

ಗಂಗಾಧರ್ ಬೈರಾಪಟ್ಟಣ ರಾಮನಗರ
ಹಲವಾರು ವರ್ಷಗಳಿಂದಲೂ ನನೆಗುದಿಗೆ ಬಿದ್ದಿದ್ದ ನೂತನ ಜಿಲ್ಲಾಸ್ಪತ್ರೆ ಮಾ.2ರಂದು ಉದ್ಘಾಟನೆಗೊಳ್ಳಲಿದೆ.
2007ರಲ್ಲಿ ಬಿಜೆಪಿ - ಜೆಡಿಎಸ್ ಸಮ್ಮಿಶ್ರ ಸರ್ಕಾರದ ವೇಳೆ ಘೋಷಣೆಯಾಗಿದ್ದ ಹೈಟೆಕ್ ಆಸ್ಪತ್ರೆ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿತ್ತು. ಇದಾದ ನಂತರ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಭೂಮಿ ಹಸ್ತಾಂತರ ಅಗತ್ಯ ಅನುದಾನ ಬಿಡುಗಡೆ ಮಾಡಿಸಿಕೊಟ್ಟ ಪರಿಣಾಮ ಯೋಜನೆ ಜಾರಿಗೆ ಬಂದಿತ್ತು. ಇದಾದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಆಸ್ಪತ್ರೆ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನದ ಜತೆಗೆ ವೇಗ ನೀಡಿದ ಪರಿಣಾಮ ಮಾ.2ರಂದು ಆಸ್ಪತ್ರೆ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ.
ರಾಮನಗರ ಜಿಲ್ಲಾ ಕೇಂದ್ರವಾಗಿ 15 ವರ್ಷ ಕಳೆದಿದೆ. ಆದರೆ ಈಗಲೂ ಕಿಷ್ಕಿಂದೆಯಂತಹ ಜಾಗದಲ್ಲೇ ಜಿಲ್ಲಾ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ. 100 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆ ಅವ್ಯವಸ್ಥೆಗಳ ಆಗರವಾಗಿದ್ದು, ಮೂಲಸೌಕರ್ಯಗಳ ಕೊರತೆ ಇದೆ. ಹೀಗಾಗಿ ರೋಗಿಗಳಿಗೆ ಗುಣಮಟ್ಟದ ಸೇವೆ ನೀಡುವುದು ಆರೋಗ್ಯ ಇಲಾಖೆಗೂ ಸವಾಲಾಗಿ ಪರಿಣಮಿಸಿತ್ತು. ಹೊಸ ಜಿಲ್ಲಾಸ್ಪತ್ರೆ ನಿರ್ಮಾಣದ ಉದ್ಘಾಟನೆ ವಿಳಂಬವಾಗುತ್ತಲೇ ಬಂದಿತ್ತು. ಈಗ ಅಂತಿಮವಾಗಿ ಉದ್ಘಾಟನೆ ಭಾಗ್ಯ ಕೂಡಿ ಬಂದಿದೆ.
ಏನೇನಿದೆ ಸೌಲಭ್ಯ?
ನೂತನ ಜಿಲ್ಲಾಸ್ಪತ್ರೆಯಲ್ಲಿ 650 ಹಾಸಿಗೆ ಸಾಮರ್ಥ್ಯದವರೆಗೂ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿದೆ. ಹೊಸ ಆಸ್ಪತ್ರೆಯ ಪಕ್ಕದಲ್ಲಿಯೇ ಇರುವ ಕಂದಾಯ ಭವನವನ್ನು ಸಹ ಆಸ್ಪತ್ರೆ ವಶಕ್ಕೆ ನೀಡಲಾಗುತ್ತಿದ್ದು, ಇಲ್ಲಿನ ಒಟ್ಟಾರೆ ಹಾಸಿಗೆ ಸಾಮರ್ಥ್ಯವನ್ನು 650ಕ್ಕೆ ಏರಿಸಲಾಗಿದೆ. ಮೊದಲ ಹಂತದಲ್ಲಿ 374 ಹಾಸಿಗೆ ಸಾಮರ್ಥ್ಯದೊಂದಿಗೆ ಹೊಸ ಆಸ್ಪತ್ರೆಯು ಕಾರ್ಯ ನಿರ್ವಹಿಸಲಿದೆ. ಇದರಲ್ಲಿ 120 ಐಸಿಯು ಬೆಡ್‌ಗಳಾಗಿದ್ದು, 4 ಮಾಡುಲರ್ ಓಟಿ, ಸಾಮಾನ್ಯ ಓಟಿ, ಐಪಿಡಿ ಸೇರಿ ವಿವಿಧ ವಿಭಾಗಗಳಿವೆ. ಪ್ರತಿ ನಿಮಿಷಕ್ಕೆ 1 ಸಾವಿರ ಲೀಟರ್ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕವನ್ನೂ ಸ್ಥಾಪಿಸಲಾಗಿದೆ. ಜತೆಗೆ ಟೊಯೊಟಾ ಕಂಪನಿ ಸಿ.ಟಿ. ಸ್ಕ್ಯಾನ್ ಯಂತ್ರ ನೀಡಿದ್ದು, ಅದನ್ನೂ ರೋಗಿಗಳ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ. ಐಸಿಯು, ಎನ್‌ಐಸಿಯು ಜತೆಗೆ ಮಕ್ಕಳಿಗೆಂದೇ ವಿಶೇಷ ಐಸಿಯು ಸಹ ಇಲ್ಲಿರಲಿದೆ. ಪೂರ್ಣ ಪ್ರಮಾಣದ ರಕ್ತನಿಧಿ ಘಟಕ, ಎನ್‌ಆರ್‌ಸಿ, ಪ್ರಯೋಗಾಲಯಗಳು ಕಾರ್ಯ ನಿರ್ವಹಿಸಲಿವೆ. ಇದರಿಂದಾಗಿ ಗ್ರಾಮೀಣ ಜನರು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಇಲ್ಲವೇ ಮಂಡ್ಯ ನಗರಗಳಿಗೆ ಹೋಗುವುದು ತಪ್ಪಲಿದೆ.
--
ಆಸ್ಪತ್ರೆಯ ಕಾಮಗಾರಿ ಪೂರ್ಣಗೊಂಡಿದ್ದು, ಮಾ.2ಕ್ಕೆ ಉದ್ಘಾಟನೆ ನಿಗದಿಯಾಗಿದೆ. ನಂತರ ಸಾರ್ವಜನಿಕ ಸೇವೆಗೂ ಮುಕ್ತವಾಗಲಿದೆ.
ಡಾ.ಜಿ.ಎಲ್.ಪದ್ಮ ಜಿಲ್ಲಾ ಶಸ್ತ್ರ ಚಿಕಿತ್ಸಕಿ, ರಾಮನಗರ