

ಗಂಗಾಧರ್ ಬೈರಾಪಟ್ಟಣ ರಾಮನಗರ
ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿಕೆಯ ಭಾಗವಾಗಿ ನೀಡಲಾಗುತ್ತಿರುವ ಮೊಟ್ಟೆಯನ್ನು ಅಂಗನವಾಡಿಗಳಿಗೆ ತಿಂಗಳಿಗೆ ಒಂದೇ ಬಾರಿ ವಿತರಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಜಿಲ್ಲೆಯ ಅಂಗನವಾಡಿಗಳಿಗೆ ತಿಂಗಳಿಗೆ ಒಮ್ಮೆ ಮತ್ತು ಕೆಲವು ಕಡೆಗಳಲ್ಲಿ ಎರಡು ಬಾರಿ ಸರಬರಾಜಾಗುತ್ತಿದ್ದು, ಮೊಟ್ಟೆಗಳನ್ನು ತಿನ್ನಲು ಸಾಧ್ಯವಾಗದ ಕಾರಣದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ.
ಸರ್ಕಾರವೇ ಜಾರಿಗೆ ತಂದಿರುವ ನಿಯಮದಂತೆ ತಿಂಗಳಿಗೆ ಮೂರು ಬಾರಿ ಅಂದರೆ ಪ್ರತಿ 10 ದಿನಗಳಿಗೆ ಒಮ್ಮೆ ಮೊಟ್ಟೆಯನ್ನು ಅಂಗನವಾಡಿಗಳಿಗೆ ಬೇಡಿಕೆಗೆ ಅನುಗುಣವಾಗಿ ಸರಬರಾಜು ಮಾಡಬೇಕು. ಆದರೆ ಈ ನಿಯಮ ಸರಿಯಾಗಿ ಜಾರಿ ಆಗುತ್ತಿಲ್ಲ.
ಕೆಲವು ಕಡೆಗಳಲ್ಲಿ ಪ್ರತಿ 15 ದಿನಗಳಿಗೆ ಒಮ್ಮೆ ಸರಬರಾಜು ಮಾಡಲಾಗುತ್ತಿದ್ದರೆ, ಮತ್ತೆ ಕೆಲವು ಕಡೆ 20 ದಿನಗಳಿಗೊಮ್ಮೆ, ಇನ್ನೂ ಕೆಲವು ಕಡೆಗಳಲ್ಲಿ ತಿಂಗಳಿಗೆ ಒಮ್ಮೆ ಪೂರೈಕೆ ಮಾಡಲಾಗುತ್ತಿದೆ. ತಿಂಗಳಿಗೆ ಒಮ್ಮೆ ಬಂದರೂ 3 ಪ್ರತ್ಯೇಕ ದಿನಗಳಂದು ಸರಬರಾಜು ಮಾಡಲಾಗುತ್ತಿದೆ ಎಂದು ಬಿಲ್ಗಳಿಗೆ ಸಹಿಯನ್ನು ಬಲವಂತವಾಗಿ ಮಾಡಿಸಿಕೊಳ್ಳುವ ಕೆಲಸಗಳು ನಡೆಯುತ್ತಿವೆ.
ಯೋಗ್ಯವಲ್ಲದ ಮೊಟ್ಟೆಗಳು
ಬೇಯಿಸಿದ ಮೊಟ್ಟೆಯನ್ನು ನಿರ್ಧಿಷ್ಟ ಕಾಲಮಿತಿಯೊಳಗೆ ತಿನ್ನಬೇಕು ಎನ್ನುವ ನಿಯಮವಿದೆ. ಅಷ್ಟೇ ಅಲ್ಲದೆ ಮೊಟ್ಟೆ ಬಳಕೆಗೂ ಕಾಲಮಿತಿ ನಿಗದಿಪಡಿಸಲಾಗಿದೆ. ಆದರೆ 10 ದಿನಗಳಿಗೆ ಒಮ್ಮೆಯಂತೆ ಮೊಟ್ಟೆ ಪೂರೈಕೆ ಮಾಡಬೇಕು ಎನ್ನುವ ನಿಯಮವಿದ್ದರೂ ಇದು ಜಾರಿ ಆಗದ ಕಾರಣದಿಂದಾಗಿ ಅಂಗನವಾಡಿಗಳಿಗೆ ಪೂರೈಕೆ ಮಾಡುವ ಮೊಟ್ಟೆಗಳು ಮಕ್ಕಳಿಗೆ ತಲುಪುವ ವೇಳೆಗೆ ಬಳಕೆಗೆ ಯೋಗ್ಯವಲ್ಲದ ಹಂತಕ್ಕೆ ತಲುಪುತ್ತಿರುತ್ತವೆ. ಕೆಲವು ಸಂದರ್ಭದಲ್ಲಿ ಮೊಟ್ಟೆಗಳನ್ನು ಬೇಯಿಸಿ ನೀಡುವ ಮೊಟ್ಟೆಗಳು ಕಪ್ಪು ಇಲ್ಲವೇ ಕಂದು ಬಣ್ಣಕ್ಕೆ ತಿರುಗುತ್ತಿವೆ. ಇದರಿಂದ ಮಕ್ಕಳ ಹೊಟ್ಟೆ ಸೇರಬೇಕಾದ ಮೊಟ್ಟೆಗಳು ತಿಪ್ಪೆಗುಂಡಿಗೆ ಸೇರುತ್ತಿವೆ.
ಅಧಿಕಾರಿಗಳು ಗಮನಿಸಲಿ
ಸಿಡಿಪಿಒ ಹಂತದಲ್ಲಿಯೇ ಮೊಟ್ಟೆ ಸರಬರಾಜು ಜವಾಬ್ದಾರಿ ನೀಡಲಾಗಿದೆ ಎಂದು ಹೇಳಲಾಗುತ್ತಿದ್ದು, ವಿತರಣೆಯಲ್ಲಿ ಆಗುತ್ತಿರುವ ಲೋಪವನ್ನು ಸರಿಪಡಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕಿದೆ. ಕೆಲವು ಅಂಗನವಾಡಿಗಳಿಗೆ ವಿತರಣೆ ಮಾಡುವ ಮೊಟ್ಟೆಯ ಗುಣಮಟ್ಟದ ಬಗ್ಗೆಯೂ ದೂರುಗಳಿವೆ. ಗುಣಮಟ್ಟ ಕಳಪೆಯಾದರೆ ಮಕ್ಕಳ ಮೇಲೆ ಪರಿಣಾಮ ಬೀರುವುದರಿಂದ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಮೊಟ್ಟೆಗಳನ್ನು ಪ್ರತಿ 10 ದಿನಗಳಿಗೆ ಒಮ್ಮೆ ಅಂಗನವಾಡಿಗಳಿಗೆ ಪೂರೈಕೆ ಮಾಡಬೇಕು ಎನ್ನುವ ನಿಯಮವಿದೆ. ಈ ನಿಯಮ ಮೀರಿರುವ ಮಾಹಿತಿ ಇಲ್ಲ. ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇನೆ.
ನಾರಾಯಣಸ್ವಾಮಿ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಮನಗರ
-
ಮೊಟ್ಟೆಗಳನ್ನು 10 ದಿನಗಳಿಗೊಮ್ಮೆ ಪೂರೈಕೆ ಮಾಡಬೇಕು ಎನ್ನುವ ನಿಯಮವನ್ನು ಪಾಲನೆ ಮಾಡುತ್ತಿಲ್ಲ. ಇದರಿಂದ ಮಕ್ಕಳಿಗೆ ನೀಡುವ ಮೊಟ್ಟೆ ತಿನ್ನಲು ಯೋಗ್ಯವಾಗಿಲ್ಲ.
ಜಯಲಕ್ಷ್ಮಮ್ಮ, ಗೌರವ ಅಧ್ಯಕ್ಷರು, ಅಂಗನವಾಡಿ ನೌಕರರ ಸಂ, ರಾಮನಗರ