ರಾಮನಗರ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಬಿತ್ತನೆ ಕುಂಠಿತ

24 pvg 2
Published on

ರಾಮನಗರ: ಮೇನಲ್ಲಿ ಆಗೊಮ್ಮೆ ಈಗೊಮ್ಮೆ ಬೀಳುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಏಪ್ರಿಲ್‌ನಲ್ಲಿ ಉತ್ತಮವಾಗಿ ಸುರಿದಿದ್ದ ಪೂರ್ವ ಮುಂಗಾರು ಮಳೆ ಮೇನಲ್ಲಿ ಸುರಿಯದಿದ್ದ ಕಾರಣ, ದ್ವಿದಳ ಧಾನ್ಯಗಳ ಬಿತ್ತನೆಗೆ ಹಿನ್ನಡೆಯಾಗಿದೆ.

ಮೇ 24ರ ಅಂತ್ಯಕ್ಕೆ ಜಿಲ್ಲೆಯಲ್ಲಿ ವಾಡಿಕೆಯಂತೆ 91.9 ಮಿಮೀ ಮಳೆಯಾಗಬೇಕಿತ್ತು. ಆದರೆ 77.8 ಮಿಮೀ ಮಳೆಯಾಗಿದ್ದು, ಶೇ.15ರ ಕೊರತೆ ಎದುರಿಸಬೇಕಾಗಿದೆ. ಪೂರ್ವ ಮುಂಗಾರು ಆರಂಭಗೊಳ್ಳುವ ಮಾ.1ರಿಂದ ಮೇ 24ರ ಅಂತ್ಯಕ್ಕೆ 147.7 ಮಿಮೀ ವಾಡಿಕೆ ಮಳೆಗೆ 166.9 ಮಿಮೀ ಮಳೆಯಾಗಿದ್ದು, ಈ ವೇಳೆ ಸಣ್ಣಪುಟ್ಟ ಹಳ್ಳ ಕೊಳ್ಳಗಳು ತುಂಬಿದ್ದವು. ಇದರ ಜತೆಗೆ ಮಳೆ ಸಹ 15-20 ದಿನಗಳಿಗೆ ಒಮ್ಮೆ ಬೀಳುತ್ತಿರುವುದರಿಂದ ಕೃಷಿ ಚಟುವಟಿಕೆ ಮೇಲೆ ಪರಿಣಾಮ ಬೀರಿದೆ.ರೈತ

ಬಿತ್ತನೆಗೆ ಹಿನ್ನಡೆ: ಒಂದೆಡೆ ಮಳೆ ಕೊರತೆ ಮತ್ತೊಂದೆಡೆ ಲಾಕ್‌ಡೌನ್‌ನಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಮೇ 24ರ ಅಂತ್ಯಕ್ಕೆ ಎಣ್ಣೆ ಕಾಳುಗಳು ಮತ್ತು ದ್ವಿದಳ ಧಾನ್ಯಗಳ ಬಿತ್ತನೆ ಹೆಚ್ಚಾಗಿ ಆಗಬೇಕಿತ್ತು. ಆದರೆ ಈಗಾಗಲೇ ಉಳುಮೆ ಮಾಡಿಕೊಂಡಿದ್ದರೂ ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ 11500 ಹೆಕ್ಟೇರ್‌ನಲ್ಲಿ ತೊಗರಿ, ಅಲಸಂದೆ, ಅವರೆ ಬಿತ್ತನೆ ಮಾಡಬೇಕಿತ್ತು. ಆದರೆ ಮಾಹಿತಿ ಪ್ರಕಾರ ಮೇ 24ರ ಅಂತ್ಯಕ್ಕೆ ಇದರ ಪ್ರಮಾಣ 2500 ಹೆಕ್ಟೇರ್ ದಾಟಲಿಲ್ಲ. ಅದೇ ರೀತಿ, ನೆಲಗಡಲೆ, ಎಳ್ಳು ಬಿತ್ತನೆಯೂ ನಿರೀಕ್ಷಿತ ಗುರಿ ಮುಟ್ಟಲಿಲ್ಲ. ಜಿಲ್ಲೆಯಲ್ಲಿ ಒಟ್ಟು 8200 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಬೇಕಿತ್ತಾದರೂ ಈವರೆಗೂ 1300 ಹೆಕ್ಟೇರ್ ಮಾತ್ರ ಎನ್ನುವುದು ಕೃಷಿ ಇಲಾಖೆ ಮಾಹಿತಿ.

ಮಳೆ ನಿರೀಕ್ಷೆಯಲ್ಲಿ: ಕೃಷಿ ಚಟುವಟಿಕೆಗೆ ಪೂರಕವಾಗುವಂತೆ ಮಳೆ ಸುರಿಯುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಬಿಸಿಲ ಝಳ ಹೆಚ್ಚಾಗಿದ್ದು, ಉತ್ತಮ ಮಳೆಯಾದರೆ ಕೃಷಿ ಚಟುವಟಿಕೆ ಲಯಕ್ಕೆ ಬರುತ್ತದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ. ಮೇ ಅಂತ್ಯದ ಜತೆಗೆ, ಜೂನ್‌ನಲ್ಲಿ ಮುಂಗಾರು ಆರಂಭವಾಗುವ ಹಿನ್ನೆಲೆಯಲ್ಲಿ ಜೂನ್ ಮಧ್ಯಭಾಗದಲ್ಲಿ ರಾಗಿ ಬಿತ್ತನೆ ಆರಂಭವಾಗುತ್ತದೆ ಎನ್ನುವುದು ಕೃಷಿ ಇಲಾಖೆ ಅಧಿಕಾರಿಗಳ ಮಾಹಿತಿ.

ಗೊಬ್ಬರದ ಕೊರತೆ ಇಲ್ಲ: ಜಿಲ್ಲೆಯಲ್ಲಿ ಕೃಷಿಗೆ ಬೇಕಾದ ಅಗತ್ಯ ಗೊಬ್ಬರ ದಾಸ್ತಾನು ಇದೆ. ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಒಟ್ಟು 315 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನಿದ್ದು, ಈಗಾಗಲೇ 146 ಕ್ವಿಂಟಾಲ್ ವಿತರಣೆ ಮಾಡಲಾಗಿದೆ ಎನ್ನುವುದು ಅಧಿಕಾರಿಗಳ ಮಾಹಿತಿ.

ಈ ಬಾರಿ ಮಳೆ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಆಗಿಲ್ಲ. ಕನಕಪುರದಲ್ಲಿ ಎಳ್ಳು ಮತ್ತು ಮಾಗಡಿ ತಾಲೂಕಿನಲ್ಲಿ ದ್ವಿದಳ ಧಾನ್ಯಗಳ ಬಿತ್ತನೆ ಹಿನ್ನಡೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆ ಉತ್ತಮವಾಗಿ ಬರುವ ನಿರೀಕ್ಷೆ ಇದೆ. ಕೆ.ಎಚ್.ರವಿ ಜಂಟಿ ನಿರ್ದೇಶಕ, ಕೃಷಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net