

ಚನ್ನಪಟ್ಟಣ
ತಾಲೂಕಿನ ದ್ಯಾವಪಟ್ಟಣ ಗ್ರಾಮದಲ್ಲಿ ತನ್ನ ಜಮೀನಿನಲ್ಲಿಯೇ ಅನುಮಾನಸ್ಪದವಾಗಿ ಕೊಲೆಯಾಗಿದ್ದ ಗೃಹಿಣಿಯ ಕೇಸ್ ಗೆ ಬಿಗ್ ಟ್ವಿಸ್ಟ್ ದೊರಕಿದೆ.
ಕಳೆದ ಮಂಗಳವಾರ ತಾಲೂಕಿನ ದ್ಯಾವಪಟ್ಟಣ ಗ್ರಾಮದ ಸಿ.ಕೆ. ಶ್ವೇತ (33) ಎಂಬ ಗೃಹಿಣಿ ತನ್ನ ಜಮೀನಿನಲ್ಲಿಯೇ ಶವವಾಗಿ ಪತ್ತೆಯಾಗಿದ್ದಳು. ಸೋಮವಾರ ಕಾಣಿಯಾಗಿದ್ದ ಈಕೆಯನ್ನು ಸಾಕಷ್ಟು ಹುಡುಕಾಟ ನಡೆಸಲಾಗಿತ್ತು. ಆದರೆ, ಮಂಗಳವಾರ ಮುಂಜಾನೆ ಈಕೆಯ ಶವ ತನ್ನ ಜಮೀನಿನಲ್ಲಿಯೇ ಪತ್ತೆಯಾಗಿತ್ತು.
ಈಕೆಯ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ಸಹ ಮೂಡಿದವು. ಜಮೀನು ವ್ಯಾಜ್ಯವಿದ್ದ ಕಾರಣ ಈಕೆಯನ್ನು ಗಂಡನ ಮನೆಯವರೇ ಕೊಲೆ ಮಾಡಿದ್ದಾರೆ ಎಂಬ ಅನುಮಾನ ದಟ್ಟವಾಗಿತ್ತು. ಆದರೆ, ಇದೀಗ, ಪೊಲೀಸರ ತನಿಖೆಯಿಂದ ಈ ಕೊಲೆಯ ರಹಸ್ಯ ಬಯಲಾಗಿದ್ದು, ಅನೈತಿಕ ಸಂಬಂಧಕ್ಕೆ ಜೀವ ಬಲಿಯಾಗಿರುವುದು ಧೃಢವಾಗಿದೆ.
ಪಕ್ಕದ ಮನೆಯ ಅಪ್ರಾಪ್ತ ಅಂದರ್?
ಈಕೆಯ ಪಕ್ಕದ ಮನೆಯ ಅಪ್ರಾಪ್ತ ಯುವಕನೇ (೧೭.೯) ಕೊಲೆಯ ಆರೋಪಿ. ಆಕೆಯ ಜೊತೆಗೆ ಉಂಟಾದ ವೈಮನಸ್ಯದಿಂದ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪ್ರಥಮ ಬಿ.ಎ ವಿದ್ಯಾರ್ಥಿಯಾಗಿರುವ ಅಪ್ರಾಪ್ತ ಯುವಕನಿಗೂ ಈಕೆಗೂ ಸ್ನೇಹಸಲುಗೆ ತುಸು ಹೆಚ್ಚಾಗಿದ್ದು, ಯಾವುದೋ ವಿಚಾರ ತಾರಕಕ್ಕೇರಿ ಆಕೆಯನ್ನು ಕೊಲೆಮಾಡಿದ್ದಾನೆ ಎಂದು ತಿಳಿದುಬಂದಿದೆ.
ಈತನ ಜೊತೆಗೆ ಕೊಲೆಯಾದ ಮಹಿಳೆಗೆ ಅಕ್ರಮ ಸಂಬಂಧವಿದ್ದು, ಈ ಸಂಬಂಧದಲ್ಲಿ ಉಂಟಾದ ವೈಮನಸ್ಯದಿಂದ ಈ ಕೊಲೆಯಾಗಿದೆ. ಮಹಿಳೆ ಕಾಣೆಯಾದ ದಿನ ಈತ ಸಹ ಹುಡುಕಾಟ ನಡೆಸುವ ನಾಟಕವಾಡಿದ್ದು, ಪ್ರಕರಣದ ದಾರಿ ತಪ್ಪಿಸುವ ಯತ್ನ ಸಹ ನಡೆಸಿದ್ದ ಎನ್ನಲಾಗಿದೆ. ಆದರೆ, ಪೊಲೀಸರ ಚುರುಕಿನ ತನಿಖೆಯಿಂದ ತಗಲಾಕಿಕೊಂಡಿದ್ದಾನೆ. ಸದ್ಯ ಈತ ಪೊಲೀಸರ ವಶದಲ್ಲಿದ್ದಾನೆ.