

ಚನ್ನಪಟ್ಟಣ: ನಿಯಮ ಮೀರಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದಲ್ಲೇ ಖಾಸಗಿ ಪಶು ಆಹಾರ ಮಾರಾಟ ಮಾಡುತ್ತಿರುವುದು ತಾಲೂಕಿನ ನೇರಳೂರು ಗ್ರಾಮದಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ.
ಸಂಘದ ಕಾರ್ಯದರ್ಶಿ ಲಿಂಗೇಗೌಡ ಎಂಬುವವರು ಗ್ರಾಮದ ಎಂಪಿಸಿಎಸ್ ಕಟ್ಟಡದಲ್ಲಿ, ಕೆಲದಿನಗಳಿಂದ ಒಕ್ಕೂಟದ ನಿಯಮವನ್ನು ಮೀರಿ ಖಾಸಗಿ ಪಶುಆಹಾರವನ್ನು ಮಾರಾಟ ಮಾಡುತ್ತಿದ್ದರು. ಸಂಘದ ಕಟ್ಟಡದಲ್ಲಿಯೇ ಮಾರಾಟ ಮಾಡುತ್ತಿದ್ದ ಬಗ್ಗೆ ಕೆಲಸ ಸದಸ್ಯರು ಈ ಹಿಂದೆಯೇ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಮಧ್ಯೆ ಸಂಘದ ನೂತನ ಆಡಳಿತಾಧಿಕಾರಿಯಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದ ಬಮುಲ್ ಸಹಾಯಕ ವ್ಯವಸ್ಥಾಪಕ ಹಾಗೂ ಡೇರಿ ಆಡಳಿತಾಧಿಕಾರಿ ಚಂದ್ರಶೇಖರ್ ಸಂಘಕ್ಕೆ ಭೇಟಿ ನೀಡಿದ್ದಾಗ ಸಂಘದ ಕಾರ್ಯದರ್ಶಿಯ ಈ ಅವ್ಯವಹಾರ ಬಯಲಿಗೆ ಬಂದಿದೆ.
234 ಚೀಲ ಸೀಜ್: ಆಡಳಿತಾಧಿಕಾರಿ ಚಂದ್ರಶೇಖರ್ ಪರಿಶೀಲನೆಯ ವೇಳೆ ಸಂಘಕ್ಕೆ ಸೇರಿದ್ದ ಕಟ್ಟಡದಲ್ಲಿಯೇ ಲಿಂಗೇಗೌಡ ಖಾಸಗಿ ಪಶುಆಹಾರ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಇದನ್ನು ಪ್ರಶ್ನಿಸಿದಾಗ ಆತನಿಂದ ಸಮರ್ಪಕ ಉತ್ತರ ಬಂದಿಲ್ಲ. ಕಾರ್ಯದರ್ಶಿಯಾಗಿ ಕಾನೂನುಬಾಹಿರವಾಗಿ ಸಂಘದ ಕಟ್ಟಡದ ಜಾಗದಲ್ಲಿಯೇ ಪಶು ಆಹಾರ ಮಾರಾಟ ಮಾಡುತ್ತಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಸಂಘದ ಗೋದಾಮಿನಲ್ಲಿದ್ದ ವಿವಿಧ ಕಂಪನಿಗಳ 234 ಚೀಲ ಪಶುಆಹಾರವನ್ನು ಸೀಜ್ ಮಾಡಲಾಗಿದೆ. ಇದಲ್ಲದೇ ಸಂಘದ ಕಾರ್ಯದರ್ಶಿ ವಿರುದ್ಧ ಸಹಕಾರ ಇಲಾಖೆ ಸಹಾಯಕ ನಿಬಂಧಕರಿಗೆ ಚಂದ್ರಶೇಖರ್ ದೂರು ನೀಡಿದ್ದಾರೆ.
ಅಮಾನತಿಗೆ ಆಗ್ರಹ: ಸಂಘದ ಕಾರ್ಯದರ್ಶಿ ನಿಯಮಗಳಿಗೆ ವಿರುದ್ಧವಾಗಿ ಖಾಸಗಿ ಪಶುಆಹಾರ ಮಾರಾಟ ಮಾಡುತ್ತಿರುವುದಲ್ಲದೇ ಅನೇಕ ಅವ್ಯವಹಾರಗಳಲ್ಲಿ ಭಾಗಿಯಾಗಿದ್ದು, ಆತನನ್ನು ಅಮಾನತು ಮಾಡಬೇಕು ಎಂದು ಸಂಘದ ಸದಸ್ಯರು ಹಾಗೂ ನೇರಳೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪತ್ರಿಕೆಗೆ ತಿಳಿಸಿದ ತಾಪಂ ಮಾಜಿ ಸದಸ್ಯ ಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷ ಶಿವಕುಮಾರ್, ಗ್ರಾಪಂ ಸದಸ್ಯರಾದ ಶಿವಪ್ರಕಾಶ್, ಜ್ಯೋತಿ ಜಯರಾಂ ಹಾಗೂ ಜಯಲಕ್ಷ$್ಮಮ್ಮ ಪುಟ್ಟಲಿಂಗಯ್ಯ ಗ್ರಾಮದ ಮುಖಂಡರಾದ ಬಿ.ನಾಗರಾಜು, ಟಿ.ಸುರೇಂದ್ರ ಮತ್ತಿತರರು, ಸಂಘದಲ್ಲಿ ಸಾಕಷ್ಟು ಅವ್ಯವಹಾರ ನಡೆಸಿರುವ ಕಾರ್ಯದರ್ಶಿ ಲಿಂಗೇಗೌಡ ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಸಂಘಕ್ಕೆ 2020ರಲ್ಲಿ ಚುನಾವಣೆ ನಡೆದಿದ್ದು, ಅಂದಿನಿಂದ ಇಲ್ಲಿಯವರೆಗೂ ಸಂಘದ ಆಡಳಿತ ಮಂಡಳಿ ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಸಂಘದ ಕಾರ್ಯದರ್ಶಿಯಾಗಿ ನಿಯಮಬಾಹಿರವಾಗಿ ಖಾಸಗಿ ಪಶುಆಹಾರ ಮಾರಾಟ ಮಾಡುತ್ತಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆತನನ್ನು ಸೇವೆಯಿಂದ ಅಮಾನತು ಮಾಡಬೇಕು ಹಾಗೂ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಂಘದ ಆಡಳಿತಾಧಿಕಾರಿಯಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಲು ತೆರಳಿದ್ದಾಗ ಸಂಘದ ಕಾರ್ಯದರ್ಶಿ ಸಂಘದ ಗೋದಾಮಿನಲ್ಲಿ ಖಾಸಗಿ ಪಶುಆಹಾರ ಮಾರಾಟ ಮಾಡುತ್ತಿರುವುದು ಕಂಡುಬಂತು. ಇದು ಕಾನೂನುಬಾಹಿರ. ಸಂಘದ ಕಾರ್ಯದರ್ಶಿ ಒಕ್ಕೂಟದ ಪಶುಆಹಾರ ಬಿಟ್ಟು ಖಾಸಗಿ ಆಹಾರ ಮಾರಾಟ ಮಾಡುವುದಕ್ಕೆ ಅವಕಾಶ ಇಲ್ಲ. ಈ ಕಾರಣದಿಂದ 234 ಚೀಲ ವಿವಿಧ ಕಂಪನಿಗಳ ಪಶುಆಹಾರ ಸೀಜ್ ಮಾಡಲಾಗಿದೆ. ಕಾರ್ಯದರ್ಶಿ ವಿರುದ್ಧ ಸಹಕಾರ ಇಲಾಖೆಗೆ ದೂರು ನೀಡಲಾಗಿದೆ.
ಚಂದ್ರಶೇಖರ್, ಬಮುಲ್ ವಿಸ್ತರಣಾಧಿಕಾರಿ