

ರಾಮನಗರ: ತಮಿಳುನಾಡಿಗೆ ಕರ್ನಾಟಕ ರಾಜ್ಯ ಸರ್ಕಾರ ನೀರು ಹರಿಸುತ್ತಿರುವುದನ್ನು ವಿರೋಧಿಸಿ ನಗರದ ಐಜೂರು ಬಸ್ ನಿಲ್ದಾಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.
ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಮಾತನಾಡಿ ಮುಂಗಾರು ಮಳೆ ಈ ಭಾರಿ ಕೈಕೊಟ್ಟಿದೆ. ರಾಜ್ಯದ ಬಹುತೇಕ ಜಲಾಶಯಗಳು ಸೇರಿದಂತೆ ದಕ್ಷಿಣ ಭಾಗದ ಜಲಮೂದಲದಲ್ಲಿ ಒಂದಾಗಿರುವ ಕಾವೇರಿ ಜಲಾನಯನ ಪ್ರದೇಶದ ಕೆಆರ್‌ಎಸ್ ಅಣೆಕಟ್ಟೆಯಲ್ಲೂ ನೀರಿಲ್ಲ. ಮಳೆ ಬಂದರಷ್ಟೇ ಕೆಆರ್‌ಎಸ್ ತುಂಬಲು ಸಾಧ್ಯ.
ಕಾವೇರಿ ಅಚ್ಚುಕಟ್ಟು ಪ್ರದೇಶದ ನಾಲೆಗಳು ಬರಿದಾಗಿವೆ ರೈತರು ಬೆಳೆ ಬೆಳೆಯಲು ಆಗುತ್ತಿಲ್ಲ. ಇಂತಹ ಸನ್ನಿವೇಶದಲ್ಲೂ ಕಾವೇರಿ ಅಚುಕಟ್ಟು ಪ್ರದೇಶದ ಕೆರೆಗಳಿಗೆ, ನಾಲೆಗೆ ನೀರು ಹರಿಸದೆ ಏಕಾಏಕಿ ತಮಿಳುನಾಡಿಗೆ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಬಿಟ್ಟಿರುವುದು ಅಕ್ಷಮ್ಯ ಅಫರಾದ.
ಈಗಾಗಲೇ ಮಳೆ ಕೊರತೆ, ನಾಲೆಯಲ್ಲಿ ನೀರು ಹರಿಯದ ಹಿನ್ನಲೆಯಲ್ಲಿ ಸಾಕಷ್ಟು ರೈತರ ಭತ್ತ, ಕಬ್ಬು, ಇತರ ಫಸಲು ಒಣಗಿದೆ. ಕಾವೇರಿ ಅಚ್ಚುಕಟ್ಟಿನ ಜೊತೆಗೆ ರಾಮನಗರ ಜಿಲ್ಲೆಯ 400ಕ್ಕೂ ಹೆಚ್ಚಿನ ಕೆರೆಗಳು ನೀರಿಲ್ಲದೆ ಒಣಗಿವೆ. ಭವಿಷ್ಯದಲ್ಲಿ ಬೆಂಗಳೂರು, ರಾಮನಗರ ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ಕೊರತೆ ಉಂಟಾಗುತ್ತದೆ. ಈಗಾಗಲೇ ಜನ ಜಾನುವಾರುಗಳು ನೀರಿನ ಭವಣೆ ಎದುರಿಸುತ್ತಿವೆ. ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ಜನರಿಗೆ ಅನ್ಯಾಯ ಮಾಡಿದೆ.
ಕೂಡಲೇ ರಾಜ್ಯ ಸರ್ಕಾರ ರೈತರ ಫಸಲಿಗೆ ಪೂರಕವಾಗಿ ನಾಲೆಗಳಿಗೆ ನೀರು ಹರಿಸಬೇಕು, ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ರಾಮನಗರ ಜಿಲ್ಲಾಧ್ಯಕ್ಷ ಯೋಗೀಶ್‌ಗೌಡ, ರಾಜ್ಯ ಉಪಾಧ್ಯಕ್ಷರಾದ ರಂಜಿತ್‌ಗೌಡ, ಬೆಂಕಿಶ್ರೀಧರ್, ಚಾಮರಾಜನಗರ ಜಿಲ್ಲಾಧ್ಯಕ್ಷ ಮಲ್ಲು, ಬೆಂಗಳೂರು ನಗರ ಕಾರ್ಯಾಧ್ಯಕ್ಷ ನಾಗಲಕ್ಷ್ಮೀಗೌಡ, ಮುಖಂಡರುಗಳಾದ ರಾಣಿ, ಸುರೇಶ್, ವೆಂಕಟೇಶ್, ಶೋಭಾ, ರಾಮಕೃಷ್ಣ, ರ‍್ಯಾಂಬೋ ಸೂರಿ, ರವಿ ಇದ್ದರು.