ರಾಮನಗರ ಗ್ರಾಪಂ ಮಟ್ಟದಲ್ಲಿ ಶಿಶುಪಾಲನಾ ಕೇಂದ್ರ ದುಡಿಯುವ ಮಹಿಳೆಯರಿಗೆ ಅನುಕೂಲ

working women file shot
Published on

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಗ್ರಾಮೀಣ ಮಹಿಳೆಯರು ಮತ್ತು ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ತೊಡಗಿಸಿಕೊಳ್ಳುವ ಮಹಿಳೆಯರ ಸಣ್ಣ ಮಕ್ಕಳಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸಲು ಸಿದ್ಧತೆ ನಡೆಯುತ್ತಿದೆ.

ರಾಮನಗರ ತಾಲೂಕು ಪಂಚಾಯಿತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ತಾಲೂಕಿನ 20 ಗ್ರಾಮ ಪಂಚಾಯಿತಿಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸಲು ಮುಂದಾಗಿದ್ದು, ಪ್ರಾಯೋಗಿಕವಾಗಿ 4 ಗ್ರಾಮ ಪಂಚಾಯಿತಿಗಳಲ್ಲಿ ಆರಂಭಿಸಲು ಸಿದ್ಧತೆ ಭರದಿಂದ ಸಾಗಿದೆ.

ಏನಿದು ಶಿಶುಪಾಲನಾ ಕೆಂದ್ರ?

ಗ್ರಾಮೀಣ ಪ್ರದೇಶದಲ್ಲಿ ದುಡಿಮೆಗೆ ಮತ್ತು ನರೇಗಾ ಕಾಮಗಾರಿಯಲ್ಲಿ ಮಹಿಳೆಯರು ತೊಡಗುತ್ತಾರೆ. ಇದರಿಂದಾಗಿ ಚಿಕ್ಕಮಕ್ಕಳನ್ನು ಪಾಲನೆಯಿಂದ ದೂರ ಉಳಿಯಬೇಕಾಗುತ್ತದೆ. ಹಾಗಾಗಿ ಚಿಕ್ಕ ಮಕ್ಕಳ ಪಾಲನೆ ಪೋಷಣೆ ದೃಷ್ಟಿಯಿಂದ ಚಿಕ್ಕ ಮಕ್ಕಳನ್ನು ಶಿಶುಪಾಲನಾ ಕೇಂದ್ರದಲ್ಲಿ ಬಿಟ್ಟು ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.

ಸ್ಥಳಿಯ ಗ್ರಾಪಂ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಶಿಶುಪಾಲನಾ ಕೆಂದ್ರದಲ್ಲಿ ಬೆಳಗಿನಿಂದ ಸಂಜೆವರೆಗೂ ಮಕ್ಕಳ ಜವಾಬ್ದಾರಿ ನೋಡಿಕೊಳ್ಳಲಾಗುವುದು. ಇದು ಗ್ರಾಮೀಣ ಮಹಿಳೆಯರಿಗೆ ವರದಾನವಾಗಿದ್ದು, ಸರ್ಕಾರದ ಈ ಮಹತ್ತರ ಯೋಜನೆ ಕಾರ್ಯಗತಗೊಳಿಸಲು ರಾಮನಗರ ತಾಲೂಕು ಪಂಚಾಯಿತಿ ಶ್ರಮಿಸುತ್ತಿದ್ದು, ಜಾಗ ಗುರುತಿಸಿ ಕೇಂದ್ರಗಳ ಪ್ರಾರಂಭಕ್ಕೆ ಚಾಲನೆ ನೀಡಲು ಮುಂದಾಗಿದೆ.

ಎಲ್ಲೆಲ್ಲಿ?

ಮಾಯಗಾನಹಳ್ಳಿ ಗ್ರಾಪಂನ ಗಂಗರಾಜನಹಳ್ಳಿ, ಮಂಚನಾಯಕನಹಳ್ಳಿ ಗ್ರಾಪಂನ ಶ್ಯಾನುಮಂಗಲ, ಬನ್ನಿಕುಪ್ಪೆ (ಬಿ) ಗ್ರಾಪಂನ ಸಿದ್ದಾಭೋವಿಪಾಳ್ಯ, ಹುಣಸನಹಳ್ಳಿ ಗ್ರಾಪಂನ ಕೆಂಪೇಗೌಡನದೊಡ್ಡಿ. ಈ ಗ್ರಾಮಗಳನ್ನು ಮೊದಲ ಹಂತದಲ್ಲಿ ಶಿಶುಪಾಲನಾ ಕೇಂದ್ರಗಳು ಆರಂಭಿಸಲು ಗುರುತಿಸಲಾಗಿದೆ.

ಏನೇನು ಸೌಲಭ್ಯ?

ಶಿಶುಪಾಲನಾ ಕೇಂದ್ರದಲ್ಲಿ 6 ತಿಂಗಳ ಮಕ್ಕಳಿಂದ 6 ವರ್ಷದ ಮಕ್ಕಳವರೆಗೆ ಪಾಲನೆ ಪೋಷಣೆ ಮಾಡಲಾಗುತ್ತದೆ. ಪ್ರತಿ ಕೇಂದ್ರದಲ್ಲಿ 25 ಮಕ್ಕಳು ಇರಲಿದ್ದಾರೆ. ತಿಂಗಳಲ್ಲಿ 24 ದಿನ ಕೇಂದ್ರ ಕಾರ್ಯನಿರ್ವಹಿಸಲಿದೆ. ಭಾನುವಾರ ರಜೆ. ಪ್ರತಿ ಕೇಂದ್ರದಲ್ಲಿ ಒಬ್ಬ ಶಿಕ್ಷಕಿ ಮತ್ತು ಇಬ್ಬರು ಸಹಾಯಕಿಯರು ಇರಲಿದ್ದಾರೆ. ಪ್ರತಿದಿನ ಬೆಳಗ್ಗೆ 6ರಿಂದ ರಾತ್ರಿ 8 ಗಂಟೆವರೆಗೆ ಕೇಂದ್ರ ನಡೆಯಲಿದೆ. ಮಕ್ಕಳಿಗೆ ಆಟವಾಡಲು ಪರಿಕರಗಳು, ಹಾಲು, ಮೊಟ್ಟೆ, ಮಧ್ಯಾಹ್ನದ ಊಟ ನೀಡಲಾಗುತ್ತದೆ. ಜತೆಗೆ ಪ್ರತಿದಿನ ಪೌಷ್ಟಿಕ ಆಹಾರ ಕೊಡಲಾಗುತ್ತದೆ. ವಿಶಾಲ ಕೊಠಡಿ, ಶುದ್ಧ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಕ್ಕಳ ಆಟಕ್ಕೆ ಸ್ಥಳಾವಕಾಶ ಇರಲಿದೆ.

ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಶಿಶುಪಾಲನಾ ಕೇಂದ್ರ ತೆರೆಯಲು ಸರ್ಕಾರದ ಜಿಪಂ ಹಿರಿಯ ಅಧಿಕಾರಿಗಳ ನಿರ್ದೇಶನದ ಮೇಲೆ ತಯಾರಿ ನಡೆಸಲಾಗಿದೆ. ಪ್ರಾರಂಭಿಕವಾಗಿ 4 ಗ್ರಾಪಂಗಳಲ್ಲಿ ಕೇಂದ್ರ ತೆರೆಯಲು ಜಾಗ ಗುರುತಿಸಲಾಗಿದೆ. ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಶ್ರೀವೇ 4 ಕೇಂದ್ರಗಳಿಗೆ ಚಾಲನೆ ನೀಡಲಾಗುವುದು.ಟಿ. ಪ್ರದಿಪ್​, ಇಒ ರಾಮನಗರ ತಾಪಂ
ಶಿಶುಪಾಲನಾ ಕೇಂದ್ರ ಗ್ರಾಮೀಣ ಮಹಿಳೆಯರಿಗೆ ಅಗತ್ಯವಾಗಿದೆ. ಮಹಿಳೆಯರು ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಅನುಕೂಲ. ಆದಷ್ಟು ಬೇಗ ಎಲ್ಲ ಗ್ರಾಪಂಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸಲು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಬೇಕು.ಮಂಜುಳಾ, ಗ್ರಾಪಂ ಸದಸ್ಯೆ ಕೆಂಪೇಗೌಡನದೊಡ್ಡಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net