳಾಗಿವೆ. ಇದು ವಾಹನ ಸವಾರರಿಗೆ ಅಪಾಯ ತಂದೊಡ್ಡಿದೆ.

ರಸ್ತೆ ಮಧ್ಯೆ ಆಳವಾದ ಗುಂಡಿ ನಿರ್ಮಾಣವಾಗಿರುವ ಕಾರಣ ದ್ವಿಚಕ್ರ ವಾಹನ ಸವಾರರಿಗೆ ಅಪಾಯ ತಪ್ಪಿದ್ದಲ್ಲ. ಮಳೆ ಬಂದಾಗ ನೀರು ತುಂಬಿಕೊಂಡು ಗುಂಡಿ ಕಾಣದೆ ವಾಹನ ಸಮೇತ ಬಿದ್ದು ಕೈಕಾಲು ಮುರಿದುಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ.

ನಿತ್ಯ ಜಿಲ್ಲಾ ಕೇಂದ್ರ ಮತ್ತು ಸುತ್ತಮುತ್ತಲಿನ ಕಾರ್ಖಾನೆಗಳಿಗೆ ನೂರಾರು ಉದ್ಯೋಗಿಗಳು ದ್ವಿಚಕ್ರ ವಾಹನಗಳಲ್ಲೇ ಓಡಾಡುತ್ತಾರೆ. ರಾತ್ರಿ ಪಾಳಿಯಲ್ಲೂ ಕೆಲಸ ನಿರ್ವಹಿಸಿ ಬರುವ ಕಾರಣ ರಸ್ತೆಯಲ್ಲಿ ಗುಂಡಿಗಳು ಕಾಣದೆ ಅನೇಕರು ಬಿದ್ದು, ಗಾಯಗೊಂಡಿದ್ದಾರೆ. ಪ್ರಾಣಹಾನಿ ಸಂಭವಿಸುವ ಮುನ್ನ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಲೋಕೋಪಯೋಗಿ ಇಲಾಖೆ ಬಹುಬೇಗನೆ ಕೈಗೊಳ್ಳಬೇಕು ಎನ್ನುತ್ತಾರೆ ಗೌಡಯ್ಯನದೊಡ್ಡಿ ಗ್ರಾಮದ ಗಿರೀಶ್.

ಪರಿತಪಿಸುತ್ತಿರುವ ಜನರು

ಪ್ರತಿನಿತ್ಯ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಪ್ರಮುಖವಾಗಿ ಕೈಲಾಂಚ- ಕನಕಪುರ ಭಾಗದಿಂದ ಜಿಲ್ಲಾ ಕೇಂದ್ರಕ್ಕೆ ರೇಷ್ಮೆ, ತರಕಾರಿ ಮಾರುಕಟ್ಟೆ ಇನ್ನಿತರ ಕೆಲಸ ಕಾರ್ಯಗಳಿಗೆ ತೆರಳುವವರು, ಪ್ರಸಿದ್ಧ ಪ್ರವಾಸಿ ತಾಣ ಶ್ರೀ ರೇವಣಸಿದ್ದೇಶ್ವರ ಬೆಟ್ಟಕ್ಕೆ ಬಂದು ಹೋಗುವ ಭಕ್ತರು, ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ಸಾಗಬೇಕು. ಈ ರಸ್ತೆಯ ಅಧ್ವಾನದಿಂದ ಎಲ್ಲರೂ ಪರಿತಪಿಸುವಂತಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಎಲ್ಲೆಲ್ಲಿ ಗುಂಡಿಗಳು

ಅಚ್ಚಲು, ಅಚ್ಚಲುದೊಡ್ಡಿ, ಕೆ.ಪಿ. ದೊಡ್ಡಿ, ಫಾರಂ, ಕೈಲಾಂಚ, ಅವ್ವೇರಹಳ್ಳಿ ಸಮೀಪ ರಸ್ತೆಗಳಲ್ಲಿ ಗುಂಡಿಗಳ ಮಯವಾಗಿದೆ. ಕೆಲವೊಂದು ಜಾಗದಲ್ಲಿ ಆಳವಾದ ಗುಂಡಿಗಳು ರಸ್ತೆ ಮಧ್ಯೆಯೇ ಇವೆ. ಕೆಪಿ ದೊಡ್ಡಿ ರೇಷ್ಮೆ ಾರಂನಿಂದ ಗೌಡಯ್ಯನದೊಡ್ಡಿ ಶನಿಮಹಾತ್ಮ ದೇವಸ್ಥಾನದವರೆಗೆ ಕೆರೆ ಏರಿ ಸಮೀಪ ರಸ್ತೆ ಭಾರಿ ಪ್ರಮಾಣದಲ್ಲಿ ಹದಗೆಟ್ಟಿದೆ.

ಪ್ರಮುಖ ಸಂಪರ್ಕ ರಸ್ತೆ

ತಾಲೂಕು ಕೇಂದ್ರಗಳಾದ ಕನಕಪುರ, ಆನೇಕಲ್, ರಾಮನಗರ, ಹೊರರಾಜ್ಯ ತಮಿಳುನಾಡು, ಹೋಬಳಿ ಕೇಂದ್ರಗಳಾದ ಕೈಲಾಂಚ, ಹಾರೋಹಳ್ಳಿ, ಬಿಡದಿ, ಸಾತನೂರು, ಕೋಡಿಹಳ್ಳಿ ಪ್ರವಾಸಿ ತಾಣಗಳಾದ ರೇವಣಸಿದ್ದೇಶ್ವರ ಬೆಟ್ಟ, ಸಂಗಮ, ಮೇಕೆದಾಟು, ಚಿಕ್ಕತಿರುಪತಿ ಮುಂತಾದ ಹೆಸರಾಂತ ಸ್ಥಳಗಳಿಗೆ ಮತ್ತು ನೂರಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ರಸ್ತೆಯಾಗಿದೆ.

ಈ ಹೆದ್ದಾರಿ ಪ್ರವಾಸಿ ತಾಣಕ್ಕೆ ಸಂಪರ್ಕ ಕಲ್ಪಿಸುವುದರಿಂದ ಸಾವಿರಾರು ವಾಹನ ಸವಾರರು ನಿತ್ಯ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಅಲ್ಲಲ್ಲಿ ರಸ್ತೆ ಮಧ್ಯೆ ಗುಂಡಿ ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಕಾಣದೆ ಅಪಘಾತವಾಗುತ್ತಿದೆ. ಲೋಕೋಪಯೋಗಿ ಇಲಾಖೆ ರಸ್ತೆ ಗುಂಡಿ ಮುಚ್ಚಲು ಮೊದಲ ಆದ್ಯತೆ ನೀಡಬೇಕು.ಕೆ.ಆರ್. ಪಾಂಡುರಂಗಕೈಲಾಂಚಕನಕಪುರ- ರಾಮನಗರ ರಸ್ತೆ ನಿರ್ವಹಣೆ ಮಾಡಲಾಗುತ್ತಿದ್ದು, ಈಗಾಗಲೇ ರಸ್ತೆ ತಿರುವುಗಳಲ್ಲಿ ಬೆಳೆದ ಗಿಡ-ಗಂಟಿ ತೆರವುಗೊಳಿಸಲಾಗಿದೆ. ಒಂದೆರಡು ದಿನಗಳಲ್ಲಿಯೇ ರಸ್ತೆ ಗುಂಡಿ ಮುಚ್ಚಿ ನಿರ್ವಹಣೆ ಕಾರ್ಯವನ್ನು ಇಲಾಖೆ ಮಾಡಲಿದೆ. ಮೇಘಾಶ್ರೀಕಿರಿಯ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net