

ಧನಂಜಯ ಗುರುಪುರ
ಕೇಂದ್ರದ ಜಲಜೀವನ ಮಿಷನ್‌ನ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಗುರುಪುರ-ಮೂಡುಬಿದಿರೆ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಗುರುಪುರದಲ್ಲಿ ನಿರ್ಮಾಣಗೊಂಡಿರುವ ಜಾಕ್‌ವೆಲ್‌ನ ಪ್ರಾಯೋಗಿಕ ಚಾಲನೆ (ಟ್ರಾಯಲ್ ರನ್) ನಡೆಯುತ್ತಿದ್ದು, ಇಲ್ಲಿಗೆ ಈಗಾಗಲೇ ಉನ್ನತ ಅಧಿಕಾರಿಗಳು ಭೇಟಿ ನೀಡಿ ಸಮೀಕ್ಷೆ ನಡೆಸಿದ್ದಾರೆ.
ಮುಂದಿನ 20 ದಿನದೊಳಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟ್ಯಾಂಕ್‌ಗಳಿಗೆ ನೀರು ಸರಬರಾಜು ಆಗಲಿದೆ. ಇದೇ ರೀತಿ ಬಂಟ್ವಾಳ ತಾಲೂಕಿನ ತುಂಬೆ ಸಮೀಪದ ರಾಮಲ್‌ಕಟ್ಟೆಯಲ್ಲಿ ನೇತ್ರಾವತಿ ನದಿ ನೀರು ಅವಲಂಬಿಸಿ ನಿರ್ಮಾಣಗೊಂಡಿರುವ ಜಾಕ್‌ವೆಲ್‌ನ (ಪಂಪ್‌ಹೌಸ್) ಟ್ರಯಲ್ ರನ್ ಕೂಡ ಆರಂಭವಾಗಿದೆ.
ಯೋಜನೆಯ ಗುತ್ತಿಗೆ ಪಡೆದುಕೊಂಡಿರುವ ಮಂಗಳೂರಿನ ಮುಗ್ರೋಡಿ ಕನ್‌ಸ್ಟ್ರಕ್ಷನ್ ಕಂಪನಿ(ಎಂಸಿಕೆ) ಎರಡು ವರ್ಷದ ಹಿಂದೆ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಆರಂಭಿಸಿತ್ತು. ಗುರುಪುರ-ಮೂಡುಬಿದಿರೆ ವ್ಯಾಪ್ತಿಯ ಯೋಜನೆ ಕಾರ್ಯಗತಕ್ಕಾಗಿ ಗುರುಪುರ ಹೊಸ ಸೇತುವೆ ಪಕ್ಕದಲ್ಲಿ ನಿರ್ಮಾಣಗೊಂಡ ಬೃಹತ್ ಜಾಕ್‌ವೆಲ್‌ನಲ್ಲಿ ಈಗ ಟ್ರಯಲ್ ರನ್ ನಡೆಯುತ್ತಿದೆ. ಇಲ್ಲಿಂದ ಪಡುಪೆರಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಪದವಿನಲ್ಲಿ ನಿರ್ಮಿಸಲಾದ 11 ಎಂಎಲ್‌ಡಿ ಸಾಮರ್ಥ್ಯದ ಶುದ್ಧೀಕರಣ ಘಟಕಕ್ಕೆ(ಟ್ರೀಟ್‌ಮೆಂಟ್ ಪ್ಲಾಂಟ್) ನೀರು ಹರಿಯುತ್ತಿದೆ. ಶುದ್ಧೀಕರಣಗೊಂಡ ನೀರು ಮೂಡುಬಿದಿರೆ ಕೇಮಾರು ಮತ್ತು ನೆಲ್ಲಿಗುಡ್ಡೆಯಲ್ಲಿ ನಿರ್ಮಿಸಲಾದ 2 ಮಾಸ್ಟರ್ ಬ್ಯಾಲೆನ್ಸಿಂಗ್ ಟ್ಯಾಂಕ್‌ಗಳಲ್ಲಿ(ಎಂಬಿಟಿ) ಸಂಗ್ರಹವಾಗಿ, ಅಲ್ಲಿಂದ ಮುಂದಕ್ಕೆ 11 ವಲಯ ಬ್ಯಾಲೆನ್ಸಿಂಗ್ ಟ್ಯಾಂಕ್‌ಗಳಿಗೆ(ಝಡ್‌ಬಿಟಿ) ಹರಿಯುತ್ತದೆ. ಜಡ್‌ಬಿಟಿಗಳಿಂದ ಗ್ರಾಮ ಪಂಚಾಯಿತಿಗಳ ನೀರಿನ ಟ್ಯಾಂಕ್‌ಗಳಿಗೆ ಸಂಪರ್ಕ ಕಲ್ಪಿಸಲಾಗಿದೆ.
ಸುಮಾರು 145.48 ಕೋ. ರೂ. ವೆಚ್ಚದ ಗುರುಪುರ-ಮೂಡುಬಿದಿರೆ ಯೋಜನೆಯಲ್ಲಿ 21 ಗ್ರಾಮ ಪಂಚಾಯಿತಿಗಳ 39 ಗ್ರಾಮಗಳಿಗೆ ನೀರು ಪೂರೈಕೆಯಾಗಲಿದೆ. 2038ರ ಹೊತ್ತಿಗೆ 1,51,450ರಷ್ಟು ಜನರಿಗೆ ಕುಡಿಯುವ ನೀರಿನ ಪ್ರಯೋಜನವಾಗುವ ರೀತಿಯಲ್ಲಿ ಗುರುಪುರ-ಮೂಡುಬಿದಿರೆ ಜಲಜೀವನ ಮಿಷನ್ ಅಥವಾ ಬಹುಗ್ರಾಮ ಕುಡಿಯುವ ನೀರು ಯೋಜನೆ ರೂಪಿಸಲಾಗಿದೆ.
ಬಂಟ್ವಾಳದ ತುಂಬೆಗೆ ಹತ್ತಿರದ ರಾಮಲ್‌ಕಟ್ಟೆಯಲ್ಲಿ ಒಟ್ಟು 73.10 ಕೋ. ರೂ. ವೆಚ್ಚದಲ್ಲಿ ನಿರ್ಮಿಸಲಾದ ಮತ್ತೊಂದು ಜಾಕ್‌ವೆಲ್‌ನ ಟ್ರಯಲ್ ರನ್ ಕೂಡ ನಡೆಯುತ್ತಿದ್ದು, ಇಲ್ಲಿಂದ ಬಂಟ್ವಾಳ ತಾಲೂಕಿನ 90 ವಸತಿ ಪ್ರದೇಶಗಳು ಹಾಗೂ ಮಂಗಳೂರು ತಾಲೂಕಿನ ಉಳಾಯಿಬೆಟ್ಟು, ನೀರುಮಾರ್ಗ ಮತ್ತಿತರ 11 ಗ್ರಾ.ಪಂ. ವ್ಯಾಪ್ತಿಯ ಒಟ್ಟು 15 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ. ಈ ಯೋಜನೆಯಿಂದ 2038ರ ಹೊತ್ತಿಗೆ ಸುಮಾರು 85,016ರಷ್ಟು ಜನರಿಗೆ ಕುಡಿಯುವ ನೀರಿನ ಪ್ರಯೋಜನವಾಗಲಿದೆ.
ಗುರುಪುರ-ಮೂಡುಬಿದಿರೆ ಯೋಜನೆಯಡಿ ಫಲ್ಗುಣಿ ನದಿ ತಟದಲ್ಲಿ ಜಾಕ್‌ವೆಲ್ ನಿರ್ಮಿಸಲಾಗಿದೆ. ಕೊಂಪದವಿನಲ್ಲಿ 11 ಎಂಎಲ್‌ಡಿ ಸಾಮರ್ಥ್ಯದ ಟ್ರೀಟ್‌ಮೆಂಟ್ ಪ್ಲಾಂಟ್ ಹಾಗೂ ನೆಲ್ಲಿಗುಡ್ಡೆ ಮತ್ತು ಕೇಮಾರುವಿನಲ್ಲಿ ಕ್ರಮವಾಗಿ 5.50 ಎಲ್‌ಎಲ್, 4.25 ಎಲ್‌ಎಲ್ ಸಾಮರ್ಥ್ಯದ ಎಂಬಿಟಿ ಸ್ಥಾಪಿಸಲಾಗಿದೆ. ನೆಲ್ಲಿಗುಡ್ಡೆ, ಮಾಯನಪೆದಮಲೆ, ನವನಗರ, ಗಂಜಿಮಠ, ನೀರಪರಿ, ಬೋರುಗುಡ್ಡೆ, ಕೇಮಾರು, ಮಜ್ಜಿಗುರಿ, ಪಲ್ಲದಮೇಲು, ಮಾವಿನಕಟ್ಟೆ ಹಾಗೂ ಪೇರಲ್ಕೆ ಎಂಬಲ್ಲಿ ಪ್ರತ್ಯೇಕ ಸಾಮರ್ಥ್ಯದ ಒಟ್ಟು 11 ಜಡ್‌ಬಿಟಿ ನಿರ್ಮಿಸಲಾಗಿದೆ. ಅಂತೆಯೇ ಉಳಾಯಿಬೆಟ್ಟು-ಬಂಟ್ವಾಳ ಯೋಜನೆಯಡಿ ರಾಮಲ್‌ಕಟ್ಟೆಯಲ್ಲಿ ಜಾಕ್‌ವೆಲ್ ನಿರ್ಮಿಸಲಾಗಿದೆ. ಬೆಂಜನಪದವಿನಲ್ಲಿ 5.5 ಎಲ್‌ಎಲ್ ಸಾಮರ್ಥ್ಯದ ಒಂದು ಎಂಬಿಟಿ ನಿರ್ಮಿಸಲಾಗಿದೆ. ಬೆಂಜನಪದವು, ಜ್ಯೋತಿಗುಡ್ಡೆ, ಶಿವಾಜಿನಗರ, ಬದ್ರಿಯಾನಗರ, ನೀರುಮಾರ್ಗ, ಅಡ್ಯಾರುಪದವು, ಪಡು, ಸವಣೂರು ಪದವು ಮತ್ತು ಬಡಗಬೆಳ್ಳೂರಿನಲ್ಲಿ ಒಟ್ಟು 9 ಪ್ರತ್ಯೇಕ ಸಾಮರ್ಥ್ಯದ ಜಡ್‌ಬಿಟಿ ನಿರ್ಮಿಸಲಾಗಿದೆ.
ಕೇಂದ್ರ ಸರ್ಕಾರದ ಈ ಯೋಜನೆಯು ಇಲ್ಲಿ 2053ರ ಜನಸಂಖ್ಯೆ ಆಧರಿಸಿ ಕೈಗೆತ್ತಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶಗಳಿಗೆ ದಿನದ 24 ತಾಸು ನೀರು ಒದಗಿಸಬೇಕೆಂಬ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ದೂರದೃಷ್ಟಿಯ ಬೃಹತ್ ಯೋಜನೆಗಾಗಿ ನದಿ ನೀರು ಅವಲಂಬಿಸಲಾಗಿದೆ.
39 ಗ್ರಾಮಗಳಿಗೆ ಕುಡಿಯುವ ನೀರು
ಗುರುಪುರ-ಮೂಡುಬಿದಿರೆ ವ್ಯಾಪ್ತಿಯ ಜಲಜೀವನ ಮಿಷನ್ ಯೋಜನೆಯಿಂದ ಗುರುಪುರ, ಕಂದಾವರ, ಪಡುಪೆರಾರ, ಮುಚ್ಚೂರು, ಮರವೂರು ಮತ್ತಿತರ ಗ್ರಾಮಗಳ ಸಹಿತ ಮೂಡುಬಿದಿರೆಯ ಕೆಲವು ಗ್ರಾಮ ಒಳಗೊಂಡಂತೆ ಒಟ್ಟು 21 ಗ್ರಾಮ ಪಂಚಾಯಿತಿಗಳ 39 ಗ್ರಾಮಗಳು ಕುಡಿಯುವ ನೀರು ಪಡೆಯಲಿವೆ. ಗುರುಪುರ ಜಾಕ್‌ವೆಲ್‌ನಿಂದ ಕೊಂಪದವಿನ ವರೆಗೆ 13 ಕಿ.ಮೀ. ಪೈಪ್‌ಲೈನ್‌ನ ಸಹಿತ 2 ಎಂಬಿಟಿ ಹಾಗೂ 11 ಜಡ್‌ಬಿಟಿಯಿಂದ ಪಂಚಾಯಿತಿ ಟ್ಯಾಂಕ್‌ಗಳ ವರೆಗೆ ಒಟ್ಟು 423 ಕಿ.ಮೀ. ಕೊಳವೆ ಅಳವಡಿಸಲಾಗಿದೆ. ಶುದ್ಧೀಕರಣ ಘಟಕಗಳಲ್ಲಿ ನೀರು ಪರೀಕ್ಷೆಗೆ ವಿಶೇಷ ಲ್ಯಾಬ್ ಅಳವಡಿಸಲಾಗಿದೆ ಎಂದು ಗುತ್ತಿಗೆ ಕಂಪನಿಯ ಇಂಜಿನಿಯರ್ ಒಬ್ಬರು ತಿಳಿಸಿದರು.
ಜಲಜೀವನ ಮಿಷನ್‌ನಡಿ ಗುರುಪುರ-ಮೂಡುಬಿದಿರೆ ವ್ಯಾಪ್ತಿಯ ಗುರುಪುರದಲ್ಲಿ ಹಾಗೂ ತುಂಬೆಯ ರಾಮಲ್‌ಕಟ್ಟೆಯಲ್ಲಿ ನಿರ್ಮಿಸಲಾದ 2 ಜಾಕ್‌ವೆಲ್‌ಗಳಲ್ಲಿ ಈಗ ಟ್ರಯಲ್ ರನ್ ನಡೆಯುತ್ತಿದೆ. ಎಲ್ಲವೂ ಸರಿ ಹೋದ ಬಳಿಕ, ಮುಂದಿನ 20 ದಿನಗಳೊಳಗೆ ಎರಡೂ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬರಲಿವೆ.- ರಘುನಾಥ, ಜಿಪಂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲ ಇಂಜಿನಿಯರ್ https://www.vijayavani.net/aj-hospital-scijofreniya-deses-program-dho-h-r-thimmayya https://www.vijayavani.net/mangalore-ganja-consuming-four-arrested-city-police