

ಚನ್ನಪಟ್ಟಣ
ಮಾನಸಿಕ ಅಸ್ವಸ್ಥ ಮಗಳೊಬ್ಬಳು ತನ್ನ ತಂದೆಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಚನ್ನಪಟ್ಟಣ ತಾಲೂಕಿನ ಮಾಕಳಿ ಗ್ರಾಪಂ ವ್ಯಾಪ್ತಿಯ ಹುಚ್ಚಿರಯ್ಯದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಹುಚ್ಚಿರಯ್ಯ (68) ಮಗಳಿಂದಲೇ ಭೀಕರವಾಗಿ ಹತ್ಯೆಗೀಡಾಗಿರುವ ವ್ಯಕ್ತಿ. ಈತನನ್ನು ಈಕೆಯ ಮಗಳಾದ ಪುಷ್ಪಲತಾ ಉರುಫ್ ಚಿಕ್ಕತಾಯಮ್ಮ ಎಂಬಾಕೆ ಗುದ್ದಲಿಯಿಂದ ಹೊಡೆದು ಸಾಯಿಸಿದ್ದಾಳೆ ಎನ್ನಲಾಗಿದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಾಕಳಿ ಬಳಿಯ ನಾಯಿದೊಳ್ಳೆ ಹಾಗೂ ರಾಮನಾಥಪುರ ಗ್ರಾಮಗಳ ಮಧ್ಯೆ ಒಂಟಿಮನೆಯಲ್ಲಿ ಹುಚ್ಚಿರಯ್ಯ ಎಂಬುವವರು ತನ್ನ ಮಾನಸಿಕ ಅಸ್ವಸ್ಥ ಮಗಳೊಂದಿಗೆ ವಾಸವಿದ್ದರು. ತಂದೆಯನ್ನು ಈ ರೀತಿಯಾಗಿ ಕೊಚ್ಚಿಕೊಂದಿರುವ ಪುಷ್ಪಲತಾ ಮದುವೆಯಾಗಿದ್ದು, ಗಂಡನನ್ನು ತೊರೆದು ತಂದೆ ಜೊತೆ ವಾಸವಿದ್ದಳು ಎನ್ನಲಾಗಿದೆ. ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಈಕೆ ತಂದೆಯನ್ನು ಕೊಂದು ನಾಪತ್ತೆಯಾಗಿದ್ದಾಳೆ ಎಂದು ತಿಳಿದುಬಂದಿದೆ.
ತಡವಾಗಿ ಬೆಳಕಿಗೆ?
ಈ ಕೊಲೆ ಮಂಗಳವಾರವೇ ನಡೆದಿದ್ದು, ಬುಧವಾರ ರಾತ್ರಿ ಬೆಳಕಿಗೆ ಬಂದಿದೆ. ತಂದೆ ಮತ್ತು ಮಗಳಿಗೆ ಪಕ್ಕದ ಗ್ರಾಮದಲ್ಲಿರುವ ಸಂಬಂಧಿಕರ ಮನೆಯಿಂದ ಪ್ರತಿನಿತ್ಯ ಊಟ ಬರುತಿತ್ತು. ಮಂಗಳವಾರ ರಾತ್ರಿ ಸಹ ಊಟ ತಂದುಕೊಟ್ಟಿದ್ದು, ತಂದೆ ಊಟ ಮಾಡುವ ವೇಳೆ ಹಿಂದಿನಿಂದ ತಲೆಗೆ ಗುದ್ದಲಿಯಿಂದ ಹೊಡೆದು ಸಾಯಿಸಿದ್ದಾಳೆ.
ತಂದೆ ಸಾಯಿಸಿ ಮನೆಬಿಟ್ಟಿದ್ದಾಳೆ. ಬುಧವಾರ ರಾತ್ರಿ ಸಂಬಂಧಿಕರು ಮತ್ತೆ ಊಟ ತಂದಾಗ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.