ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಚುನಾವಣೆ ಕೊರಂ ಕೊರತೆಯಿಂದ ಮುಂದೂಡಿಕೆ

WhatsApp Image 2023-07-12 at 12.05.19 PM
Published on

ಬಿಡದಿ: ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಚುನಾವಣೆ ಕೊರಂ ಕೊರತೆಯಿಂದ ಮುಂದೂಡಲಾಗಿದೆ. ಈ‌ ಹಿಂದೆ ಇದ್ದ ಅಧ್ಯಕ್ಷ ರೇಣುಕಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಂಘದ ಕಚೇರಿಯಲ್ಲಿ ಬುಧವಾರ ಚುನಾವಣೆ ನಿಗಧಿ ಪಡಿಸಲಾಗಿತ್ತು.

ಒಟ್ಟು 13 ನಿರ್ದೇಶಕರನ್ನ ಹೊಂದಿರುವ ಸಂಘದಲ್ಲಿ ಜೆಡಿಎಸ್ ಬೆಂಬಲಿತ ನಿರ್ದೇಶಕರು ಪ್ರಾಭಲ್ಯ ಇದ್ದರು  ನಡೆದ ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿಯುವ ಮೂಲಕ ಚುನಾವಣೆ ಮುಂದೂಡುವಂತೆ ನೋಡಿಕೊಂಡಿದ್ದಾರೆ.

ಜೆಡಿಎಸ್ ಬೆಂಬಲಿತ 8 ಹಾಗೂ ಕಾಂಗ್ರೆಸ್ ಬೆಂಬಲಿತ 4 ನಿರ್ದೇಶಕರು ಹಾಗೂ ಬಿಡಿಸಿಸಿ ಬ್ಯಾಂಕ್ ನಿಂದ ಓರ್ವ ನಾಮನಿರ್ದೇಶಿತ ನಿರ್ದೇಶಕರು ಇದ್ದಾರೆ. ಬದಲಾದ ರಾಜಕೀಯದಲ್ಲಿ ಜೆಡಿಎಸ್ ಬೆಂಬಲಿತ ಮಹಿಳಾ ನಿರ್ದೇಶಕಿ ಅನ್ನಪೂರ್ಣೇಶ್ವರಿ ಯೋಗನಂದ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾಲಕೃಷ್ಣ ಅವರನ್ನ ಬೆಂಬಲಿಸುವ ಮೂಲಕ ಕಾಂಗ್ರೆಸ್ ಸೇರಿಕೊಂಡಿದ್ದರು.

ಇದರ ಜೊತೆಗೆ ಬಿಡಿಸಿಸಿ ನಿರ್ದೇಶಕರ ಒಂದು ಮತ ಕಾಂಗ್ರೆಸ್ ನತ್ತ ಇರುವ ಕಾರಣ ಕಾಂಗ್ರೆಸ್ ಬಲ 6 ಹಾಗೂ ಜೆಡಿಎಸ್ ಬಲ 7 ಇದ್ದರು ಜೆಡಿಎಸ್ ನಿರ್ದೇಶಕರು ಚುನಾವಣೆಗೆ ಹಾಜರಾಗದೆ ಜಾಣತನ ತೋರಿದ್ದಾರೆ.

ಸ್ಪಷ್ಟ ಬಹುಮತ ಇದ್ದರು ಜೆಡಿಎಸ್ ಬೆಂಬಲಿತ ನಿರ್ದೇಶಕರು ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿಯುವ ಮೂಲಕ ಚುನಾವಣೆಯನ್ನ ಮುಂದೂಡಿದ ಹಿಂದಿನ ಮರ್ಮದ ಬಗ್ಗೆ ಚರ್ಚೆ ನಡೆಯುತ್ತಿವೆ.

ಬುಧವಾರ ನಿಗದಿಯಾಗಿದ್ದ ಅಧ್ಯಕ್ಷ ಗಾದಿಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾದ ಆನಂದ್ ಹಾಗೂ ಮಹೇಶ್ ನಾಮಪತ್ರ ಸಲ್ಲಿಕೆ ಮಾಡಿದ್ದರು. ಕೊರಂ ಕೊರತೆಯಿಂದ ಚುನಾವಣಾಧಿಕಾರಿ ಉಮೇಶ್ ಅವರು ಚುನಾವಣೆಯನ್ನ ಮುಂದೂಡಿದರು.

ಪ್ರತಿಷ್ಠೆಯ ಕಣ: ಪಟ್ಟಣದ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷಗಾಧಿಯನ್ನ ಹಾಲಿ ಶಾಸಕ ಎಚ್.ಸಿ.ಬಾಲಕೃಷ್ಣ ಹಾಗೂ ಮಾಜಿ ಶಾಸಕ ಎ.ಮಂಜುನಾಥ್ ಪ್ರತಿಷ್ಟೆಯಾಗಿ ತಗೆದುಕೊಂಡಿದ್ದರು. ಬಾಲಕೃಷ್ಣ ಶಾಸಕರಾದ ನಂತರದಲ್ಲಿ ಎದುರಿಸುತ್ತಿರುವ ಮೊದಲ ಚುನಾವಣೆ ಇದಾದ ಕಾರಣ ಪ್ರತಿಷ್ಟೆಯಾಗಿ ತಗೆದುಕೊಂಡು ಸಂಘದ ಅಧ್ಯಕ್ಷವಗಾದಿಯನ್ನ ಕೈ ವಶ ಪಡಿಸಿಕೊಳ್ಳಲು ಬಲೆ ಹೆಣೆದಿದ್ದರು. ಈ ವಿಚಾರವಾಗಿ ಮಾಜಿ ಶಾಸಕರಾದ ಮಂಜುನಾಥ್ ಅವರು ತಮ್ಮ ಬೆಂಬಲಿತ ನಿರ್ದೇಶಕರನ್ನ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗದಂತೆ ನೋಡಿಕೊಂಡು ಬಾಲಕೃಷ್ಣಗೆ ಟಕ್ಕರ್ ಕೊಟ್ಟಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net