

ಕೋಲಾರ: ಮುಂದಿನ ಸರ್ಕಾರದಲ್ಲಿ ಕಾಂಗ್ರೆಸ್‍ನವರು ಮುಖ್ಯಮಂತ್ರಿಯಾಗುತ್ತಾರೆ ಎನ್ನುವುದು ಸತ್ಯ. ಆದರೆ ಯಾರಾಗಲಿದ್ದಾರೆ ಎನ್ನುವುದು ಗೊತ್ತಿಲ್ಲ,ಹೈಕಮಾಂಡ್‍ಗೆ ಬಿಟ್ಟ ವಿಚಾರ ಎಂದು ಶಾಸಕ ರಾಮಲಿಂಗಾರೆಡ್ಡಿ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂದೆ ಕಾಂಗ್ರೆಸ್ಸಿಗರು ಸಿಎಂ ಆಗುವ ಬಗ್ಗೆ ಸಿದ್ದರಾಮಯ್ಯ ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದರಲ್ಲದೆ ಈಗಿನ ಬೆಳವಣಿಗೆ ಗಮನಿಸಿದರೆ ಈ ಸರ್ಕಾರ ಹೆಚ್ಚು ಕಾಲ ಮುಂದುವರಿಯುವ ಲಕ್ಷಣಗಳಿಲ್ಲ. ಮುಂದೆ ಕಾಂಗ್ರೆಸ್‍ನಿಂದ ಯಾರು ಸಿಎಂ ಆಗಬೇಕು ಎಂಬುದನ್ನು ನಿರ್ಧರಿಸುತ್ತದೆ ಎಂದರು.
ರಾಜರಾಜೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಿಂದೆ ಇದ್ದಾರೆ ಎನ್ನುವುದಕ್ಕಿಂತ ಕಾಂಗ್ರೆಸ್ ಪಕ್ಷದಲ್ಲಿದ್ದೇವೆ ಎನ್ನುವುದು ಮುಖ್ಯ. ಪಕ್ಷದ ಅಭ್ಯರ್ಥಿ ಕುಸುಮಾ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಾವ ನೈತಿಕತೆಯಿದೆ ?: ಆಪರೇಷನ್ ಕಮಲದ ಭಾಗವಾಗಿ 5 ಕೋಟಿ ರೂ.ಗಳನ್ನು ಮನೆಯಲ್ಲಿ ತಂದಿಟ್ಟಿದ್ದರೆಂದು ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಸದನದಲ್ಲಿ ಗಂಭೀರವಾದ ಆರೋಪ ಮಾಡಿದಾಗ ತುಟಿ ಪಿಟಕ್ ಎನ್ನದ ಡಿಸಿಎಂ ಅಶ್ವತ್ಥನಾರಾಯಣ್ ಈಗ ನಕಲಿ ವೋಟರ್ ಐಡಿ ಬಗ್ಗೆ ಮಾತನಾಡುತ್ತಿದ್ದಾರೆ. ಹೀಗೆ ಮಾತನಾಡಲು ಅವರಿಗೆ ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಮಾಡಿರುವ ನೋಟು ಅಮಾನ್ಯೀಕರಣ, ಜಿಎಸ್‍ಟಿ ಇನ್ನಿತರೆ ಕಾಯ್ದೆಗಳಿಂದಾಗಿ ಆರ್ಥಿಕ ವ್ಯವಸ್ಥೆ ಕುಸಿದು ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ. ಮೋದಿ 6 ವರ್ಷಗಳ ಹಿಂದೆ ಹೇಳಿದ್ದು, ಆ ನಂತರ ಚುನಾವಣೆಯಲ್ಲಿ ಹೇಳಿದ್ದ ಭರವಸೆಗಳು ಯಾವೂ ಸಹ ಈಡೇರಿಲ್ಲ. ಈ ನಡುವೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಮೂಲಕ ಹೊಸ ಕಾಯ್ದೆಗಳನ್ನು ಜಾರಿ ಮಾಡಿದೆ. ಇಂತಹ ಸಮಸ್ಯೆಗಳ ಬಗ್ಗೆ ಪರಿಷತ್‍ನಲ್ಲಿ ಧ್ವನಿ ಎತ್ತಲು ರಮೇಶ್‍ಬಾಬು ಅವರ ಆಯ್ಕೆ ಅಗತ್ಯ ಎಂದು ತಿಳಿಸಿದರು.
ಮಾಜಿ ಸಚಿವ, ಎಂಎಲ್‍ಸಿ ಎಚ್.ಎಂ.ರೇವಣ್ಣ ಮಾತನಾಡಿ, ಕಾಂಗ್ರೆಸ್‍ನ 8 ಶಾಸಕರನ್ನು ಬಿಜೆಪಿಗೆ ಕರೆದೊಯ್ಯವ ವಿಷಯ ಬಿಟ್ಟು ಈಗಾಗಲೇ ಕಾಂಗ್ರೆಸ್, ಜೆಡಿಎಸ್‍ನಿಂದ ಬಿಜೆಪಿಗೆ ಹೋಗಿರುವವರನ್ನು ಮೊದಲು ಚೆನ್ನಾಗಿ ನೋಡಿಕೊಳ್ಳಲಿ. ಆದರೆ ಅವರ ಪರಿಸ್ಥಿತಿ ಹೇಗಾಗಿದೆ ಎನ್ನುವುದನ್ನು ದಿನ ಬೆಳಗಾದರೆ ನೋಡುತ್ತಿದ್ದೇವೆ. ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ಜತೆಗೆ ಹೋಗಿದ್ದರೆ ಸಿಎಂ ಆಗಿ ಮುಂದುವರಿಯುತ್ತಿದ್ದೆ ಎಂದಿದ್ದು ಜಾತ್ಯಾತೀತ ನಾಯಕರಿಗೆ ಸಮಂಜಸವಲ್ಲ. ಉಪಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಒಳಒಪ್ಪಂದವೋ, ಹೊರ ಒಪ್ಪಂದವೋ ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದು ತಿಳಿಸಿದರು.
ಅಭ್ಯರ್ಥಿ ರಮೇಶ್‍ಬಾಬು ಮಾತನಾಡಿ, ಹಿಂದೆ ಪರಿಷತ್ ಸದಸ್ಯನಾಗಿ ತನಗೆ ಸಿಕ್ಕಿದ 15 ತಿಂಗಳ ಅವಧಿಯಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ. 6 ವರ್ಷದ ಪೂರ್ಣಾವಧಿ ಸಿಕ್ಕರೆ ಪದವೀಧರರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದರು.
ಶಾಸಕ ಕೆ.ವೈ.ನಂಜೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ, ಮಾಜಿ ಸಚಿವ ಕೆ.ಎ.ನಿಸಾರ್ ಅಹಮದ್, ಕೆಪಿಸಿಸಿ ಕಾರ್ಯದರ್ಶಿ ಗೋಪಾಲಕೃಷ್ಣ, ಕೆಪಿಸಿಸಿ ಒಬಿಸಿ ಉಪಾಧ್ಯಕ್ಷ ಎಸ್.ಮಂಜುನಾಥ್, ಎಸ್ಸಿ ಜಿಲ್ಲಾಧ್ಯಕ್ಷ ಜಯದೇವ್, ಎಸ್‍ಟಿ ಅಧ್ಯಕ್ಷ ನಾಗರಾಜ್, ಮಾವು ಮಂಡಳಿ ಮಾಜಿ ಅಧ್ಯಕ್ಷ ದಳಸನೂರು ಗೋಪಾಲಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್ ಇತರರಿದ್ದರು.