

ರಾಮನಗರ: ದನ ಮೇಯಿಸುವ ಸಂದರ್ಭದಲ್ಲಿ ವಿದ್ಯುತ್ ಶಾಕ್ಗೆ ಒಳಪಟ್ಟು ವಿದ್ಯಾರ್ಥಿ ಮತ್ತು ಹಸು ಮೃತಪಟ್ಟು ವಿದ್ಯಾರ್ಥಿ ಅಣ್ಣ ಗಾಯಗೊಂಡಿರುವ ಘಟನೆ ತಾಲೂಕಿನ ಕೈಲಾಂಚ ಹೋಬಳಿಯ ಎಂ.ಜಿ. ಪಾಳ್ಯ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.
ಸಿದ್ದರಾಜು (16) ಮೃತಪಟ್ಟ ದುರ್ದೈವಿ. ಉರಗಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾರ್ಥಿ ಓದುತ್ತಿದ್ದು ಬುಧವಾರ ಶಾಲೆಗೆ ಹೋಗದೆ ಹಸು, ಮೇಕೆಗಳನ್ನು ಮೇಯಿಸಲು ಹೋಗಿದ್ದ. ಗ್ರಾಮದ ಪಕ್ಕದಲ್ಲಿರುವ ಬೆಣ್ಣಹಳ್ಳಿ ಕ್ರಸರ್ ರಸ್ತೆಯಲ್ಲಿರುವ ಗೋಮಾಳ ಜಮೀನಿನಲ್ಲಿ ಮೇಯಿಸುವ ಸಂಧರ್ಭದಲ್ಲಿ ವಿದ್ಯುತ್ ಕಂಬದ ಬಳಿ ಹಸು ಮೇಯುವ ಸಮಯದಲ್ಲಿ ವಿದ್ಯುತ್ ತಂತಿ ತಾಗಿ ಮೃತಪಟ್ಟಿದೆ.
ವಿದ್ಯುತ್ ಪ್ರವಹಿಸಿ ಸಾವು ಸಂಭವಿಸಿರುವುದನ್ನು ಅರಿಯದ ವಿದ್ಯಾರ್ಥಿ ಬಿದ್ದ ಹಸುವನ್ನು ಯಾಕೋ ಹಸು ಮಲಗಿದೆ ಎಂದು ಮುಟ್ಟಿ ನೋಡಿದ್ದಾನೆ. ಕೂಡಲೇ ಆತನಿಗೂ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವಿದ್ಯುತ್ ಶಾಕ್ಗೆ ಬಟ್ಟೆಗಳು ಸುಟ್ಟಿವೆ. ಇದನ್ನು ದೂರದಲ್ಲಿದ್ದ ಅಣ್ಣ ರಾಯಪ್ಪ (19ಗಮನಿಸಿ ಕೂಡಲೇ ಓಡಿ ಬಂದು ಆತನನ್ನು ರಕ್ಷಿಸಲು ಮುಂದಾಗಿದ್ದಾನೆ ಆದರೆ ಆತನ ಕೈಗೆ ಶಾಕ್ ಹೊಡೆದು ದೂರ ಸರಿದು ಬಿದ್ದಿದ್ದಾನೆ.
ಕೈಗೆ ಪೆಟ್ಟಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸುದ್ದಿ ತಿಳಿದ ಕೂಡಲೇ ಸ್ಥಳೀಯರು ಬೆಸ್ಕಾಂಗೆ ಕರೆ ಮಾಡಿ ವಿದ್ಯುತ್ ಲೈನ್ ಸರಬರಾಜು ಕಡಿತಗೊಳಿಸಿದ್ದಾರೆ. ಮೂಲತಃ ಯಾದಗಿರಿ ಜಿಲ್ಲೆಯವರಾದ ಇವರು ಕಳೆದ ಇಪ್ಪತ್ತು ವರ್ಷಗಳಿಂದ ಎಂ.ಜಿ. ಪಾಳ್ಯ ಗ್ರಾಮದಲ್ಲಿ ಮೃತನ ತಂದೆ, ತಾಯಿ. ಒಬ್ಬ ಹೆಣ್ಣುಮಗಳು ವಾಸವಾಗಿದ್ದಾರೆ. ತಂದೆ ತಾಯಿ ಕೂಲಿ ಮಾಡಿ ಜೀವನ ಸಾಗಿಸಿಕೊಂಡು ಜೀವನ ನಿರ್ವಹಣೆಗಾಗಿ ಹಸು ಮತ್ತು ಮೇಕೆಗಳನ್ನು ಸಾಕುತ್ತಿದ್ದರು ಎನ್ನಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಬೆಸ್ಕಾಂ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಮೃತಪಟ್ಟ ವಿದ್ಯಾರ್ಥಿ ಕುಟುಂಬಕ್ಕೆ ಸ್ಥಳದಲ್ಲೇ ಪರಿಹಾರ ನೀಡಬೇಕು ಅಲ್ಲಿಯವರೆವಿಗೂ ಶವ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಗ್ರಾಮಾಂತರ ಎಇಇ ಕೃಷ್ಣಮೂರ್ತಿ ಮತ್ತು ಅಧಿಕಾರಿಗಳು ಸರ್ಕಾರದ ಮಾನದಂಡದಲ್ಲೇ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿ ಸ್ಥಳದಿಂದ ಮೃತ ವಿದ್ಯಾರ್ಥಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದರು.