ಬೆಂ-ಮೈ ಹೆದ್ದಾರಿಯಲ್ಲಿ ಅಂಡರ್‌ಪಾಸ್, ಸ್ಕೈವಾಕ್ಸಂಸದ, ಹೆದ್ದಾರಿ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ವಾಹನ ಸವಾರರು, ಸಾರ್ವಜನಿಕರ ಮನವಿಗೆ ಸ್ಪಂದನೆ

04-07-bidadi-1
Published on


ಚೇತನ್ ಚಕ್ಕೆರೆ ಬಿಡದಿ
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಅಂಡರ್‌ಪಾಸ್ ಹಾಗೂ ಸ್ಕೈವಾಕ್ ನಿರ್ಮಾಣ ಮಾಡಲು ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

ಹೆದ್ದಾರಿ ಉದ್ಘಾಟನೆಯಾಗಿ ತಿಂಗಳುಗಳೇ ಕಳೆದರೂ ಸಮಸ್ಯೆಗಳು ತಪ್ಪಿಲ್ಲ. ಸಾರ್ವಜನಿಕರು ಹೆದ್ದಾರಿಯ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಲು ಹಲವು ಕಡೆ ಸಮಸ್ಯೆಗಳಿದ್ದವು. ಈ ನಿಟ್ಟಿನಲ್ಲಿ ಕುಂಬಳಗೂಡಿನ ಪಂಚಮುಖಿ ಗಣೇಶ ದೇವಾಲಯದ ಬಳಿ ಅಂಡರ್‌ಪಾಸ್ ನಿರ್ಮಾಣ ಹಾಗೂ ಕಣಮಿಣಕಿ ಟೋಲ್ ಪ್ಲಾಜಾ ಸಮೀಪ ಕ್ರೈಸ್ಟ್ ಕಾಲೇಜು ಬಳಿ ಸ್ಕೈವಾಕ್ ನಿರ್ಮಾಣ ಕುರಿತು ಸಂಸದ ಪ್ರತಾಪ್ ಸಿಂಹ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ರಾಹುಲ್ ಗುಪ್ತಾ ಮಂಗಳವಾರ ಸ್ಥಳ ಪರಿಶೀಲನೆ ಮಾಡಿದರು. ಈ ಎರಡೂ ಸ್ಥಳಗಳಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಹೆದ್ದಾರಿಯ ಒಂದು ಬದಿಯಿಂದ ಇನ್ನೊಂದು ಬದಿಗೆ ಸಂಚರಿಸಲು ಅನುಕೂಲ ಮಾಡಿಕೊಡಲು ಚಿಂತನೆ ಮಾಡಿದ್ದಾರೆ.

ಎಡಿಜಿಪಿ ಸೂಚನೆ
ಬೆಂ-ಮೈ ಹೆದ್ದಾರಿಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ ಸಂಚಾರ ಹಾಗೂ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜತೆಗೆ ಹೆದ್ದಾರಿ ವೀಕ್ಷಣೆ ಮಾಡಿದ್ದರು. ಈ ವೇಳೆ ಕುಂಬಳಗೂಡಿನ ಪಂಚಮುಖಿ ಗಣೇಶ ದೇವಾಲಯದ ಬಳಿ ನೈಸ್ ರಸ್ತೆ ಹಾಗೂ ಬೆಂಗಳೂರು ಕಡೆಗೆ ತಿರುವು ಪಡೆಯಲು ಸರಿಯಾದ ವ್ಯವಸ್ಥೆ ಇರಲಿಲ್ಲ. ಇದನ್ನು ಗಮನಿಸಿದ್ದ ಅಲೋಕ್ ಕುಮಾರ್ ಅಂಡರ್ ಪಾಸ್ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಹಾಗೂ ಕಣಮಿಣಕಿ ಟೋಲ್ ಪ್ಲಾಜಾ ಬಳಿ ಇರುವ ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿಗಳು ಸೇರಿ ಸಾರ್ವಜನಿಕರು ಹೆದ್ದಾರಿ ದಾಟಲು ಸ್ಕೈವಾಕ್ ಅವಶ್ಯಕತೆ ಬಗ್ಗೆ ಅಲೋಕ್ ಕುಮಾರ್ ಅವರಿಗೆ ಮನವಿ ಮಾಡಿದ್ದರು.

ವಿಶ್ರಾಂತಿ ಜಾಗ ಪರಿಶೀಲನೆ
ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಅನುಕೂಲವಾಗುವಂತೆ ವಿಶ್ರಾಂತಿ ಪಡೆಯಲು ಸ್ಥಳದ ಅವಶ್ಯಕತೆ ಇತ್ತು. ಈ ನಿಟ್ಟಿನಲ್ಲಿ ಈಗಾಗಲೇ ಚನ್ನಪಟ್ಟಣದ-ಕನ್ನಮಂಗಲ ಬಳಿ ಜಾಗ ಕೂಡ ಗುರುತು ಮಾಡಲಾಗಿದ್ದು, ಈ ಜಾಗವನ್ನೂ ಅಧಿಕಾರಿಗಳ ತಂಡ ಪರಿಶೀಲಿಸಿತು.

ಬೆಂ-ಮೈ ಹೆದ್ದಾರಿಯಲ್ಲಿನ ಬಹುತೇಕ ಕೆಲಸಗಳು ಮುಗಿದಿವೆ. ಸಣ್ಣ-ಪುಟ್ಟ ಕೆಲಸಗಳು ಬಾಕಿ ಉಳಿದಿವೆ. ಹಲವು ಕಡೆ ಸಾರ್ವಜನಿಕರಿಗೆ ಸಮಸ್ಯೆಗಳು ಉಂಟಾಗುತ್ತಿವೆ ಎನ್ನುವ ದೂರು ಕೇಳಿ ಬಂದಿದ್ದು, ಹೆದ್ದಾರಿ ದಾಟಲು ಸೂಕ್ತ ವ್ಯವಸ್ಥೆ ಇಲ್ಲ. ಹಲವು ಕಡೆ ಅಂಡರ್‌ಪಾಸ್‌ಗಳಲ್ಲಿ ಬೆಳಕಿನ ವ್ಯವಸ್ಥೆ ಇಲ್ಲ. ಹೀಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ.
ಪ್ರತಾಪ್ ಸಿಂಹ, ಸಂಸದ

ಕೆಲವು ದಿನಗಳ ಹಿಂದೆ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಕುಂಬಳಗೂಡಿನಿಂದ ಚನ್ನಪಟ್ಟಣದ ಪುಟ್ಟಪ್ಪನದೊಡ್ಡಿವರೆಗೆ ಸಂಚರಿಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಸಾರ್ವಜನಿಕರಿಂದ ಅಂಡರ್‌ಪಾಸ್ ಹಾಗೂ ಸ್ಕೈವಾಕ್ ನಿರ್ಮಾಣದ ಬಗ್ಗೆ ಮನವಿ ಬಂದಿತ್ತು. ಆದಷ್ಟೂ ಬೇಗ ಸಮಸ್ಯೆ ಸರಿಪಡಿಸುವಂತೆ ಸೂಚನೆ ಇದ್ದು, ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ.
ರಾಹುಲ್ ಗುಪ್ತಾ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net