ಕ್ಷೇತ್ರದ ಜನರ ಕಿವಿ ಮೇಲೆ ಎಚ್ಡಿಕೆ ಹೂ ಇಡುತ್ತಿದ್ದಾರೆ ಕಾಂಗ್ರೆಸ್ ಆರೋಪ

28-02-rama-cong
Published on

ರಾಮನಗರ: ಸೂರಿಲ್ಲದವರಿಗೆ ಮನೆ ಕಟ್ಟಿಸಿ ಕೊಡುತ್ತೇವೆ ಎಂದು  ಕಳೆದ 17 ವರ್ಷಗಳಿಂದಲೂ ಎಚ್.ಡಿ.ಕುಮಾರಸ್ವಾಮಿ ಕ್ಷೇತ್ರದ ಜನರ ಕಿವಿಗೆ ಹೂ ಇಡುತ್ತಲೇ ಬಂದಿದ್ದಾರೆ ಎಂದು ನಗರಸಭೆ ಸದಸ್ಯ ಕೆ.ಶೇಷಾದ್ರಿ ಹೇಳಿದರು.

ತಾಲೂಕು ದೊಡ್ಡಮಣ್ಣುಗುಡ್ಡೆಯಲ್ಲಿ ನಿರ್ಮಾಣಗೊಂಡು ಶಿಥಿಲಾವಸ್ತೆಗೆ ತಲುಪಿರುವ ಮನೆಗಳ ಬಳಿಯೆ "ಇದೇನ್ ಕರ್ಮ " ಅಭಿಯಾನದ ಸುದ್ದಿಗೋಷ್ಠಿಯಲ್ಲಿ ಕಿವಿ ಮೇಲೆ ಹೂ ಇಟ್ಟುಕೊಂಡೇ ಮಾತನಾಡಿದರು.

2004ರಲ್ಲಿ ಎಚ್.ಡಿ.ಕುಮಾರಸ್ವಾಮಿ ಶಾಸಕರಾಗಿ ಆಯ್ಕೆಗೊಂಡು ನಂತರ ಮುಖ್ಯಮಂತ್ರಿಯೂ ಆದರೂ. ಈ ವೇಳೆ ಮನೆ ಇಲ್ಲದ ನಗರ ವಾಸಿಗಳಿಗೆ ಸೂರು ಕೊಡುವುದಾಗಿ ಹೇಳಿ 1800 ಮಂದಿಯಿಂದ ತಲಾ 5100ರೂ.ಗಳನ್ನು ಕಟ್ಟಿಸಿಕೊಂಡರು. ಕೆಲವರು ತಮ್ಮ ತಾಳಿಯನ್ನು ಅಡವಿಟ್ಟು ಹಣ ಕಟ್ಟಿದರು. ಆದರೆ 17 ವರ್ಷಗಳಾದರೂ ಮನೆ ಮಾತ್ರ ಸಿಗಲೇ ಇಲ್ಲ. ಕಳೆದ ಚುನಾವಣೆಯಲ್ಲಿ ಲಾಟರಿ ಎತ್ತುವ ಮೂಲಕ ಮನೆ  ಕೊಡುತ್ತೇನೆ ಎಂದರು, ಅದೂ ಸಹ ಆಗಲಿಲ್ಲ. ಕೋಟ್ಯಂತ ರೂ ಖರ್ಚು ಮಾಡಿದ 240 ಮನೆಗಳು ಈಗ ಪಾಳು ಬಿದ್ದಿದ್ದು, ಅನೈತಿಕ ಚಟುವಟಿಕೆ ತಾಣವಾಗಿದೆ. ಈಗ ಇವುಗಳನ್ನು ದುರಸ್ಥಿ ಮಾಡಿ ಕೊಡುತ್ತೇನೆ ಎಂದರೂ ಈಗಲೂ ಕೋಟ್ಯಂತರ ರೂ ಖರ್ಚು ಮಾಡಬೇಕು. ಕುಮಾರಸ್ವಾಮಿ ಮುಖ್ಯಮಂತ್ರಿ ಆದರೂ ಹಣ ಕಟ್ಟಿದವರಿಗೆ ಮನೆ ಸಿಗಲೇ ಇಲ್ಲ.

ಅಂದು ಕಟ್ಟಿದ ಒಟ್ಟು ಹಣದ ಮೊತ್ತ ಸುಮಾರು 90 ಲಕ್ಷ ರೂ. ಈಗ ಕೋಟ್ಯಂತರ ರೂ ಆಗುತ್ತದೆ.  ಅಂದು ಮನೆಗಾಗಿ ಹಣ ಕೊಡುವ ಬದಲು, ಇನ್ನೈದು ಸಾವಿರ ರೂ ಹಾಕಿದ್ದರೆ ಒಂದು ನಿವೇಶನವನ್ನೇ ಖರೀದಿ ಮಾಡಬಹುದಿತ್ತು. ತಾಲೂಕಿನ ತಿಬ್ಬೇಗೌಡನದೊಡ್ಡಿ ಬಳಿ ಸುಮಾರು 50 ಎಕರೆ ಜಮೀನನ್ನು ಸಂಸದ ಡಿ.ಕೆ.ಸುರೇಶ್ ಗುರ್ತಿಸಿ ಅಲ್ಲಿನ ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಲು ಮುಂದಾಗಿದ್ದರು. ಈ ವೇಳೆ ಆಶ್ರಯ ಸಮಿತಿ ಮುಖ್ಯಸ್ಥರಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಸಭೆಗೆ ಬಂದು ಚರ್ಚೆ ನಡೆಸಿದ್ದರೆ, ಬಡವರಿಗೆ ಮನೆ ಸಿಗುತ್ತಿತ್ತು. ಆದರೆ ಕಾಂಗ್ರೆಸ್ ಪಕ್ಷಕ್ಕೆ ಕ್ರೆಡಿಟ್ ಹೋಗುತ್ತದೆ ಎಂದು ಸಭೆಗೂ ಬರಲಿಲ್ಲ. ಆದರೂ ಮನೆ ಕೊಡುತ್ತೇನೆ ಎಂದು ಗಿಮಿಕ್‌ಗಳನ್ನು ಮಾಡಿಕೊಂಡು ಬಡವರ ಭಾವನೆಗಳ ಜೊತೆ ಆಟ ಆಡುತ್ತಿದ್ದಾರೆ ಎಂದು ಶೇಷಾದ್ರಿ ದೂರಿದರು.

ಎಚ್‌ಡಿಕೆ ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಅವರದ್ದು ಬರೀ ಮೊಸಳೇ ಕಣ್ಣೀರು, ರಾಜ್ಯದ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತೇನೆ ಎನ್ನುವ ಅವರು ಮೊದಲು ತಮ್ಮ ಕ್ಷೇತ್ರದ ಸಮಸ್ಯೆಗೆ ಮುಕ್ತಿ ನೀಡಲಿ ಎಂದು ಸವಾಲು ಹಾಕಿದರು.

ಹಾಸನದಲ್ಲಿ ಸಮರ್ಥ ಕಾರ್ಯಕರ್ತನನ್ನು ಕಣಕ್ಕೆ ಇಳಿಸುತ್ತೇನೆ ಎನ್ನುವ ಎಚ್‌ಡಿಕೆ, ರಾಮನಗರದಲ್ಲಿ ಸಮರ್ಥರಿಲ್ಲ ಎನ್ನುವ ಮೂಲಕ ರಾಮನಗರ ಜೆಡಿಎಸ್ ಕಾರ್ಯಕರ್ತರನ್ನು ಅಪಮಾನಿಸಿದ್ದಾರೆ. ಅಷ್ಟೇ ಅಲ್ಲದೆ ಯಾವುದೇ ಸ್ಥಳೀಯ ನಾಯಕರನ್ನು ಬೆಳಸುವ ಮನಸ್ಸು ಅವರಿಗೆ ಇಲ್ಲ ಎಂದು ಹೇಳುವ ಜೊತೆಗೆ ಕ್ಷೇತ್ರದವರನ್ನು ಶಾಶ್ವತ ಗುಲಾಮರನ್ನಾಗಿ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಹಿಡಿದಿರುವ ಶಾಪದ ವಿಮೋಚನೆಗೆ ಸಕಾಲವಾಗಿದ್ದು, ರಾಜ್ಯದಲ್ಲಿಯೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುವುದರಿಂದ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಬಿ.ಕೆ.ಪವಿತ್ರ, ಮಾಜಿ ಅಧ್ಯಕ್ಷರಾದ ಪಾರ್ವತಮ್ಮ, ಚೇತನ್‌ಕುಮಾರ್ ಮುಂತಾದವರು ಇದ್ದರು.

ಹೂ ಮುಡಿದ ಮುಖಂಡರು

ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಎಲ್ಲಾ ಮುಖಂಡರು ಕಿವಿಗೆ ಸೇವಂತಿ ಮತ್ತು ಚಂಡು ಹೂವನ್ನು ಮುಡಿಯುವ ಮೂಲಕ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದು ವಿಶೇಷ. ರಾಜ್ಯದಲ್ಲಿ ಬಿಜೆಪಿ ಜನತೆಗೆ ಹೂ ಮುಡಿಸುತ್ತಿದೆ. ರಾಮನಗರದಲ್ಲಿ ಎಚ್.ಡಿ. ಕುಮಾರಸ್ವಾಮಿ ಹೂ ಮುಡಿಸುತ್ತಿದ್ದಾರೆ. ಈ ಹಿನ್ನೆಯಲ್ಲಿ ಕಿವಿ ಮೇಲೆ ಹೂ ಇಟ್ಟುಕೊಂಡು ಸುದ್ದಿಗೋಷ್ಠಿ ಮಾಡುತ್ತಿದ್ದೇವೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net