

ಮಂಗಳೂರು : ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ
ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ ಸಂಘದ ಸದಸ್ಯರ ಮತ್ತು ಸಿಬ್ಬಂದಿ ಮಕ್ಕಳಿಗೆ ಸ್ಥಾಪಕಾಧ್ಯಕ್ಷ ಕೆ. ಬಿ. ಜಯಪಾಲ ಶೆಟ್ಟಿ
ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ ನಗರದ ಉರ್ವ ಚರ್ಚ್‌ನ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ನಿಟ್ಟೆ ಡೀಮ್ಡ್ ಟು ಬಿ ಯುನಿವರ್ಸಿಟಿಯ ಮಾಜಿ ಉಪ ಕುಲಪತಿ ಡಾ.ಸತೀಶ್ ಕುಮಾರ್
ಭಂಡಾರಿ ಮಾತನಾಡಿ ‘ ಸಂಘದ ಸ್ಥಾಪಕಾಧ್ಯಕ್ಷರಾದ ದಿ.ಕೆ. ಬಿ. ಜಯಪಾಲ ಶೆಟ್ಟಿ ಅವರು ‘ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ತನ್ನ ಅನುಭವದ ಧಾರೆ ಎರೆದು ಕಟ್ಟಿ ಬೆಳೆಸಿದ್ದಾರೆ. ಸಂಘ ಇಂದು ದಾಖಲೆಯ ವ್ಯವಹಾರ ಹೊಂದಿ ರಾಜ್ಯದ ಅಗ್ರಗಣ್ಯ ಸಂಸ್ಥೆಯಾಗಿ ಮೂಡಿಬರಲು ಮೇಧಾವಿ ನಾಯಕತ್ವ ಗುಣವುಳ್ಳ ಸಂಘದ ಅಧ್ಯಕ್ಷ ಜೈರಾಜ್.ಬಿ. ರೈ ಮುಂತಾದವರು ಕಾರಣರಾಗಿದ್ದಾರೆ. ಹಿರಿಯರ ವ್ಯಕ್ತಿತ್ವಗಳಿಂದ ವಿದ್ಯಾರ್ಥಿಗಳು ಪ್ರಭಾವಿತರಾಗಿ ಪಠ್ಯೇತರ ವಿಷಯಗಳಲ್ಲೂ ಕುಶಲತೆ ಪಡೆದು ಔದ್ಯೋಗಿಕ ಬೆಳವಣಿಗೆ ಹೊಂದಬೇಕು ಎಂದರು.
ಸಂಘದ ಅಧ್ಯಕ್ಷ ಜೈರಾಜ್ ಬಿ. ರೈ ಮಾತನಾಡಿ ‘ ಸ್ಥಾಪಕಾಧ್ಯಕ್ಷ ದಿ. ಕೆ.ಬಿ. ಜಯಪಾಲ ಶೆಟ್ಟಿ ಅವರ ಹೆಸರು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಸಂಘವು ಕಳೆದ 7 ವರ್ಷಗಳಿಂದ ಸಿಬ್ಬಂದಿ ಮಕ್ಕಳಿಗೆ ಹಾಗೂ ಕಳೆದ 2 ವರ್ಷಗಳಿಂದ ಸಂಘದ ಸರ್ವ ಸದಸ್ಯರ ಮಕ್ಕಳಿಗೆ
ಪ್ರತಿಭಾ ಪುರಸ್ಕಾರ ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಈ ಪ್ರತಿಭಾ ಪುರಸ್ಕಾರವನ್ನು ಪದವಿ ಹಾಗೂ ವೃತ್ತಿಪರ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕೂಡ ವಿಸ್ತರಿಸಲು ಚಿಂತನೆ ನಡೆಸಲಾಗಿದೆ ಎಂದರು.
ಸಂಘದಲ್ಲಿ 25 ವರ್ಷ ಸೇವೆ ಪೂರೈಸಿದ ಹಿರಿಯ ವ್ಯವಸ್ಥಾಪಕ ದಿನೇಶ್ ರೈ ಜೆ.ಎನ್. ಇವರನ್ನು ಸನ್ಮಾನಿಸಲಾಯಿತು.
ಸಂಘದ ಸಿಬ್ಬಂದಿ ಮತ್ತು ಸದಸ್ಯರ ಒಟ್ಟು 64 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳಾದ ಅಭಿಶೇಕ್ ಶೆಟ್ಟಿ, ಸಮನ್ಯು ಎಸ್. ಶೆಟ್ಟಿ , ಭಾಗ್ಯಲಕ್ಷ್ಮಿ ಶೆಟ್ಟಿ ಅನಿಸಿಕೆಗಳನ್ನು ತಿಳಿಸಿದರು.
ಸಂಘದ ನಿರ್ದೇಶಕರಾದ ವಿಠಲ ಪಿ. ಶೆಟ್ಟಿ, ಎಂ.ರಾಮಯ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಕುಂಬ್ರ ದಯಾಕರ ಆಳ್ವ ,ಅರಿಯಡ್ಕ ಚಿಕ್ಕಪ್ಪ ನಾಕ್, ಪ್ರಸಾದ್ ಕೌಶಲ್ ಶೆಟ್ಟಿ, ಮಹಾ ಪ್ರಬಂಧಕ ಗಣೇಶ್ ಜಿ.ಕೆ. ಉಪಸ್ಥಿತರಿದ್ದರು. ಪಿ. ಬಿ. ದಿವಾಕರ ರೈ ವಂದಿಸಿದರು. ಧನಂಜಯ್ ಕುಮಾರ್ ಮತ್ತು ಅಕ್ಷತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.