

ರಾಮನಗರ: ಜಿಲ್ಲೆಯಲ್ಲಿ ಕರೊನಾ ಅಟ್ಟಹಾಸ ಮುಂದುವರಿದಿದ್ದು ಕೇವಲ ಒಂದೇ ತಿಂಗಳಲ್ಲಿ ಶತಕ ಸಾಧನೆ ಮಾಡಿದೆ. ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 20 ಪ್ರಕರಣಗಳು ದೃಢಪಟ್ಟಿದ್ದು, ಇದರೊಂದಿಗೆ ದಿನದಿಂದ ದಿನಕ್ಕೆ ಆತಂಕವನ್ನು ಹೆಚ್ಚಿಸಿದೆ.
ಮಂಗಳವಾರ ಬಂದ ಲ್ಯಾಬ್‌ಗಳ ವರದಿ ಪ್ರಕಾರ ಜಿಲ್ಲೆಯ ಮಾಗಡಿಯಲ್ಲಿ ಅತಿ ಹೆಚ್ಚು 12 ಪ್ರಕರಣಗಳು ದಾಖಲಾಗಿದ್ದು, ರಾಮನಗರದಲ್ಲಿ 5, ಚನ್ನಪಟ್ಟಣದಲ್ಲಿ ಒಂದು ಪ್ರಕರಣ ಕರೊನಾ ಪಾಸಿಟಿವ್ ಆಗಿದೆ.
ಕನಕಪುರದಲ್ಲಿ ಇತ್ತೀಚೆಗೆ ಮೃತಪಟ್ಟದ್ದ ವ್ಯಕ್ತಿಗೂ ಕರೊನಾ ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಕನಕಪುರದಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 112ಕ್ಕೆ ಏರಿಕೆ ಆಗಿದೆ. 6 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮಂಗಳವಾರ ಪತ್ತೆಯಾಗಿರುವ ಎಲ್ಲ ಪ್ರಕರಣಗಳು ಸಹ ಸೋಂಕಿತರ ಸಂಪರ್ಕದಲ್ಲಿ ಇದ್ದವರೇ ಆಗಿರುವುದು ವಿಶೇಷ. ಕೋವಿಡ್ ಆಸ್ಪತ್ರೆಗೆ ಸರಿಯಾಗಿ ಬರುತ್ತಿಲ್ಲ ಎಂಬ ಕಾರಣಕ್ಕೆ ಕಳೆದ ವಾರ ಮಾಗಡಿಯ ಸ್ಟ್ಾನರ್ಸ್ ಒಬ್ಬರನ್ನು ಅಮಾನತು ಮಾಡಲಾಗಿದೆ.
ಮತ್ತೊಂದು ಬಲಿ..!: ಕರೊನಾದಿಂದಾಗಿ ಕನಕಪುರದಲ್ಲಿ ಮತ್ತೊಬ್ಬರು ಮೃತ ಪಟ್ಟಿದ್ದು, ಕಲ್ಲಹಳ್ಳಿಯ 45 ವರ್ಷದ ವ್ಯಕ್ತಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಕಳೆದೊಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮೃತಪಟ್ಟ ಬಳಿಕ ಈತನ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ, ಈಗ ಕರೊನಾ ಪಾಸಿಟಿವ್ ಧೃಡಪಟ್ಟಿದೆ. ಈತನ ಅಂತ್ಯಕ್ರಿಯೆಯನ್ನು ಬೆಂಗಳೂರಿನಲ್ಲಿಯೇ ನಡೆಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆ ಆಗಿದೆ.
ಕುಂಬಳಗೂಡು ಠಾಣೆ ಪೇದೆಗೆ ಸೋಂಕು: 27 ವರ್ಷದ ಕಾನ್‌ಸ್ಟೆಟೇಬಲ್‌ಗೆ ಕರೊನಾ ಸೋಂಕು ದೃಢ ಪಟ್ಟಿದೆ. ನೆಲಮಂಗಲದ ನಿವಾಸಿಯಾಗಿರುವ ಈತ, ಏಳು ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇದ್ದು ಸೋಮವಾರ ತಾನೇ ಕರ್ತವ್ಯಕ್ಕೆ ಹಾಜರಾಗಿದ್ದ. ಈತನಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಬುಧವಾರದಿಂದ ಎರಡು ದಿನಗಳ ಕಾಲ ಠಾಣೆ ಸೀಲ್ ಡೌನ್ ಆಗಲಿದೆ. ಠಾಣೆಯ ಇನ್‌ಸ್ಪೆಕ್ಟರ್ ಸೇರಿ ಪೇದೆಯ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ.
ಸೋಂಕಿತ ಪೇದೆ ಒಂದು ದಿನ ಠಾಣೆಗೆ ಬಂದ ಹಿನ್ನೆಲೆಯಲ್ಲಿ ಕುಂಬಳಗೋಡು ಪೊಲೀಸ್ ಠಾಣೆಯನ್ನು 2 ದಿನಗಳ ಕಾಲ ಸೀಲ್‌ಡೌನ್ ಮಾಡಲಾಗುವುದು. ಇಡೀ ಠಾಣೆಯನ್ನು ಸ್ಯಾನಿಟೈಸ್ ಮಾಡಿದ ಬಳಿಕ ತೆರೆಯಲಾಗುವುದು. ಡಾ.ಅನೂಪ್ ಎ.ಶೆಟ್ಟಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ