

ಚನ್ನಪಟ್ಟಣ: ಸಾವು ಅನ್ನೋದೇ ವಿಚಿತ್ರ. ಅದು ಯಾವ ಕ್ಷಣ, ಯಾವ ರೂಪದಲ್ಲಿ ಬರಲಿದೆ ಎಂದು ಹೇಳೋಕೆ ಸಾಧ್ಯಾನೇ ಇಲ್ಲ. ಹೆದ್ದಾರಿಯಲ್ಲಿ ಸರಿಯಾಗಿ ನಡೆದುಕೊಂಡು ಹೋಗುತ್ತಿರುವಾಗಲೇ ಅಪರಿಚಿತ ವಾಹನ ಬಂದು ಬಡಿದು ಸಾವನ್ನಿಪಿದ ಉದಾಹರಣೆಗಳು ಸಾಕಷ್ಟಿವೆ.
ಅದೇ ರೀತಿ, ಆ ರೈತ ಅಂದುಕೊಂಡಿರಲೇ ಇಲ್ಲ, ಜಮೀನಿನಲ್ಲಿರುವ ತೆಂಗಿನ ಮರ ತನ್ನಸಾವಿಗೆ ಕಾರಣ ಆಗುತ್ತೆ ಅಂತಾ. ಇಂತಹ ಘಟನೆಯೊಂದು ನಡೆದೇ ಹೋಗಿದೆ.
ತನ್ನ ಪಾಡಿಗೆ ನಡೆದು ಹೋಗುತ್ತಿದ್ದ ರೈತನನ್ನು ಮರದ ರೂಪದಲ್ಲಿ ಬಂದ ಜವರಾಯ ಬಲಿಪಡೆದಿರುವ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.
ತನ್ನ ಎಂದಿನ ದಿನಚರಿಯಂತೆ ಜಮೀನಿನ ಕಡೆ ಒಂದು ಸುತ್ತು ಹಾಕಿಕೊಂಡು ಬರಲು ತೆರಳುತ್ತಿದ್ದ ಚನ್ನಪಟ್ಟಣ ತಾಲೂಕಿನ ಗೀಜಗನದಾಸನದೊಡ್ಡಿ ಗ್ರಾಮದ ಪುಟ್ಟಸ್ವಾಮಿಗೌಡ (55) ಎಂಬುವವರ ಮೇಲೆ ತೆಂಗಿನಮರವೊಂದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಭಾನುವಾರ ತಮ್ಮ ಜಮೀನಿಗೆ ಹೋಗಲು ಕಾಲುದಾರಿಯಲ್ಲಿ ತೆರಳುತ್ತಿದ್ದ ಇವರ ಮೇಲೆ ತೆಂಗಿನ ಬೃಹತ್ ಮರವನ್ನು ದಿಢೀರನೆ ಬಿದ್ದಿದೆ. ತೆಂಗಿನ ಮರ ಬಿದ್ದ ರಭಸಕ್ಕೆ ಈತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.