ಕತ್ತಲಲ್ಲಿ ಬಾಣ ಬಿಟ್ಟ ರಾಮಲಿಂಗಾರೆಡ್ಡಿ: ಈಶ್ವರಪ್ಪ ವ್ಯಂಗ್ಯ

K.S.Eshwarappa
ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ
Published on

ಶಿವಮೊಗ್ಗ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕತ್ತಲಲ್ಲಿ ಬಾಣ ಬಿಟ್ಟಿದ್ದಾರೆ. ಎಲ್ಲೋ ಕುಳಿತು ರಾಗಿಗುಡ್ಡ ಪ್ರಕರಣದ ಬಗ್ಗೆ ಹೇಳಿಕೆ ನೀಡಿದ್ದಾರೆ. ಅದರಲ್ಲೂ ಬಿಜೆಪಿಯವರೇ ವೇಷ ಬದಲಿಸಿಕೊಂಡು ಕಲ್ಲು ತೂರಿದ್ದಾರೆ ಎಂದು ಅವರು ಹೇಳಿರುವುದು ಹಾಸ್ಯಾಸ್ಪದ ಹಾಗೂ ಖಂಡನೀಯ. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ನಿಶ್ಚಿತ ಎಂದು ಶಿವಮೊಗ್ಗ ಎಸ್ಪಿ ಹೇಳಿದ್ದರು. ಈಗ ರಾಮಲಿಂಗಾ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಿ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.

ಎಲ್ಲ ದೇಶವಾಸಿಗಳನ್ನೂ ಭಾರತೀಯರು ಎಂದು ಆತ್ಮೀಯತೆಯಿಂದ ಕಾಣುವ ಮನಸ್ಥಿತಿ ಬಿಜೆಪಿ ಕಾರ್ಯಕರ್ತರದ್ದು. ಮೇಲಾಗಿ ವೇಷ ಬದಲಿಸಿಕೊಂಡು ಮೋಸದಿಂದ ಯಾರ ಮೇಲೋ ಆಕ್ರಮಣ ಮಾಡುವ ಹೇಡಿ ಸ್ವಭಾವ ನಮ್ಮದಲ್ಲ ಎಂದು ತಿರುಗೇಟು ನೀಡಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ರಾಗಿಗುಡ್ಡಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅವರು ಕೂಡ ಬಿಜೆಪಿ ವಿರುದ್ಧ ಟೀಕೆ ಮಾಡಿಲ್ಲ. ಆದರೆ ರಾಮಲಿಂಗಾರೆಡ್ಡಿ ಹಿರಿಯ ಸಚಿವರು, ಗೃಹ ಖಾತೆ ನಿಭಾಯಿಸಿದ್ದವರು. ಅವರ ಹೇಳಿಕೆ ಆಶ್ಚರ್ಯ ತಂದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net