ಹಾಲು ಖರೀದಿ ದರ ಇಳಿಸಿದ ಬಮುಲ್ ಹೈನುಗಾರರಿಗೆ ಗಾಯದ ಮೇಲೆ ಬರೆ

Rmgm-Ph-01-Dairy Halu Rate Mevu Korathe News Story-Photo-Dairy Rmgm Taluk- 30-6-2023
Published on

ಗಂಗಾಧರ್​ ಬೈರಾಪಟ್ಟಣ ರಾಮನಗರ

ಪಶು ಆಹಾರ ಬೆಲೆ ಏರಿಕೆ ಸಂಕಷ್ಟದಲ್ಲಿ ಸಿಲುಕಿರುವ ಹೈನುಗಾರರಿಗೆ ಹಾಲು ಖರೀದಿ ದರ ಕಡಿಮೆ ಮಾಡುವ ಮೂಲಕ ಬಮುಲ್​ ಆಘಾತ ನೀಡಿದೆ.

ಪ್ರತಿ ಲೀಟರ್​ ಹಾಲಿನ ಖರೀದಿ ದರವನ್ನು ಜು.1ರಿಂದಲೇ 2.85 ರೂ.ಇಳಿಕೆ ಮಾಡಿದ್ದು, 3.5 ಪ್ಯಾಟ್​ ಇರುವ ಹಾಲಿನ ದರವನ್ನು 30 ರೂ.ಗಿಂತ ಕಡಿಮೆ ಆಗದಂತೆ ನೋಡಿಕೊಳ್ಳಲು ಸೂಚನೆ ನೀಡಿದೆ.

ಸಾಮಾನ್ಯವಾಗಿ ಹಾಲಿನ ಪೂರೈಕೆ ಹೆಚ್ಚಳವಾದರೆ, ಖರೀದಿ ದರ ಕಡಿಮೆ ಮಾಡುವ ಪದ್ಧತಿ ಹಿಂದಿನಿಂದಲೂ ಇದೆ. ಆದರೆ, ಈಗ ಹಾಲಿನ ಪೂರೈಕೆ ಪ್ರಮಾಣ ಎಂದಿನಂತಿದ್ದರೂ ದರ ಕಡಿಮೆ ಮಾಡಿರುವ ಹಿಂದೆ ನಷ್ಟದ ಕಾರಣ ಬಮುಲ್​ ನೀಡುತ್ತಿದೆ. ಪ್ರತಿ ತಿಂಗಳು ಬಮುಲ್​ ಕನಿಷ್ಠ 15 ಕೋಟಿ ರೂ.ಗಳ ನಷ್ಟ ಅನುಭವಿಸುತ್ತಿದೆ. ಇದನ್ನು ಸರಿದೂಗಿಸುವ ಸಲುವಾಗಿಯೇ ಈ ನಿರ್ಧಾರಕ್ಕೆ ಬಂದಿದೆ.

ಲಾಭ ಸಿಗುತ್ತಿಲ್ಲ: ಬಮುಲ್​ ಪ್ರತಿ ಲೀಟರ್​ ಹಾಲನ್ನು 35.50 ರೂ.ನೀಡಿ ಖರೀದಿಸುತ್ತಿದೆ. ಇದರಲ್ಲಿ 34 ರೂ.ಗಳನ್ನು ರೈತರಿಗೆ ನೀಡಿದರೆ, ಪ್ರತಿ ಲೀಟರ್​ ಹಾಲಿಗೆ 40 ಪೈಸೆಯನ್ನು ಎಂಪಿಸಿಎಸ್​ ಕಾರ್ಯದರ್ಶಿಗೆ ಹಾಗೂ 1.10 ರೂ.ಗಳನ್ನು ಸಂದ ನಿರ್ವಹಣಾ ವೆಚ್ಚವಾಗಿ ನೀಡಲಾಗುತ್ತದೆ. ನಂತರ ಹಾಲನ್ನು ಸಂಗ್ರಹಿಸಿ ಪರಿಷ್ಕರಿಸಿ, ಮಾರಾಟ ಮಾಡುವ ವೇಳೆಗೆ ವೆಚ್ಚ 39 ರೂ.ಆಗುತ್ತದೆ. ಇದರಲ್ಲಿ 2 ರೂ.ಗಳನ್ನು ಮಾರಾಟಗಾರರಿಗೆ ಕಮಿಷನ್​ ರೂಪದಲ್ಲಿ ಕೊಡಬೇಕಿದ್ದು, ಬಮುಲ್​ಗೆ ಸಿಗುವ ಮೊತ್ತ ಕೇವಲ 1.50 ರೂ.ಮಾತ್ರ. ಇದರಲ್ಲಿ ಯಾವುದೇ ಕಾರಣಕ್ಕೂ ಸಿಬ್ಬಂದಿ, ಬಮುಲ್​ ನಿರ್ವಹಣೆ ಸೇರಿ ಎಲ್ಲವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಸರಿದೂಗಿಸಬೇಕಾದರೆ ಹಾಲಿನ ಮಾರಾಟ ಬೆಲೆ ಹೆಚ್ಚಳ ಮಾಡಲೇಬೇಕಿದೆ. ಇದಕ್ಕೆ ಸರ್ಕಾರ ಒಪ್ಪಿಗೆ ನೀಡುತ್ತಿಲ್ಲ, ಇದರಿಂದಾಗಿ ಪ್ರತಿ ತಿಂಗಳು ಕನಿಷ್ಠ 15 ಕೋಟಿ ರೂ.ನಷ್ಟವಾಗುತ್ತಿದೆ ಎನ್ನುವುದು ಬಮುಲ್​ ಮೂಲಗಳ ಮಾಹಿತಿ.

ಹಾಲಿನ ಇತರ ಉತ್ಪನ್ನ ಮಾರಾಟಕ್ಕೆ ಒತ್ತು: ಖಾಸಗಿ ಕಂಪನಿಗಳು ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದಂತೆ ಹಾಲಿನ ಮಾರಾಟ ಪ್ರಮಾಣ ಸ್ಥಗಿತಗೊಳಿಸಿ, ಹಾಲಿನ ಇತರ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚು ಗಮನಹರಿಸಿವೆ. ಒಂದು ವೇಳೆ ಬಮುಲ್​ ಇದೇ ನಿರ್ಧಾರಕ್ಕೆ ಬಂದರೆ, ಬೆಂಗಳೂರು ಸೇರಿ ಹಲವೆಡೆ ಹಾಲಿಗೆ ಬರ ಎದುರಾಗಲಿದೆ. ನಷ್ಟದ ಹೊರತಾಗಿಯೂ ಗ್ರಾಹಕರ ನಂಬಿಕೆ ಕಳೆದುಕೊಳ್ಳಬಾರದು ಎನ್ನುವ ಕಾರಣಕ್ಕೆ ಹಾಲಿನ ಮಾರಾಟ ಮುಂದುವರಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಸಂಕಷ್ಟದಲ್ಲಿ ರೈತ: ಈಗ ಸುಮಾರು 34 ರೂ.ಗಳ ವರೆಗೆ ಪ್ರತಿ ಲೀಟರ್​ ಹಾಲಿನ ದರ ಪಡೆಯುತ್ತಿದ್ದ ರೈತರಿಗೆ ಜು.1ರಿಂದ ಏಕಾಏಕಿ 2.85 ರೂ.ಗಳನ್ನು ಕಡಿಮೆ ಮಾಡಿರುವುದು ಶಾಕ್​ ನೀಡಿದಂತೆ ಆಗಿದೆ. ಈಗಾಗಲೇ ಮೇವಿನ ಕೊರತೆ, ಪಶು ಆಹಾರಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಹೈನುಗಾರರು ಯಾವುದೇ ಕಾರಣಕ್ಕೂ ಹಾಲಿನ ಖರೀದಿ ದರ ಕಡಿಮೆ ಮಾಡದಂತೆ ಬಮುಲ್​ ಹಾಗೂ ಸರ್ಕಾರದ ಮೇಲೆ ಒತ್ತಾಯಿಸಿದ್ದಾರೆ.

ಇಂದು ಸಹಕಾರ ಸಚಿವರ ನೇತೃತ್ವದಲ್ಲಿ ಸಭೆ

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಂಗಾಲಾಗಿರುವ ಈ ಸಂದರ್ಭದಲ್ಲಿ ಹಾಲಿನ ದರ ಹೆಚ್ಚಳ ಮಾಡಿದರೆ, ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವ ಕಾರಣಕ್ಕೆ ಬೆಲೆ ಏರಿಕೆಗೆ ಸರ್ಕಾರ ಮುಂದಾಗಿಲ್ಲ. ಆದರೆ, ಹಾಲಿನ ಖರೀದಿ ದರ ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಹಾಗೂ ಬಮುಲ್​ಗೆ ಆಗುತ್ತಿರುವ ನಷ್ಟ ಸರಿದೂಗಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಸೋಮವಾರ ಸಹಕಾರ ಸಚಿವ ಕೆ.ಎನ್​.ರಾಜಣ್ಣ ಬೆಂಗಳೂರಿನಲ್ಲಿ ರಾಜ್ಯದ ಹಾಲು ಒಕ್ಕೂಟಗಳ ಹಿರಿಯ ಅಧಿಕಾರಿಗಳು ಮತ್ತು ಅಧ್ಯಕ್ಷರ ಸಭೆ ಕರೆದಿದ್ದಾರೆ. ಸಭೆಯಲ್ಲಿ ಹಾಲಿನ ದರ ಹೆಚ್ಚಳ ಸಂಬಂಧ ನಿರ್ಧಾರವಾಗಲಿದೆ ಎಂದು ಮೂಲಗಳ ತಿಳಿಸಿವೆ.

ಬಮುಲ್​ ಉಳಿಯಬೇಕಾದರೆ ಹಾಲಿನ ಮಾರಾಟ ದರ ಹೆಚ್ಚಳವಾಗಬೇಕು. ಇಲ್ಲ ಹಾಲಿನ ಖರೀದಿ ದರ ಇಳಿಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾದ ಕ್ರಮ ಕೈಗೊಳ್ಳಬೇಕು. ಬಮುಲ್​ ಪ್ರಸ್ತುತ ಮಾಹೆಯಲ್ಲಿ 15 ಕೋಟಿ ರೂ.ನಷ್ಟ ಅನುಭವಿಸುತ್ತಿದೆ.

 ಹೆಸರು ಹೇಳಲಿಚ್ಚಿಸದ ನಿರ್ದೇಶಕ

ಈಗಾಗಲೇ ಪಶು ಆಹಾರ ಬೆಲೆ ಏರಿಕೆಯಿಂದ ಕಂಗಾಲಾಗಿದ್ದೇವೆ. ಈಗ ನಾವು ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದೆವು. ಆದರೆ ಬೆಲೆ ಇಳಿಕೆ ಶಾಕ್​ ನೀಡಿದಂತೆ ಆಗಿದೆ. ಬಮುಲ್​ ತನ್ನ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು.

 ಸ್ವಾಮಿ, ಲಕ್ಕೋಜನಹಳ್ಳಿ, ಹೈನುಗಾರರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net